

ಮೊಬೈಲ್ಫೋನ್ ಮೂಲಕ ತ್ವರಿತಗತಿಯಲ್ಲಿ ಹಾಗೂ ಉಚಿತವಾಗಿ ಹಣ ವರ್ಗಾಯಿಸಬಹುದಾದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಭಾರತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಭಾರತದ ಯುಪಿಐ ವ್ಯವಸ್ಥೆಯನ್ನು ದಕ್ಷಿಣ ಅಮೆರಿಕ ಮತ್ತು ಆಫ್ರಿಕಾಕ್ಕೂ ವಿಸ್ತರಿಸಲು ನ್ಯಾಷನಲ್ ಪೇಮೆಂಟ್ಸ್ ಕಮಿಷನ್ ಆಫ್ ಇಂಡಿಯಾ (ಎನ್ಪಿಸಿಐ) ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಇದಲ್ಲದೆ ಟ್ರಿನಿಡಾಡ್ ಮತ್ತು ಟೊಬ್ಯಾಗೋ ದೇಶಗಳಿಗೆ ಅವುಗಳದೇ ಆದ ಯುಪಿಐ ರೂಪಿಸಿಕೊಡಲು ಭಾರತ ಸಹಾಯ ಮಾಡಲಿದೆ. ನಮ್ಮ ನೆರೆಹೊರೆಯ ದೇಶಗಳು ಡಿಜಿಟಲ್ ಪೇಮೆಂಟ್ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಹೆಣಗಾಡುತ್ತಿರುವಾಗ, ಭಾರತ ಈ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಮುಂದೆ ಹೋಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು.
ಕಳೆದ ವರ್ಷವಷ್ಟೇ ಸಿಂಗಾಪುರದಲ್ಲೂ ಯುಪಿಐ ಸೇವೆ ವಿಸ್ತರಣೆಯಾಗಿತ್ತು. 2016ರ ಏಪ್ರಿಲ್ 11ರಂದು ಭಾರತದಲ್ಲಿ ಜಾರಿಗೊಳಿಸಲಾದ ಯುಪಿಐ ವ್ಯವಸ್ಥೆಯು ಭಾರತ್ಪೇ, ಫೋನ್ಪೇ, ಗೂಗಲ್ಪೇ, ಪೇಟಿಎಂ ಸೇರಿದಂತೆ ಪ್ರಸ್ತುತ 60ಕ್ಕೂ ಅಧಿಕ ಆಪ್ಗಳ ಮೂಲಕ ತ್ವರಿತ ಡಿಜಿಟಲ್ ಪಾವತಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಭಾರತದಲ್ಲಿ ಈಗ ಬಹುತೇಕ ಡಿಜಿಟಲ್ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ನಲ್ಲಿ ಯುಪಿಐ ಬಳಕೆ ಅನುಮತಿಸಲು ಪಾವತಿ ಸಿಸ್ಟಮ್ ಆಪರೇಟರ್ಗಳೊಂದಿಗೆ ಈ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗ ತಡೆರಹಿತ ನೇರ ವಹಿವಾಟುಗಳನ್ನು ಸುಗಮಗೊಳಿಸಲಾಗಿದೆ. ಕೇಂದ್ರ ಸರ್ಕಾರ ಒದಗಿಸಿರುವ ಮಾಹಿತಿಯಂತೆ, ಭಾರತದಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳ ಸಂಖ್ಯೆಯು 2017-18ರ ಆರ್ಥಿಕ ವರ್ಷದಲ್ಲಿ 2,071 ಕೋಟಿಯಿಂದ 2023-24ರ ಆರ್ಥಿಕ ವರ್ಷದಲ್ಲಿ 18,737 ಕೋಟಿಗೆ ಏರಿಕೆಯಾಗಿದೆ. 2017-18ರಲ್ಲಿ 1 ಲಕ್ಷ ಕೋಟಿ ರೂ.ಗಳಿದ್ದ ಯುಪಿಐ ವಹಿವಾಟು ಮೌಲ್ಯ, 2023-24ರ ಆರ್ಥಿಕ ವರ್ಷದಲ್ಲಿ 200 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿದೆ. 2024-25ರ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲೇ (ಏಪ್ರಿಲ್-ಆಗಸ್ಟ್) ಯುಪಿಐ ವಹಿವಾಟಿನ ಮೌಲ್ಯ 101 ಲಕ್ಷ ಕೋಟಿ ರೂ.ಗಳಿಗೆ ತಲುಪಿರುವುದು ಗಮನಾರ್ಹ.
2022-23ರಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಯುಪಿಐ ಪಾಲು ಶೇಕಡ 75ರಷ್ಟಿದ್ದು, 2026-27ರವರೆಗೆ ಇದು ಶೇ.90ಕ್ಕೆ ತಲುಪುವ ಅಂದಾಜಿದೆ. 2022-23ರಲ್ಲಿ ಯುಪಿಐ ಮೂಲಕ 8371 ಕೋಟಿ ವಹಿವಾಟುಗಳು ನಡೆದಿದ್ದು, 2026-27ರ ಹೊತ್ತಿಗೆ ವಹಿವಾಟುಗಳ ಸಂಖ್ಯೆ 37900 ಕೋಟಿಗೆ ಏರಿಕೆಯಾಗಲಿದೆ. ಅಂದರೆ, ಮುಂಬರುವ ದಿನಗಳಲ್ಲಿ ಯುಪಿಐ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಈಗ ಭಾರತದ ಗಡಿ ದಾಟಿ, ಹಲವು ದೇಶಗಳಿಗೂ ವಿಸ್ತರಿಸುವುದು ಉತ್ತಮ ಬೆಳವಣಿಗೆ. ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನದ ಶಕ್ತಿಗೂ ಇದು ಉತ್ತಮ ನಿದರ್ಶನ.