ಸಂಪಾದಕೀಯ; ಸುರಕ್ಷತಾ ಶಿಷ್ಟಾಚಾರ ಪಾಲಿಸಿ

Editorial; Safety Etiquette Policy
Editorial; Safety Etiquette Policy
Published on
ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ 20 ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಅಂದರೆ, ಇಪ್ಪತ್ತು ಕುಟುಂಬಗಳ ಆಧಾರಸ್ತಂಭಗಳು ಕುಸಿದು ಬಿದ್ದಿವೆ. ಹಬ್ಬ-ಹರಿದಿನಗಳಲ್ಲಿ ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳು, ಅದನ್ನು ತಯಾರಿಸುವ ಬಡ ಕಾರ್ಮಿಕರ ಪಾಲಿಗೆ ಮಾತ್ರ ಸದ್ದಿಲ್ಲದೆ ಮೃತ್ಯುಪಾಶವಾಗಿ ಪರಿಣಮಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯ.
ಪಟಾಕಿ ಉದ್ಯಮದಲ್ಲಿ ಇಂತಹ ಅಪಘಾತಗಳು ಸಂಭವಿಸುವುದು ಇದೇ ಮೊದಲೇನಲ್ಲ. ಪ್ರತಿ ವರ್ಷವೂ ವಿರುಧುನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟದ ವರದಿಗಳು ಬರುತ್ತಲೇ ಇರುತ್ತವೆ. ಆದರೂ ಆ ಘಟನೆಗಳಿಂದ ಪಾಠ ಕಲಿಯುವಲ್ಲಿ ನಾವು ವಿಫಲವಾಗುತ್ತಿದ್ದೇವೆ. ಈ ಘಟನೆಯು ಉದ್ಯಮದಲ್ಲಿನ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಯನ್ನು ಎತ್ತಿ ತೋರಿಸುತ್ತಿದೆ. ಮಾಲೀಕರು ಲಾಭದ ಹಪಾಹಪಿಗೆ ಬಿದ್ದಿದ್ದಾರೆ. ರಾಸಾಯನಿಕಗಳನ್ನು ಬಳಸುವಾಗ ಅನುಸರಿಸಬೇಕಾದ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ. ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಸುರಕ್ಷಿತ ವಾತಾವರಣದಲ್ಲಿ, ಯಾವುದೇ ರಕ್ಷಣಾ ಕವಚಗಳಿಲ್ಲದೆ ಕೆಲಸ ಮಾಡುವ ಕಾರ್ಮಿಕರು ವಾಸ್ತವವಾಗಿ ಪ್ರತಿ ಕ್ಷಣವೂ ಸಾವಿನೊಂದಿಗೆ ಸೆಣಸಾಡುತ್ತಿರುತ್ತಾರೆ.
ರಾಸಾಯನಿಕಗಳ ಮಿಶ್ರಣದ ವೇಳೆ ಉಂಟಾಗುವ ಸಣ್ಣ ಘರ್ಷಣೆಯೂ ಇಂತಹ ಭೀಕರ ಸ್ಫೋಟಗಳಿಗೆ ದಾರಿ ಮಾಡಿಕೊಡುತ್ತದೆ. ಕೇವಲ ತಾಂತ್ರಿಕ ಕಾರಣಗಳನ್ನು ನೀಡಿ ಮಾಲೀಕರು ತಪ್ಪಿಸಿಕೊಳ್ಳುವಂತಿಲ್ಲ. ಇಲ್ಲಿ ತರಬೇತಿಯ ಕೊರತೆ ಎದ್ದು ಕಾಣುತ್ತಿದೆ. ಪಟಾಕಿ ತಯಾರಿಕೆಯಂತಹ ಅಪಾಯಕಾರಿ ಕೆಲಸದಲ್ಲಿ ತೊಡಗಿರುವವರಿಗೆ ಸೂಕ್ತ ತರಬೇತಿ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಜ್ಞಾನ ನೀಡುವುದು ಅತ್ಯಗತ್ಯ. ಇದಕ್ಕಿಂತ ಮಿಗಿಲಾಗಿ, ಪರವಾನಗಿ ಪಡೆದ ಘಟಕಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಘಟಕಗಳಿವೆ. ಅವುಗಳ ಮೇಲ್ವಿಚಾರಣೆ ನಡೆಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಅಧಿಕಾರಿಗಳ ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದ ಲಾಭ ಪಡೆಯುವ ಮಾಲೀಕರು ಸುರಕ್ಷತಾ ಶಿಷ್ಟಾಚಾರಗಳನ್ನು ಕಾಗದಕ್ಕಷ್ಟೇ ಸೀಮಿತಗೊಳಿಸಿದ್ದಾರೆ.
ದುರಂತ ನಡೆದ ತಕ್ಷಣ ಸ್ಥಳೀಯ ಸರ್ಕಾರ ಮೃತರ ಕುಟುಂಬಗಳಿಗೆ ಲಕ್ಷಾಂತರ ರೂ. ಪರಿಹಾರ ಘೋಷಿಸುತ್ತದೆ. ಆದರೆ, ಹಣವು ಕಳೆದುಹೋದ ಜೀವವನ್ನು ಮರಳಿ ತರಲಾರದು. ಪರಿಹಾರ ಎನ್ನುವುದು ಗಾಯದ ಮೇಲೆ ಹಚ್ಚುವ ತಾತ್ಕಾಲಿಕ ಮದ್ದಷ್ಟೇ ಹೊರತು ಅದು ಶಾಶ್ವತ ಪರಿಹಾರವಲ್ಲ. ಸ್ಫೋಟದ ನಂತರದ ತನಿಖೆಗಳು ಕೇವಲ ವರದಿಗಳ ಸೃಜನೆಗೆ ಸೀಮಿತವಾಗುತ್ತಿವೆ. ತಪ್ಪಿತಸ್ಥ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಕೆಲಸ ಆಗುತ್ತಿಲ್ಲ. ಅಕ್ರಮವಾಗಿ ನಡೆಸಲಾಗುತ್ತಿರುವ ಪಟಾಕಿ ಘಟಕಗಳನ್ನು ಪತ್ತೆಹಚ್ಚಿ ಅವುಗಳನ್ನು ತಕ್ಷಣವೇ ಮುಚ್ಚಬೇಕು.
ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಸರ್ಕಾರ ಪಟಾಕಿ ಕಾರ್ಖಾನೆಗಳ ಮೇಲೆ ನಿರಂತರ ಮತ್ತು ಕಟ್ಟುನಿಟ್ಟಿನ ನಿಗಾ ವಹಿಸಬೇಕಿದೆ. ಆಧುನಿಕ ತಂತ್ರಜ್ಞಾನ ಬಳಸಿ ರಾಸಾಯನಿಕ ಮಿಶ್ರಣದ ಪ್ರಕ್ರಿಯೆಯನ್ನು ಯಾಂತ್ರೀಕೃತಗೊಳಿಸುವುದು ಮತ್ತು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದು ಒಂದು ದಾರಿ. ಪ್ರತಿ ಘಟಕದಲ್ಲೂ ಅಗ್ನಿಶಾಮಕ ವ್ಯವಸ್ಥೆ ಮತ್ತು ತುರ್ತು ನಿರ್ಗಮನ ಮಾರ್ಗಗಳು ಇರುವುದನ್ನು ಕಡ್ಡಾಯಗೊಳಿಸಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಘಟಕಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸುವ ಧೈರ್ಯವನ್ನು ಸರ್ಕಾರ ತೋರಬೇಕು.
ಜನರ ಸಂಭ್ರಮಕ್ಕಾಗಿ ತಯಾರಿಸುವ ಪಟಾಕಿಗಳು ಕಾರ್ಮಿಕರ ಬದುಕನ್ನೇ ಸುಡಬಾರದು. ಸುರಕ್ಷತಾ ಶಿಷ್ಟಾಚಾರಗಳ ಪಾಲನೆ ಪ್ರತಿಯೊಂದು ಪಟಾಕಿ ತಯಾರಿಕಾ ಘಟಕದ ಅಲಿಖಿತ ಮತ್ತು ಕಡ್ಡಾಯ ನಿಯಮವಾಗಬೇಕು. ಆಗ ಮಾತ್ರ ಪಟಾಕಿ ಕಾರ್ಖಾನೆ ದುರಂತಗಳಿಗೆ ಅಂತ್ಯ ಹಾಡಲು ಸಾಧ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net