ಕೃತಾರ್ಥನಾಗುವುದೊಂದೇ ಮಾನವನ ಸಮಚಿತ್ತದ ಬದುಕಿಗೆ ಇರುವ ರಹದಾರಿ...

sdfsdfsdfsdfsdf
Published on
|ಡ್ಯಾನಿ ಪಿರೇರಾ, ಹಳ್ಳಿಮೈಸೂರು

ಆ ರಾಜನಿಗೆ ತನ್ನ ಮಗಳೊಬ್ಬಳನ್ನು ಹೊರತುಪಡಿಸಿದರೆ ಆತನ ಮೋಹದ ವಸ್ತುವೆಂದರೆ ಚಿನ್ನ ಮಾತ್ರ. ತಾನು ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನ ಹೊಂದಿರುವ ವ್ಯಕ್ತಿಯಾಗಬೇಕೆಂಬುದು ಆತನ ಆಸೆ. ರಾಜ ಭಗವಂತನಲ್ಲಿ ಮೊರೆ ಇಟ್ಟು, ತಾನು ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ಪ್ರಾರ್ಥಿಸಿದ. ಭಗವಂತ ಅವನ ಬೇಡಿಕೆಯನ್ನು ಮನ್ನಿಸಿ ‘ನಾಳೆಯಿಂದ ನೀನು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ’ ಎಂದು ವರಕೊಟ್ಟ. ಆ ರಾತ್ರಿ ರಾಜನಿಗೆ ನಿದ್ದೆ ಬರಲಿಲ್ಲ, ಬೆಳಗ್ಗೆ ಬೇಗ ಎದ್ದು ಒಂದು ಕುರ್ಚಿಯ ಮೇಲೆ ಕೈಯಿಟ್ಟ. ಅದು ಕೂಡಲೇ ಚಿನ್ನವಾಯಿತು. ಆತನ ಆನಂದಕ್ಕೆ ಪಾರವೇ ಇರಲಿಲ್ಲ.

ಮತ್ತಷ್ಟು ಉತ್ತೇಜಿತನಾಗಿ ಮೇಜೊಂದನ್ನು ರ್ಸ³ಸಿದ. ಒಡನೇ ಅದು ಚಿನ್ನವಾದಾಗ, ರಾಜ ಹುಚ್ಚನಂತೆ ಉದ್ಯಾನದಲ್ಲೆಲ್ಲ ಓಡಾಡಿ ಅಲ್ಲಿನ ಮರಗಿಡಗಳನ್ನು ರ್ಸ³ಸಿ ಅದರ ಹೂವು, ಎಲೆ, ರೆಂಬೆಗಳು, ಹೂ ಕುಂಡಗಳಿಗೆಲ್ಲ ಕೈ ಸೋಕಿಸಿ, ಅವು ಚಿನ್ನವಾಗಿ ಹೊಳೆಯುವಂತೆ ಮಾಡಿದ. ಅರಿವಿಲ್ಲದೇ ಅದಾಗಲೇ ಅವನ ತೊಟ್ಟ ಬಟ್ಟೆಗಳು ಚಿನ್ನವಾಗಿ ಮಾರ್ಪಟ್ಟು ಅವು ಹೊರಲಾರದಷ್ಟು ಭಾರವಾದವು. ಆತ ಹಸಿವು, ಬಾಯಾರಿಕೆಯಿಂದ ಬಳಲಿದ. ಸೇವಕ ತಂದಿಟ್ಟ ಆಹಾರವನ್ನು ರಾಜ ತಿನ್ನುವಾಗ ಅದೂ ಬಂಗಾರವಾಗಿತ್ತು. ಮಾತ್ರವಲ್ಲ, ನೀರಿನ ಲೋಟ, ಅದರೊಳಗಿನ ನೀರು ಅವನ ಕೈ ಸೋಕಿದೊಡನೆ ಬಂಗಾರವಾಗಿ ಮಾರ್ಪಟ್ಟಿತು. ಆತ ತಿನ್ನಲಾರದೆ, ಕುಡಿಯಲಾರದೇ ನಿತ್ರಾಣನಾದ. ತನ್ನ ದುರಾಸೆಗೆ ಸಂಕಟ ಪಟ್ಟು ಅಳುತ್ತಿದ್ದ ರಾಜನ ಬಳಿ ಬಂದ ಅವನ ಮಗಳು ತಂದೆಯ ತೊಡೆಯೇರಿ ಕಣ್ಣೀರನ್ನು ಒರೆಸುವಾಗ ರಾಜ ಮಗಳನ್ನು ಎದೆಗಪ್ಪಿಕೊಂಡ. ಒಡನೆಯೇ ಆಗಬಾರದ್ದು ಆಗಿ ಹೋಗಿತ್ತು. ಮಗಳು ಚಿನ್ನದ ಮೂರ್ತಿಯಾಗಿದ್ದಳು. ರಾಜ ತಲೆ ಚಚ್ಚಿಕೊಂಡು ಗೋಳಾಡಿದ. ಈಗ ಅವನ ಹೀನಸ್ಥಿತಿಗೆ ದಯೆ ತೋರಬೇಕಾದದ್ದು ಭಗವಂತ ಮಾತ್ರ. ಭಗವಂತ ಕೃಪೆ ತೋರಿ ರಾಜನಿಗೆ ದರ್ಶನ ಕೊಟ್ಟ.

ರಾಜ ದೀನನಾಗಿ- ‘ಭಗವಂತ ನಿನ್ನ ವರದಾನವನ್ನು ವಾಪಸ್ ಪಡೆದು ನನ್ನನ್ನು ಉಳಿಸು’ ಎಂದು ಆರ್ತನಾಗಿ ಬೇಡಿದ. ಭಗವಂತ ಕೇಳಿದ, ‘ನಿನಗೆ ಬೇಕಾಗಿರುವುದು ಈಗ ನೀರೋ ಅಥವಾ ಬಂಗಾರವೋ?’ ಎಂದಾಗ ರಾಜ ಮನುಷ್ಯನಿಗೆ ‘ಬೇಕಾಗಿರುವುದು ತಿನಲು ಒಂದಷ್ಟು ಆಹಾರ, ಕುಡಿಯಲು ನೀರು’ ಎಂದು ದೀನನಾಗಿ ಹೇಳಿದ. ಎಷ್ಟಾದರೂ ಭಗವಂತ ಕರುಣಾಸಿಂಧುವಲ್ಲವೇ? ಭಗವಂತ ರಾಜನಿಗೆ, ‘ಚಿನ್ನವಾಗಿರುವ ವಸ್ತುಗಳ ಮೇಲೆ ಈ ಜಲವನ್ನು ಪ್ರೋಕ್ಷಣೆ ಮಾಡು’ ಎಂದು ನೀರು ಕೊಟ್ಟ. ಅದರಂತೆ ರಾಜ ಮಾಡಿದ. ಕೂಡಲೇ ರಾಜಕುಮಾರಿ ಸೇರಿ ಉಳಿದೆಲ್ಲವೂ ಚಿನ್ನದ ಸ್ಥಿತಿ ಕಳೆದು ಸಾಮಾನ್ಯ ಸ್ಥಿತಿಗೆ ಬಂದವು. ಹೌದು, ಮನುಷ್ಯನ ಆಸೆಗೆ ಮಿತಿ ಎಲ್ಲಿದೆ?! ಆಸೆಗಳು ಅಂಕೆಯಲ್ಲಿ ಇಲ್ಲದೇ ಹೋದಾಗ ಮನುಷ್ಯ ಬೇಕು ಬೇಕೆಂಬ ಪ್ರವಾಹದಲ್ಲಿ ಕೊಚ್ಚಿ ಹೋಗುವುದು ನಿಶ್ಚಿತ. ಅದು ಹಿಂದಿರುಗಲಾಗದ ಸೆಳೆತ. ಆದರೆ ಭಗವಂತ ಕೊಟ್ಟದ್ದಷ್ಟನ್ನು ಪಡೆದು ಪ್ರಸಾದ ವೆಂದು ಭಾವಿಸಿ, ಕೃತಾರ್ಥನಾಗುವುದೊಂದೇ ಮಾನವನ ಸಮಚಿತ್ತದ ಬದುಕಿಗೆ ಇರುವ ರಹದಾರಿ. ಸುಖ, ಸಂತೋಷಕ್ಕೆ ಇನ್ನಾವುದೇ ಮಾರ್ಗಗಳಿಲ್ಲ, ಅಲ್ಲವೆ?

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net