

ಸುಪ್ರಸಿದ್ಧ ತೀರ್ಥಕ್ಷೇತ್ರ ಆಂಧ್ರಪ್ರದೇಶದ ತಿರುಪತಿಯಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಸರ್ವ ದರ್ಶನ ಟಿಕೆಟ್ ಪಡೆಯಲು ಭಕ್ತರು ಬುಧವಾರ ಸಾಲುಗಟ್ಟಿ ನಿಂತಾಗ ಉಂಟಾದ ನೂಕುನುಗ್ಗಲು ಹಾಗೂ ಕಾಲ್ತುಳಿತದ ಕಹಿಘಟನೆಯಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿರುವುದು ತೀವ್ರ ನೋವಿನ ಸಂಗತಿ.
ಘಟನೆಯಲ್ಲಿ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಿರುಪತಿ ವೆಂಕಟರಮಣನ ದರ್ಶನ ಪಡೆಯಲು ಸಾಮಾನ್ಯವಾಗಿ ಜನಸಂದಣಿ ದೊಡ್ಡಪ್ರಮಾಣದಲ್ಲೇ ಇರುತ್ತದೆ. ಆದರೆ, ಹಿಂದೆಂದೂ ಇಂಥ ಅಹಿತಕರ ಘಟನೆ ಸಂಭವಿಸಿರಲಿಲ್ಲ. ಕಾಲ್ತುಳಿತ ಹಾಗೂ ಆರು ಜನರ ಸಾವಿನ ದುರ್ಘಟನೆಯಿಂದ ಭಕ್ತರು ಆಘಾತಕ್ಕೆ ಒಳಗಾಗಿರುವುದಂತೂ ಹೌದು. ಟಿಕೆಟ್ ಪಡೆಯಲು ಸಾವಿರಾರು ಜನರು ಸರದಿ ಸಾಲಿನಲ್ಲಿ ನಿಂತಿದ್ದರೂ, ಸೂಕ್ತ ಸುರಕ್ಷಾ ಕ್ರಮ ಏಕೆ ಕೈಗೊಳ್ಳಲಿಲ್ಲ, ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಏಕೆ ನಿಯೋಜಿಸಲಿಲ್ಲ? ಎಂಬ ಪ್ರಶ್ನೆಗೆ ಟಿಟಿಡಿ ಉತ್ತರಿಸಬೇಕಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದು, ಮೃತರ ಕುಟುಂಬದವರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಟಿಟಿಡಿ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ತಿರುಪತಿಯ ಘಟನೆಯಿಂದ ಟಿಟಿಡಿ ಸೇರಿದಂತೆ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು ಎಚ್ಚೆತ್ತುಕೊಳ್ಳಬೇಕಿದೆ. ದೇವಸ್ಥಾನಗಳು ನಂಬಿಕೆ, ಶ್ರದ್ಧೆ, ಭಕ್ತಿಯ ತಾಣಗಳು. ದೇವರ ದರ್ಶನ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಕಳೆಯುವ ಒಂದಿಷ್ಟು ಕ್ಷಣಗಳಿಂದ ಜನರು ಲೌಕಿಕ ಒತ್ತಡ, ಸಂಕಷ್ಟಗಳನ್ನು ಮರೆಯುತ್ತಾರೆ ಮತ್ತು ಮುಂದಿನ ದಿನಗಳಿಗಾಗಿ ಜೀವನೋತ್ಸಾಹ ತುಂಬಿಕೊಂಡು ಹೋಗುತ್ತಾರೆ.
ಹಾಗಾಗಿ, ಇಂಥ ಪವಿತ್ರ ಸ್ಥಳಗಳಲ್ಲಿ ಮರಣದ ಕರಾಳಛಾಯೆ ಬೀಳಬಾರದು. ಅಲ್ಲದೆ, ದೇವಸ್ಥಾನಗಳಲ್ಲಿ ವಿಶೇಷ ಸಂದರ್ಭಗಳು, ಉತ್ಸವಗಳು, ಜಾತ್ರೆ ಹಾಗೂ ಇನ್ನಿತರ ಧಾರ್ವಿುಕ, ಆಧ್ಯಾತ್ಮಿಕ ಸಮಾರಂಭಗಳು ನಡೆಯುವಾಗ ಸಾವಿರಾರು, ಇನ್ನು ಕೆಲವೆಡೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲಿ ಭಕ್ತರ ಸುರಕ್ಷೆ ಮತ್ತು ಅವರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುವುದು ದೇವಸ್ಥಾನ ಆಡಳಿತ ಮಂಡಳಿಗಳ ಮೊದಲ ಆದ್ಯತೆಯಾಗಬೇಕು.
ಹಿರಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತ್ಯೇಕ ಸಾಲು, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಪ್ರಾಥಮಿಕ ಚಿಕಿತ್ಸೆಗಳಂಥ ಸೌಲಭ್ಯಗಳನ್ನು ಒದಗಿಸಿರುವ ಬಗ್ಗೆ ಉತ್ಸವ, ಸಮಾರಂಭಗಳ ಮುಂಚೆಯೇ ಆಡಳಿತ ಮಂಡಳಿಗಳು ಖಾತ್ರಿಪಡಿಸಿಕೊಳ್ಳಬೇಕು. ಸರದಿಯಲ್ಲಿ ವ್ಯವಸ್ಥಿತವಾಗಿ ಸಾಗಲು, ಗೊಂದಲಗಳು ಉದ್ಭವಿಸದಂತೆ ನೋಡಿಕೊಳ್ಳಲು ಪೊಲೀಸರ ನೆರವು ಪಡೆಯಬೇಕು.
ಜತೆಗೆ ದೇವಸ್ಥಾನಗಳ ಸ್ವಯಂಸೇವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಭಕ್ತರು ಕೂಡ ಇಂಥ ಸಂದರ್ಭಗಳಲ್ಲಿ ನೀಡಲಾಗುವ ಸೂಚನೆಗಳಂತೆ ನಡೆದುಕೊಳ್ಳಬೇಕು, ನಿಯಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಜೀವನ ಅಮೂಲ್ಯವಾದದ್ದು. ಬದುಕಿನ ಕಷ್ಟಗಳು ಕಳೆಯಲಿ ಎಂದು ಜನರು ದೇವಸ್ಥಾನಗಳಿಗೆ ಬರುತ್ತಾರೆ. ಆದರೆ, ಇಂಥ ತಾಣಗಳಲ್ಲೇ ಅವರ ಜೀವ ಅಪಾಯಕ್ಕೆ ಸಿಲುಕಬಾರದು. ಭವಿಷ್ಯದ ದಿನಗಳಲ್ಲಿ ತಿರುಪತಿ ಮಾದರಿಯ ಘಟನೆ ಮರುಕಳಿಸದಂತೆ ಎಲ್ಲ ಬಗೆಯ ಎಚ್ಚರಿಕೆ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳವುದು ಅಗತ್ಯ.