ಸಂಪಾದಕೀಯ; ಶಾಂತಿ ಮಾತುಕತೆ ಆರಂಭಿಸಿ

Donald Trump
Published on

ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ 10 ದಿನಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಈಗ ಅಮೆರಿಕದ ಅಧಿಕೃತ ಪ್ರವೇಶದೊಂದಿಗೆ ಹೊಸ ತಿರುವು ಸಿಕ್ಕಿದೆ. ಇರಾನ್​ನ ಪರಮಾಣು ಮತ್ತು ಸೇನಾ ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗಳೊಂದಿಗೆ ಶುರುವಾದ ಈ ಸಂಘರ್ಷ, ಇಸ್ರೇಲ್ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಿಂದಾಗಿ ಉಲ್ಬಣಿಸಿತ್ತು. ಈಗ, ಇರಾನ್​ನ ಫೋಡೋ, ನಟಾಂಜ್ ಮತ್ತು ಇಸ್ಪಹಾನ್​ನಲ್ಲಿರುವ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ ನಡೆಸುವುದರೊಂದಿಗೆ ಈ ಸಂಘರ್ಷವೀಗ ಜಾಗತಿಕ ಮಟ್ಟದಲ್ಲಿ ಆತಂಕ ತಂದೊಡ್ಡಿದೆ. ಈ ಬೆಳವಣಿಗೆಯಿಂದ ವಿವಿಧ ದೇಶಗಳ ಮೇಲಾಗುವ ಪರಿಣಾಮಗಳು ಗಂಭೀರವಾಗಿದ್ದು, ಅಂತಾರಾಷ್ಟ್ರೀಯ ಸಮುದಾಯ ಈ ಸಂಕೀರ್ಣ ಸನ್ನಿವೇಶವನ್ನು ಎದುರಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಈಗ ಸಂಘರ್ಷ ನಡೆಯುತ್ತಿರುವ ಪ್ರದೇಶ ಬಹು ಹಿಂದಿನಿಂದಲೂ ಜಾಗತಿಕ ತೈಲ ಮಾರುಕಟ್ಟೆಯ ಕೇಂದ್ರಬಿಂದು. ಇರಾನ್​ನ ಹೊಮುಜ್ ಜಲಸಂಧಿಯಂತಹ ಪ್ರಮುಖ ತೈಲ ಮಾರ್ಗ ಮುಚ್ಚುವ ಭೀತಿ ಎದುರಾಗಿದ್ದು, ಇದರಿಂದ ಜಗತ್ತಿನಾದ್ಯಂತ ತೈಲ ಬೆಲೆಗಳು ಗಗನಕ್ಕೇರಬಹುದು. ಜಾಗತಿಕ ಆರ್ಥಿಕತೆಯ ಮೇಲೆ, ಅದರಲ್ಲೂ ವಿಶೇಷವಾಗಿ ತೈಲ ಆಮದು ಮಾಡಿಕೊಳ್ಳುವ ಭಾರತದಂತಹ ದೇಶಗಳ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಜಾಗತಿಕ ತೈಲ ಪೂರೈಕೆಯ ಸ್ಥಿರತೆಗಾಗಿ ಒಪೆಕ್ ಮತ್ತು ಇತರ ತೈಲ ಉತ್ಪಾದಕ ರಾಷ್ಟ್ರಗಳು ಸಹಕಾರ ನೀಡಬೇಕು. ಇದರಿಂದ ಆರ್ಥಿಕ ಬಿಕ್ಕಟ್ಟನ್ನು ತಡೆಯಬಹುದು.

ಸಂಘರ್ಷದಿಂದಾಗಿ ಇರಾನ್ ಮತ್ತು ಇಸ್ರೇಲ್​ನಲ್ಲಿ ಸಾಮಾನ್ಯ ಜನಜೀವನಕ್ಕೆ ಪ್ರತಿದಿನವೂ ತೊಂದರೆಯಾಗುತ್ತಿದೆ. ಜನರು ಊರು ಬಿಟ್ಟು ಹೋಗುತ್ತಿರುವ ದೃಶ್ಯಗಳು ಇರಾನ್​ನಲ್ಲಿ ಕಂಡುಬಂದಿವೆ. ಸಂಕಷ್ಟಕ್ಕೀಡಾದ ಜನರಿಗೆ ತಕ್ಷಣದ ಮಾನವೀಯ ನೆರವು ಒದಗಿಸುವುದು ಅಗತ್ಯ. ಆಶ್ರಯ, ಆಹಾರ, ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು.

ಯುದ್ಧದಲ್ಲಿ ಅಮೆರಿಕ ಪ್ರವೇಶ ಮಾಡಿರುವುದನ್ನು ಚೀನಾ, ರಷ್ಯಾ ಮುಂತಾದ ರಾಷ್ಟ್ರಗಳು ಖಂಡಿಸಿವೆ. ಇದರಿಂದ ಜಾಗತಿಕ ರಾಜಕೀಯ ಧ್ರುವೀಕರಣ ಮತ್ತಷ್ಟು ತೀವ್ರಗೊಳ್ಳಬಹುದು. ಬೇರೆ ರಾಷ್ಟ್ರಗಳೂ ಯುದ್ಧಕ್ಕೆ ಧುಮುಕುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗಾಗಲೇ ತುರ್ತು ಸಭೆ ಕರೆದಿದ್ದು, ಇದರಲ್ಲಿ ಎಲ್ಲ ರಾಷ್ಟ್ರಗಳು ಶಾಂತಿ ಮಾತುಕತೆಗೆ ಒತ್ತಾಯಿಸಬೇಕು. ಭಾರತದಂತಹ ತಟಸ್ಥ ರಾಷ್ಟ್ರಗಳು ಈ ಸಂಘರ್ಷವನ್ನು ಶಮನಗೊಳಿಸಲು ಸಕ್ರಿಯವಾಗಿ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಬೇಕು. ಇರಾನ್​ನ ಪರಮಾಣು ಕಾರ್ಯಕ್ರಮದ ಬಗ್ಗೆ ಆತಂಕವಿದ್ದರೂ, ಸಂಘರ್ಷಕ್ಕಿಂತ ರಾಜತಾಂತ್ರಿಕ ಮಾತುಕತೆಗಳು ಫಲ ನೀಡುತ್ತವೆ. 2015ರ ಜಂಟಿ ಸಮಗ್ರ ಕಾರ್ಯಯೋಜನೆ (ಜೆಸಿಪಿಒಎ) ಒಪ್ಪಂದಕ್ಕೆ ಮರುಚಾಲನೆ ನೀಡುವ ಪ್ರಯತ್ನ ನಡೆಯಬೇಕು. ಒಟ್ಟಾರೆ, ಈ ಸಂಘರ್ಷದಿಂದಾಗಿ ಪರಮಾಣು ಶಸ್ತ್ರಾಸ್ತ್ರಗಳ ಬಗೆಗಿನ ಜಾಗತಿಕ ಚರ್ಚೆಗೆ ಮತ್ತೆ ಚಾಲನೆ ದೊರೆತಂತಾಗಿದೆ. ಎಲ್ಲ ರಾಷ್ಟ್ರಗಳು ಈ ವಿಷಯದಲ್ಲಿ ಒಮ್ಮತಕ್ಕೆ ಬರಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net