

ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಎಂಪ್ಲಾಯ್ಮೆಂಟ್ ಲಿಂಕ್ಡ್ ಇನ್ಸೆಂಟಿವ್ (ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದೆ. ಇದು ದೇಶದ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ. ಇದರಡಿ ಸುಮಾರು 1.92 ಕೋಟಿ ಯುವಕರಿಗೆ, ವಿಶೇಷವಾಗಿ ಖಾಸಗಿ ಉದ್ಯಮಗಳಲ್ಲಿ ಮೊದಲ ಬಾರಿಗೆ ಕೆಲಸಕ್ಕೆ ಸೇರುವವರಿಗೆ, ಆರ್ಥಿಕ ಸಹಾಯ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಜೊತೆಗೆ, ಉದ್ಯೋಗದಾತ ಕಂಪನಿಗಳಿಗೆ ಆರ್ಥಿಕ ಉತ್ತೇಜನವನ್ನು ನೀಡುವ ಮೂಲಕ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಉದ್ದೇಶವೂ ಈ ಯೋಜನೆಯಲ್ಲಿದೆ. ದೇಶದಲ್ಲಿ ಯುವಜನರ ನಿರುದ್ಯೋಗ ದರ ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಏರಿರುವ ಹಿನ್ನೆಲೆಯಲ್ಲಿ ಈ ಉಪಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಗುರಿ ಹೊಂದಿರುವ ಈ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ. ಆದರೆ ಇದರ ಯಶಸ್ಸಿಗೆ ಕೇವಲ ಆರ್ಥಿಕ ಉತ್ತೇಜನ ಸಾಲದು. ಯುವ ಜನತೆಗೆ ಆಧುನಿಕ ಉದ್ಯೋಗ ಮಾರುಕಟ್ಟೆ ಅಗತ್ಯಗಳಿಗೆ ತಕ್ಕಂತೆ ಕೌಶಲ ತರಬೇತಿಯನ್ನು ಒದಗಿಸುವುದು ಅತ್ಯಗತ್ಯ. ತಂತ್ರಜ್ಞಾನ, ಉತ್ಪಾದನೆ, ಸೇವಾ ವಲಯ ಮತ್ತು ಡಿಜಿಟಲ್ ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ಯುವಕರಿಗೆ ಸೂಕ್ತ ತರಬೇತಿಯಿಲ್ಲದಿದ್ದರೆ, ಈ ಯೋಜನೆಯ ಉದ್ದೇಶಗಳು ಪೂರ್ಣಗೊಳ್ಳದಿರಬಹುದು. ಅದೇ ರೀತಿ, ಖಾಸಗಿ ಉದ್ಯಮಗಳ ಸ್ಥಾಪನೆ ಮತ್ತು ವಿಸ್ತರಣೆಯೂ ಈ ಯೋಜನೆಯ ಯಶಸ್ಸಿಗೆ ಪ್ರಮುಖವಾಗಿದೆ. ಭಾರತದಲ್ಲಿ ಖಾಸಗಿ ವಲಯವೇ ಉದ್ಯೋಗ ಸೃಷ್ಟಿಯ ಪ್ರಮುಖ ಕ್ಷೇತ್ರ. ಆದರೆ, ಈ ಕಂಪನಿಗಳಿಗೆ ವ್ಯಾಪಾರ ಸುಗಮಗೊಳಿಸುವ ಯೋಜನೆಗಳು, ತೆರಿಗೆ ಸೌಲಭ್ಯಗಳು, ಮೂಲಸೌಕರ್ಯ ಬೆಂಬಲ, ಆರ್ಥಿಕ ಸ್ಥಿರತೆ ಇದ್ದಾಗ ಮಾತ್ರ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯ.
ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವುದು ಈ ಯೋಜನೆಯ ಮತ್ತೊಂದು ಸವಾಲು. ಯುವಜನರ ಗಣನೀಯ ಸಂಖ್ಯೆ ಗ್ರಾಮೀಣ ಭಾಗದಲ್ಲಿದೆ. ಈ ಪ್ರದೇಶಗಳಲ್ಲಿ ಕೌಶಲ ತರಬೇತಿ ಕೇಂದ್ರಗಳು ಮತ್ತು ಉದ್ಯಮ ಸ್ಥಾಪನೆಗೆ ಸೂಕ್ತ ವಾತಾವರಣ ಕಲ್ಪಿಸುವುದು ಅಗತ್ಯ. ಇಎಲ್ಐ ಯೋಜನೆ ಈ ದಿಕ್ಕಿನಲ್ಲಿ ಕೆಲಸ ಮಾಡದಿದ್ದರೆ, ಉದ್ಯೋಗಾವಕಾಶಗಳು ನಗರ ಕೇಂದ್ರಿತವಾಗಿಯೇ ಉಳಿಯುತ್ತವೆ. ಇದರಿಂದ ಗ್ರಾಮೀಣ ಯುವಕರಿಗೆ ಪೂರ್ಣ ಪ್ರಯೋಜನ ಸಿಗುವುದಿಲ್ಲ. ಜೊತೆಗೆ, ಈ ಯೋಜನೆಯ ಜಾರಿಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಆರ್ಥಿಕ ಉತ್ತೇಜನಗಳು ಸರಿಯಾದ ಉದ್ಯೋಗದಾತ ಕಂಪನಿಗಳಿಗೆ ಮತ್ತು ಯುವಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಹಿಂದಿನ ಕೆಲವು ಯೋಜನೆಗಳಲ್ಲಿದ್ದಂತೆ ತಾಂತ್ರಿಕ ತೊಡಕು, ದುರ್ಬಳಕೆ, ಅಸಮರ್ಪಕ ಜಾರಿ ಮುಂತಾದ ಸಮಸ್ಯೆ ಕಂಡುಬಂದರೆ ಉದ್ದೇಶ ವಿಫಲವಾಗುವ ಸಾಧ್ಯತೆಯಿದೆ.
ಇಎಲ್ಐ ಯೋಜನೆಯ ಯಶಸ್ಸು ಕೇವಲ ಉದ್ಯೋಗಸೃಷ್ಟಿಯ ಮೇಲೆ ಮಾತ್ರವಲ್ಲ, ಈ ಉದ್ಯೋಗಗಳ ಗುಣಮಟ್ಟದ ಮೇಲೂ ಅವಲಂಬಿತವಾಗಿದೆ. ಕಡಿಮೆ ವೇತನದ, ಅಸ್ಥಿರ, ತಾತ್ಕಾಲಿಕ ಉದ್ಯೋಗಗಳಿಂದ ಯುವಜನರಿಗೆ ಯಾವ ಪ್ರಯೋ ಜನವೂ ಇಲ್ಲ. ಗುಣಮಟ್ಟದ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ನೀಡಬೇಕು. ಕೌಶಲ ತರಬೇತಿಯೂ ಆಧುನಿಕ ಉದ್ಯಮದ ಅಗತ್ಯಗಳಿಗೆ ಹೊಂದಿಕೆಯಾಗಬೇಕು.