

ಸಾಮಾನ್ಯವಾಗಿ, ಶ್ರೀಮಂತಿಕೆ ಎಂದರೆ ಚಿನ್ನ ಅಥವಾ ವಜ್ರಗಳು ಎನ್ನುವುದು ಬಹುತೇಕರ ಭಾವನೆ. ಆದರೆ, ಮುಂದಿನ ಪೀಳಿಗೆ ಒಂದು ಶ್ರೀಮಂತ ಜೀವನ ನಡೆಸಬೇಕು, ಅದು ಹೇಗಿರಬೇಕು? ಷೇರು ಮಾರುಕಟ್ಟೆ ಅಥವಾ ಬ್ಯಾಂಕಿನಲ್ಲಿರುವ ಹಣದ ಪ್ರಮಾಣವನ್ನು ಆಧರಿಸಿ ಇದನ್ನು ಅಳೆಯಲಾಗುವುದಿಲ್ಲ. ಬದಲಿಗೆ, ಶ್ರೀಮಂತ ಜೀವನ ಎಂದರೆ ಶುದ್ಧಗಾಳಿ, ನೀರು ಮತ್ತು ಪೋಷಕಾಂಶಭರಿತ ಆಹಾರ. ಇವೆಲ್ಲ ಸಾಧ್ಯವಾಗಬೇಕಾದರೆ, ಮಣ್ಣಿನಲ್ಲಿ ಸತ್ವವಿರಲೇ ಬೇಕು. ಪ್ರಪಂಚದಲ್ಲಿ ಸರಾಸರಿ 39 ಇಂಚುಗಳಷ್ಟು ಮೇಲ್ಮಣ್ಣಿದೆ.
ದಕ್ಷಿಣ ಭಾರತವು ಮಣ್ಣಿನ ಶ್ರೀಮಂತಿಕೆಯಿಂದ ಅನುಗ್ರಹಿತ ಭೂಮಿ ಎಂದು ಪರಿಣಿಸಲ್ಪಟ್ಟಿದೆ. ಈ ಕಾರಣದಿಂದಲೇ ಈ ಪ್ರದೇಶದಲ್ಲಿ 12 ಸಾವಿರ ವರ್ಷಗಳ ಕೃಷಿ ಇತಿಹಾಸವಿದೆ. ಪಶ್ಚಿಮಘಟ್ಟದ ಒಂದು ಹಿಡಿ ಮಣ್ಣನ್ನು ಎತ್ತಿಕೊಂಡರೆ, ಅದು ಜೀವಂತಿಕೆಯಿಂದ ಪುಟಿಯುವುದನ್ನು ನೋಡುತ್ತೀರಿ. ಮಣ್ಣು ಇರಬೇಕಾದದ್ದು ಹಾಗೆಯೇ. ಆದರೆ ಈಗ, ಚೆನ್ನೈಯಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಕಿಟಕಿಯಿಂದ ಹೊರಗೆ ನೋಡಿದರೆ, ಅಲ್ಲಲ್ಲಿ ಕೆಲವು ಹಸಿರು ತೇಪೆಗಳನ್ನು ಬಿಟ್ಟರೆ, ಭಾರತ ಕಂದುಬಣ್ಣದ ಮರುಭೂಮಿಯಂತೆ ತೋರುತ್ತದೆ.
ನಮ್ಮ ದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ನಮಗೆ ಸಿಗುವ ಸಾಮಾನ್ಯ ವಿವರಣೆ ಎಂದರೆ ರೈತರು ಸಾಲವನ್ನು ತೀರಿಸಲಾಗದೆ ಸತ್ತರು ಎಂಬುದಾಗಿದೆ. ಆದರೆ ನೆಲ ಫಲವತ್ತಾಗಿದ್ದು ಸಾಕಷ್ಟು ನೀರಿದ್ದರೆ, ಯಾವುದೇ ಪರಿಸ್ಥಿತಿ ಬಂದರೂ, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಇದೀಗ, ಮಣ್ಣು ಬಡವಾಗಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಇಂಥ ಸ್ಥಿತಿ ಏಕೆ ಸೃಷ್ಟಿಯಾಯಿತು ಎನ್ನುವುದೇ ಈಗಿನ ಪ್ರಶ್ನೆ.
ಸಾವಯವ ಸತ್ವ ಅಗತ್ಯ: ಸಾವಯವ ಸತ್ವವನ್ನು ನೀಡುವುದರಿಂದ ಮಾತ್ರ ಮಣ್ಣನ್ನು ಫಲವತ್ತಾಗಿಡಬಹುದು. ರಸಗೊಬ್ಬರಗಳನ್ನು ಹಾಕುವುದರಿಂದ ಮಣ್ಣು ಚೆನ್ನಾಗಿರುತ್ತದೆಂದು ನಾವು ಭಾವಿಸಿಕೊಂಡಿದ್ದೇವೆ. ನಾನು ಏನು ಹೇಳುತ್ತಿದ್ದೇನೆಂದು ಅರ್ಥಮಾಡಿಕೊಳ್ಳಲಾಗದವರು, ನಿಮ್ಮ ಮುಂದಿನ ಊಟದಲ್ಲಿ ಶೇಕಡ ತೊಂಭತ್ತರಷ್ಟು ಉಪ್ಪನ್ನು ಹಾಕಿಕೊಳ್ಳಿ ಮತ್ತು ಉಳಿದ ಹತ್ತರಷ್ಟು ತಿನ್ನಲು ಬಯಸುವುದನ್ನು ಇಟ್ಟುಕೊಳ್ಳಿ. ಆಗ ಈ ಮಣ್ಣಿಗೆ ಮತ್ತು ದೇಶಕ್ಕೆ ಏನು ಮಾಡುತ್ತಿದ್ದೀರಿ ಎನ್ನುವುದು ಅರ್ಥವಾಗುತ್ತದೆ.
ಯಾವುದೋ ಬೆಳೆ ತೆಗೆಯುವಾಗ- ಉದಾಹರಣೆಗೆ, ಒಂದು ಟನ್ ಕಬ್ಬು ಎಂದಿಟ್ಟುಕೊಳ್ಳೋಣ- ಒಂದು ಟನ್ ಮೇಲ್ಮಣ್ಣನ್ನು ಹೊರತೆಗೆಯುತ್ತಿದ್ದೀರಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಮತ್ತೆ ಸಾವಯವ ಸತ್ವವನ್ನು ಮಣ್ಣಿಗೆ ಸೇರಿಸಬೇಕು. ಇದನ್ನು ಮಾಡುವ ಏಕೈಕ ವಿಧಾನವೆಂದರೆ ಮರಗಳ ಎಲೆಗಳು ಅಥವಾ ಪ್ರಾಣಿಗಳ ತ್ಯಾಜ್ಯವನ್ನು ಹಾಕುವುದು. ಈಗ ಕೃಷಿಭೂಮಿಯಲ್ಲಿ ಪ್ರಾಣಿಗಳೇ ಇಲ್ಲ. ಏಕೆಂದರೆ ಅವೆಲ್ಲ ಜನರ ಆಹಾರಕ್ಕಾಗಿ ವಿದೇಶಗಳಿಗೆ ರಫ್ತಾಗುತ್ತಿವೆ! ಮತ್ತು ಮರಗಿಡಗಳು ಬಹಳ ಹಿಂದೆಯೇ ಹೋಗಿಬಿಟ್ಟಿವೆ. ಒಂದು ಟ್ರಾ್ಯಕ್ಟರ್ ಎಲ್ಲ ಕೆಲಸವನ್ನೂ ಮಾಡಿಬಿಡುತ್ತದೆ ಎಂದು ಜನರು ಭಾವಿಸಿಕೊಂಡಿದ್ದಾರೆ. ಒಂದು ಟ್ರಾ್ಯಕ್ಟರ್ ಮಣ್ಣನ್ನು ಉಳುತ್ತದೆ, ಆದರೆ ಅದು ಪ್ರಾಣಿಗಳು ಮತ್ತು ಮರಗಳಂತೆ ಮಣ್ಣನ್ನು ಫಲವತ್ತಾಗಿಸುವುದಿಲ್ಲ.
ಈ ಮರುಭೂಮೀಕರಣ ನಿಲ್ಲಿಸಬೇಕಾದರೆ ದೇಶದಲ್ಲಿರುವ ಮಣ್ಣನ್ನು ಮರಗಳ ನೆರಳಿಗೆ ತರಬೇಕು. ಜನಸಂಖ್ಯೆಯ ಒತ್ತಡವಿರುವುದರಿಂದ ಕಾಡುಗಳನ್ನು ಮತ್ತೆ ಸೃಷ್ಟಿಸುವ ಮಾತೇ ಇಲ್ಲ. ಅದನ್ನು ಮಾಡುವ ಏಕೈಕ ವಿಧಾನವೆಂದರೆ ಅದು ಕೃಷಿ- ಏಕೆಂದರೆ ಭಾರತದ ಬಹುತೇಕ ಭೂಮಿ ರೈತರ ಕೈಗಳಲ್ಲಿದೆ. ರೈತರಿಗೆ ಮರಗಳನ್ನು ನೆಡುವುದು ಲಾಭದಾಯಕವಾಗುವಂತಹ ಪ್ರಕ್ರಿಯೆಯನ್ನು ನಾವು ಸೃಷ್ಟಿಸಿದರೆ, ಅವರು ಈ ಮರಗಳನ್ನು ಮತ್ತೆ ನೆಡುತ್ತಾರೆ. ‘ಕಾವೇರಿ ಕೂಗು’ ಯೋಜನೆಯ ಪ್ರಸ್ತುತತೆ ಇರುವುದು ಇಲ್ಲಿಯೇ. ನಾನು ಕಂಡಂತೆ, ಬಹುತೇಕ ಪರಿಸರ ಯೋಜನೆಗಳೆಲ್ಲ ಸಿದ್ಧಾಂತಗಳನ್ನು ಹರಡುವಂತಹದಾಗಿವೆ. ಆದರೆ ಕಾವೇರಿ ಕೂಗು ದೃಢವಾದ ಆರ್ಥಿಕ ಹಿನ್ನೆಲೆಯನ್ನು ಹೊಂದಿರುವ ಪರಿಸರ ಯೋಜನೆಯಾಗಿದೆ. ಕಾವೇರಿ ಕೂಗು ಯೋಜನೆಯಲ್ಲಿ, ಮರಗಳು ಖಾಸಗಿ ಕೃಷಿಭೂಮಿಗಳಲ್ಲಿ ನೆಡಲ್ಪಡುತ್ತವೆ. ಈಗಾಗಲೇ ಕಾವೇರಿ ಜಲಾನಯನ ಪ್ರದೇಶದ 69,760 ರೈತರನ್ನು ಮರಬೇಸಾಯ ಕೈಗೊಳ್ಳುವಂತೆ ಮಾಡಿದ್ದೇವೆ, ಮತ್ತು ಅವರ ಆದಾಯ ಸುಮಾರು ಶೇಕಡ 300ರಿಂದ 800ರಷ್ಟು ಹೆಚ್ಚಾಗಿದೆ. ಮರಗಳ ಬಗ್ಗೆ ಕಾಳಜಿವಹಿಸುವುದು ರೈತರ ವಾಣಿಜ್ಯ ಆಸಕ್ತಿಯಾಗಿದೆ, ಹಾಗಾಗಿ ಅವರು ಸಹಜವಾಗಿಯೇ ಅವುಗಳನ್ನು ಬೆಳೆಯಲು ಬಿಡುತ್ತಾರೆ.
ಇದು ಪರಿಸರಸ್ನೇಹಿ ಪರಿಣಾಮವುಳ್ಳ ಆರ್ಥಿಕ ಯೋಜನೆಯಾಗಿದೆ- ಅದೇ ಅದರ ಕುರಿತಾದ ಮಹತ್ವದ ಸಂಗತಿಯಾಗಿದೆ. ಈ ಕಾರಣದಿಂದಲೇ ರೈತರಿಂದ ಹಿಡಿದು, ಅರಣ್ಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು, ಎಲ್ಲರೂ ಕಾವೇರಿ ಕೂಗು ಯೋಜನೆಯಲ್ಲಿ ಉತ್ಸಾಹ ಮತ್ತು ಹೊಣೆಗಾರಿಕೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಇದೊಂದು ಕ್ರಾಂತಿಕಾರಿ ನಡೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಮನಗಂಡಿದ್ದಾರೆ, ಮತ್ತು ಅವರು ಅದರ ಭಾಗವಾಗಿರಲು ಬಯಸುತ್ತಿದ್ದಾರೆ. ಕರೊನಾ ಮಹಾಮಾರಿಯೂ ನಮ್ಮ ಕೆಲಸದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಎಲ್ಲರ ಬೆಂಬಲದಿಂದ, ಸವಾಲಿನ ಪರಿಸ್ಥಿತಿಯಲ್ಲೂ 1.12 ಕೋಟಿ ಸಸಿಗಳು ಸಿದ್ಧವಾಗಿ, ರೈತರಿಗೆ ವಿತರಿಸಲು ಶಕ್ಯವಾಯಿತು.
ಆಹಾರದ ಭದ್ರತೆಯನ್ನು ಖಾತ್ರಿಗೊಳಿಸುವುದು: ಯಾವುದೇ ದೊಡ್ಡಪ್ರಮಾಣದ ಆಮದನ್ನು ಅವಲಂಬಿಸದೆ 1.4 ದಶಲಕ್ಷ ಜನರಿಗೆ ಆಹಾರವನ್ನು ನೀಡುತ್ತಿದ್ದೇವೆ ಎನ್ನುವುದು ಈ ದೇಶದ ಮಹಾನ್ ಸಾಧನೆಗಳಲ್ಲಿ ಒಂದಾಗಿದೆ. ಈಗಿನ ಮಹಾಮಾರಿಯ ಸಂದರ್ಭದಲ್ಲೂ ನಮ್ಮಲ್ಲಿ ಎಲ್ಲರಿಗೂ ಸಾಕಾಗುವಷ್ಟು ಆಹಾರವಿದೆ. ನಮ್ಮ ರೈತರು ಯಾವುದೇ ದೊಡ್ಡ ತಂತ್ರಜ್ಞಾನ ಅಥವಾ ವಿಜ್ಞಾನವಿಲ್ಲದೆ, ಕೇವಲ ಸಾಂಪ್ರದಾಯಿಕ ಜ್ಞಾನದಿಂದ ಅತ್ಯದ್ಭುತವಾದ ಕಾರ್ಯವೆಸಗಿದ್ದಾರೆ. ನಾವು ಕೆಲವು ಸಮೀಕ್ಷೆಗಳನ್ನು ಮಾಡಿದಾಗ ನಮಗೆ ಕಂಡುಬಂದ ದುರದೃಷ್ಟಕರ ಸಂಗತಿಯೆಂದರೆ, ಶೇ. 2ರಷ್ಟು ರೈತರಿಗೂ ತಮ್ಮ ಮಕ್ಕಳು ಕೃಷಿ ಕೈಗೊಳ್ಳುವುದು
ಬೇಕಾಗಿಲ್ಲ. ಇನ್ನೊಂದು ಇಪ್ಪತೆôದು ವರ್ಷಗಳಲ್ಲಿ ಈ ಪೀಳಿಗೆಯ ನಂತರ, ನಮಗೆ ಬೇಕಾದ ಆಹಾರವನ್ನು ಬೆಳೆಯುವವರು ಯಾರು? ಜನಸಂಖ್ಯೆಯ ಶೇ.65ರಷ್ಟು ಜನರಿಗೆ ಮಣ್ಣನ್ನು ಆಹಾರವನ್ನಾಗಿಸುವ ಈ ಪವಾಡವನ್ನು ಮಾಡುವುದು ಹೇಗೆಂದು ಗೊತ್ತಿದೆ. ಇದೇನೂ ಒಂದು ಸರಳ ವಿಚಾರವಲ್ಲ. ನಾನು ಯಾರಿಗಾದರೂ ಒಂದು ಹತ್ತು ಎಕರೆ ಫಲವತ್ತಾದ ಭೂಮಿಯನ್ನು ಕೊಟ್ಟರೆ- ಅವರು ಒಬ್ಬ ಎಂಬಿಎ ಅಥವಾ ಕೃಷಿ ಪದವೀಧರನಾಗಿರಬಹುದು ಮತ್ತು ಅವರಿಗೆ ಹತ್ತು ಬಗೆಯ ಬೆಳೆಗಳನ್ನು ಬೆಳೆಯಲು ಹೇಳಿದರೆ, ಅದೊಂದು ದೊಡ್ಡ ವಿಫಲತೆಯಾಗುತ್ತದೆ. ರೈತರು ಕುಪೋಷಿತರಂತೆ ಕಂಡಮಾತ್ರಕ್ಕೆ ಜನರು ಕೃಷಿಯನ್ನು ಗಂಭೀರ ವಿಷಯವಲ್ಲ ಎಂದು ಪರಿಗಣಿಸಿದ್ದಾರೆ. ವ್ಯವಸಾಯವು ಕೃಷಿಕರಿಗೆ ಲಾಭದಾಯಕವಾಗದಿದ್ದರೆ, ನಾವು ಆ ಜ್ಞಾನವನ್ನು ಕಳೆದುಕೊಳ್ಳಬಹುದು. ಶಿಕ್ಷಿತರು ಮತ್ತು ಅವರ ಮಕ್ಕಳು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕಾದ ಸಮಯ ಬಂದಿದೆ. ಏಕೆಂದರೆ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಅದನ್ನು ಲಾಭದಾಯಕವಾಗಿ ಮತ್ತು ಸುಸ್ಥಿರವಾಗಿ ಮಾಡಬಹುದು.
ಈ ಬದಲಾವಣೆಗಳನ್ನು ಕೃಷಿಯಲ್ಲಿ ತಂದರೆ, ಮಣ್ಣು, ನೀರು, ಗಾಳಿ ಮತ್ತು ಆರೋಗ್ಯವಂತ ಜೀವನವನ್ನು ನಡೆಸಲು ಬೇಕಾದ ಎಲ್ಲವನ್ನೂ ಸರಿಪಡಿಸಬಹುದು. ಶ್ರೀಮಂತ ಮಣ್ಣು ಮತ್ತು ನೀರಿನಿಂದ ಕೂಡಿದ ಪರಿಸರವೇ ನಮ್ಮ ಮಕ್ಕಳಿಗೆ ಬಿಟ್ಟುಹೋಗಬಹುದಾದ ಮಹಾನ್ ಸಾಧನೆ. ಮಣ್ಣಿನ ಗುಣಮಟ್ಟ ಸಂರಕ್ಷಿಸಿದರೆ ಭೂಮಿಯ ಗುಣಮಟ್ಟ ಮತ್ತು ಜೀವನದ ಗುಣಮಟ್ಟ ಸುಸ್ಥಿರಗೊಳ್ಳುತ್ತದೆ.
ಮುಂದಿನ ದಾರಿ: ಕಾನ್ಷಿಯಸ್ ಪ್ಲಾ್ಯನೆಟ್ ಅಥವಾ ಪ್ರಜ್ಞಾಪೂರ್ಣ ಪ್ರಪಂಚ ಎನ್ನುವುದು, ನಮ್ಮ ಮಣ್ಣು ಮತ್ತು ಭೂಮಿಯನ್ನು ಕುರಿತು ಪ್ರಜ್ಞಾಪೂರ್ಣ ಮನೋಭಾವವನ್ನು ಪ್ರೇರೇಪಿಸುವ ಜಾಗತಿಕ ಆಂದೋಲನ. ಈ ರ್ಯಾಲಿಯ ಭಾಗವಾಗಿ 300 ಕೋಟಿ ನಾಗರಿಕರ ಬೆಂಬಲವನ್ನು ಗಳಿಸಲು 24 ದೇಶಗಳ ಮೂಲಕ 30,000 ಕಿ.ಮೀ. ಮೋಟರ್ ಸೈಕಲ್ ಪ್ರಯಾಣ ಕೈಗೊಳ್ಳಲಿದ್ದೇವೆ. ತಮ್ಮ ದೇಶದ ಪ್ರಜೆಗಳು ‘ಮಣ್ಣು ಮತ್ತು ಪರಿಸರವನ್ನು ಪುನಃಶ್ಚೇತನಗೊಳಿಸುವ ಕಾಯಿದೆಯೊಂದು ಜಾರಿಯಾಗಬೇಕು’ ಎಂದು ಬಯಸುತ್ತಿದ್ದಾರೆ ಎಂಬುದನ್ನು 192 ಸಂಯುಕ್ತ ರಾಷ್ಟ್ರಗಳ ಸರ್ಕಾರಗಳಿಗೆ ತೋರಿಸುವ ಗುರಿಯನ್ನು ಈ ಆಂದೋಲನ ಹೊಂದಿದೆ. ಈ ಬೈಕ್ ರ್ಯಾಲಿ, ಲಂಡನ್ ನಗರದಿಂದ ಹೊರಟು ಕಾವೇರಿ ಕೂಗು ಯೋಜನೆಯನ್ನು ಪ್ರಾರಂಭಿಸಿದ ದಕ್ಷಿಣ ಭಾರತದವರೆಗೆ ನಡೆಯಲಿದೆ. ಕಾವೇರಿ ಕೂಗು ಯೋಜನೆ 1.25 ಲಕ್ಷ ರೈತರಿಗೆ ಮಣ್ಣು ಮತ್ತು ನೀರನ್ನು ಪುನಃಶ್ಚೇತನಗೊಳಿಸಲು 62 ದಶಲಕ್ಷ ಮರಗಳನ್ನು ನೆಡುವಲ್ಲಿ ಬೆಂಬಲ ನೀಡುತ್ತಿದೆ.
ನಮ್ಮ ಬಳಿ ಎಷ್ಟೇ ಸಂಪತ್ತು, ಶಿಕ್ಷಣ ಮತ್ತು ಹಣವಿದ್ದರೂ, ಮಣ್ಣು ಮತ್ತು ನೀರನ್ನು ಪುನರುಜ್ಜೀವನಗೊಳಿಸದಿದ್ದರೆ ನಮ್ಮ ಮಕ್ಕಳು ಚೆನ್ನಾಗಿ ಜೀವಿಸಲಾರರು. ಪ್ರಜ್ಞಾಪೂರ್ಣ ಪ್ರಪಂಚವೇ ಮುಂದಿರುವ ಏಕೈಕ ಮಾರ್ಗ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.www.isha.sadhguru.org)