ಸಂಪಾದಕೀಯ: ಶೋಚನೀಯ ಪರಿಸ್ಥಿತಿ

ed
Published on

ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ಪದೇಪದೆ ಕಳವಳ ವ್ಯಕ್ತಪಡಿಸುತ್ತ ಇರುತ್ತವೆ. ಆದರೆ, ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿಗಳು, ಹಿಂಸಾಕೃತ್ಯಗಳು ನಡೆಯುತ್ತಿದ್ದರೂ, ಇದನ್ನು ತಡೆಯುವಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ಪ್ರಯತ್ನಗಳೂ ನಡೆಯದಿರುವುದು ವಿಪರ್ಯಾಸ. ಅಥವಾ ಕೆಲ ‘ಆಯ್ದ ಘಟನೆ’ಗಳನ್ನೇ ಮಾನವ ಹಕ್ಕುಗಳ ರಕ್ಷಣೆ ಹೆಸರಿನಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತದೆಯೇ ಎಂಬ ಅನುಮಾನವೂ ತಲೆದೋರುತ್ತದೆ. ಬಾಂಗ್ಲಾದೇಶದಲ್ಲಿ ಹಿಂದುಗಳು ಆತಂಕದ ಕರಿನೆರಳಲ್ಲಿ ಬದುಕುವಂತಾಗಿದ್ದು, ಭದ್ರತೆ ಮರೀಚಿಕೆಯಾಗಿದೆ.

ಮೀಸಲಾತಿ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳು ಸ್ಥಗಿತಗೊಂಡ ನಂತರವೂ ಹಿಂದುಗಳ ಮೇಲೆ ಹಲ್ಲೆ ಮಾಡುವ, ಅವರ ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ಮಾಡುವ ಘಟನೆಗಳು ನಿಂತಿಲ್ಲ. ಅಲ್ಪಸಂಖ್ಯಾತ ಹಿಂದುಗಳ ಮನೆಗೆ ನುಗ್ಗಿ ಹೊಡೆಯುವುದು, ಬೆದರಿಸುವುದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವುದು ಮುಂತಾದ ಘಟನೆಗಳು ಪದೇಪದೆ ವರದಿಯಾಗುತ್ತಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅಲ್ಲಿನ ಹಂಗಾಮಿ ಸರ್ಕಾರ ಅರಿತಂತಿಲ್ಲ. ಶಾಲೆಗಳಲ್ಲಿ ಹಿಂದು ಶಿಕ್ಷಕರಿಂದ, ಇತರ ಕಚೇರಿಗಳಲ್ಲೂ ಹಿಂದು ಸಿಬ್ಬಂದಿಯಿಂದ ಒತ್ತಾಯಪೂರ್ವಕ ರಾಜೀನಾಮೆ ಪಡೆಯಲಾಗುತ್ತಿದೆ. ಹೀಗಾದರೆ ಹಿಂದುಗಳು ಬದುಕು ಕಟ್ಟಿಕೊಳ್ಳುವುದು ಹೇಗೆ? ಉದ್ಯೋಗ ಅರಸಲು ಎಲ್ಲಿ ಹೋಗಬೇಕು? ಮತೀಯ ಮೂಲಭೂತವಾದಿಗಳು ಹಿಂದುಗಳನ್ನೇ ಗುರಿಯಾಗಿಸಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಹಿಂದು ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ದೇವಸ್ಥಾನಗಳು ಕೂಡ ಸುರಕ್ಷಿತವಾಗಿ ಉಳಿದಿಲ್ಲ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 61 ಜಿಲ್ಲೆಗಳಲ್ಲಿ ಹಿಂದುಗಳು ನೆಲೆಸಿದ್ದು, ಅವರು ಸುರಕ್ಷಿತ ಬದುಕಿಗಾಗಿ ಪರಿತಪಿಸುವಂತಾಗಿದೆ.

ಕಳೆದ ಹಲವು ದಶಕಗಳಿಂದಲೂ ಹಿಂದುಗಳ ಜನಸಂಖ್ಯೆ ಬಾಂಗ್ಲಾದೇಶದಲ್ಲಿ ಕ್ಷೀಣಿಸುತ್ತಿದೆ. 16.72 ಕೋಟಿ ಜನಸಂಖ್ಯೆ ಇರುವ ಬಾಂಗ್ಲಾದೇಶದಲ್ಲಿ ಶೇಕಡ 91ರಷ್ಟು ಮುಸ್ಲಿಂರಿದ್ದರೆ, ಹಿಂದುಗಳ ಜನಸಂಖ್ಯೆ ಕೇವಲ ಶೇಕಡ 8ರಷ್ಟಿದೆ. ಬಾಂಗ್ಲಾದೇಶ ಮೊದಲಿನಿಂದಲೂ ಭಾರತದೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಮತ್ತು ಸ್ನೇಹದ ಬಾಂಧ್ಯವವನ್ನು ಹೊಂದಿದೆ. ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಕೂಡ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಹೀಗಿರುವಾಗ, ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಬೇಕು. ಹಿಂದುವಿರೋಧಿ ಹಿಂಸಾಚಾರಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಅಲ್ಲಿನ ಸೇನೆಗೆ ಮತ್ತು ಮಧ್ಯಂತರ ಆಡಳಿತಗಾರರಿಗೆ ಭಾರತ ಸರ್ಕಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ತಾಕೀತು ಮಾಡಬೇಕು. ಮತ್ತು ಹಿಂದುಗಳ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ, ಇಂಥ ಕೃತ್ಯಗಳು ತಕ್ಷಣ ನಿಲ್ಲಿಸುವಂತೆ ರಾಜತಾಂತ್ರಿಕ ಒತ್ತಡವನ್ನು ಹೇರಬೇಕು. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಹಿಂದುಗಳ ಮೇಲಿನ ದೌರ್ಜನ್ಯವನ್ನು ಗಟ್ಟಿದನಿಯಲ್ಲಿ ಪ್ರಸ್ತಾಪಿಸಬೇಕು. ಹಿಂದುಗಳು ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಭಾವ ಅನುಭವಿಸುತ್ತಿದ್ದಾರೆ. ಹೀಗಾಗಿ, ಭಾರತಕ್ಕೆ ಆಶ್ರಯ ಕೋರಿ ಬರುತ್ತಿರುವ ಬಾಂಗ್ಲಾ ಹಿಂದುಗಳಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು. ಮಾನವೀಯ ನೆಲೆಯಲ್ಲಿ ಅಗತ್ಯ ಸಹಾಯವನ್ನು ಒದಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net