ಸಂಪಾದಕೀಯ: ತುರ್ತಾಗಿ ಸ್ಪಂದಿಸಿ

mansomn
Published on

ಕಳೆದ ವರ್ಷ ಭೀಕರ ಬರಗಾಲದಿಂದ ಸಂಕಷ್ಟ ಮತ್ತು ಹಾನಿಯನ್ನು ಕಂಡ ರೈತರು ಆ ಕಹಿ ಅನುಭವದಿಂದ ಹೊರಬರುವ ಮುನ್ನವೇ ಮತ್ತೆ ಆಘಾತ ಅನುಭವಿಸಿದ್ದು, ದಿಕ್ಕು ತೋಚದಂತಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇನ್ನು ಕೆಲವೆಡೆ ಮಳೆ ಸಮಾಧಾನಕರ ಪ್ರಮಾಣದಲ್ಲಿದ್ದರೂ ಬೆಳೆಗಳಿಗೆ ರೋಗಭೀತಿ ಉಂಟಾಗಿದೆ. ಕಳೆದ ವರ್ಷ ಅನಾವೃಷ್ಟಿಯ ಪ್ರಕೋಪಕ್ಕೆ ತುತ್ತಾಗಿ ಬದುಕು ಕಳೆದುಕೊಂಡಿದ್ದ ರೈತರು ಈ ಬಾರಿ ಅತಿವೃಷ್ಟಿಯ ವಿಕೋಪಕ್ಕೆ ತುತ್ತಾಗಿದ್ದಾರೆ. ಇನ್ನು ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಬಹುದು.

ಮುಂಗಾರು ಆಗಮನದ ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕೊಂಚ ಕಡಿಮೆಯಾಗಿತ್ತು. ಆದರೆ, ಜುಲೈ ಆರಂಭದಿಂದಲೇ ಮಳೆ ಬಿರುಸು ಪಡೆದಿದೆ. ಈಗಾಗಲೇ, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ತಲೆದೋರಿದೆ. ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಜುಲೈ 12ರಿಂದ 18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 64 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 113 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇಕಡ 76 ಹೆಚ್ಚು ವರ್ಷಧಾರೆಯಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ವಿಜಯನಗರ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.

ಈ ಬಾರಿ 82.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೆ 60 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳ ಪೈಕಿ 7.94 ಲಕ್ಷ ಹೆಕ್ಟೇರ್​ಗಳಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ರೈತರನ್ನು ಆತಂಕಕ್ಕೀಡು ಮಾಡಿದೆ. ಈರುಳ್ಳಿ, ಕಾಫಿ ಬೆಳೆಗಳಿಗೆ ಕೊಳೆರೋಗ ಹಬ್ಬುತ್ತಿದೆ. ಸತತ ಮಳೆಯಿಂದಾಗಿ ಶುಂಠಿಗೂ ಕೊಳೆರೋಗ ಕಾಣಿಸಿಕೊಂಡಿದೆ. ಮೊಕ್ಕಜೋಳದ ಎಲೆಗಳು ಹಳದಿ ರೋಗಕ್ಕೆ ತಿರುಗಿದೆ. ಸೂರ್ಯಕಾಂತಿ ನೀರಲ್ಲಿ ಕೊಳೆಯುತ್ತಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದು, ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದಿಂದ ಶೀಘ್ರ ಸ್ಪಂದನೆ ದೊರೆಯಬೇಕು. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ರೈತರ ನೆರವಿಗೆ ಧಾವಿಸಬೇಕು. ಅಧಿಕಾರಿಗಳು ಬೆಳೆಹಾನಿಯ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ, ನಷ್ಟದ ನಿಖರ ಚಿತ್ರಣವನ್ನು ಒದಗಿಸಬೇಕು. ಶಾಸಕರು, ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಯಾವ ಸಬೂಬು ಹೇಳದೆ ಅವರವರ ಕ್ಷೇತ್ರಗಳಲ್ಲಿ ರೈತರ ಸಮಸ್ಯೆಗಳನ್ನು ಅರಿಯಲು ಪ್ರವಾಸ ಮಾಡಬೇಕು. ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡುವ ಜತೆಗೆ, ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಆತ್ಮಸ್ಥೈರ್ಯವನ್ನು ಒದಗಿಸಿ, ಮತ್ತೆ ಬದುಕು ಕಟ್ಟುಕೊಳ್ಳಲು ಪ್ರೋತ್ಸಾಹ ನೀಡುವುದು ಈಗಿನ ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net