

ದೇಶ ಕಾರ್ಗಿಲ್ ವಿಜಯ ದಿನದ ರಜತ ಮಹೋತ್ಸವವನ್ನು ಆಚರಿಸುತ್ತಿದೆ. 1999ರಲ್ಲಿ ಪಾಕಿಸ್ತಾನ ಎಸಗಿದ ನಂಬಿಕೆದ್ರೋಹದಿಂದಾಗಿ ಏರ್ಪಟ್ಟ ಕಾರ್ಗಿಲ್ ಯುದ್ಧ ಜಾಗತಿಕ ಗಮನವನ್ನು ಸೆಳೆಯಿತು. ಹಿಂದಿನ ಹಲವು ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ಉಣಿಸಿದ್ದ ಭಾರತೀಯ ಸೇನೆ ಕಾರ್ಗಿಲ್ ಸಮರದಲ್ಲೂ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ, ವಿಜಯ ಸಾಧಿಸಿತು. ಇಡೀ ರಾಷ್ಟ್ರವನ್ನು ಭಾವನಾತ್ಮಕವಾಗಿ ಒಂದು ಮಾಡಿದ ಕಾರ್ಗಿಲ್ ಯುದ್ಧ, ದೇಶಭಕ್ತಿಯನ್ನು ಜಾಗೃತಗೊಳಿಸಿತು. ಭಾವೈಕ್ಯತೆಯ ಶಕ್ತಿಯನ್ನು ದರ್ಶಿಸಿತು. ದೇಶದ ಪ್ರತಿಯೊಬ್ಬರನ್ನೂ ಒಗ್ಗೂಡಿಸಿತು. ಜತೆಗೆ ಪಾಕಿಸ್ತಾನದ ಮೋಸ, ಕುತಂತ್ರ ಮತ್ತೊಮ್ಮೆ ಅಂತಾರಾಷ್ಟ್ರೀಯ ವಲಯದ ಎದುರು ಬಹಿರಂಗಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಭಾರತ 527 ವೀರಸೈನಿಕರನ್ನು, ಅಧಿಕಾರಿಗಳನ್ನು ಕಳೆದುಕೊಂಡಿತು. ಅವರಲ್ಲಿ 22ರಿಂದ 40ರೊಳಗಿನ ತರುಣರೇ ಹೆಚ್ಚು. 1300ಕ್ಕೂ ಹೆಚ್ಚು ಸೈನಿಕರು ಗಾಯಗಳನ್ನು ಅನುಭವಿಸಿದರು. ಭಾರತೀಯ ಸೈನಿಕರ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣಾದಾಯಿ. ರಾಷ್ಟ್ರವೇ ಮೊದಲು ಎಂಬ ಉದಾತ್ತ ಧ್ಯೇಯದಲ್ಲಿ ಎಲ್ಲ ಕಷ್ಟಕಾರ್ಪಣ್ಯಗಳನ್ನು ಮರೆತು, ಕಠಿಣ ಸವಾಲುಗಳನ್ನು ಗೆದ್ದ ಪರಿ ನಿಜಕ್ಕೂ ಚೇತೋಹಾರಿ.
ಭಾರತ ಎಂದಿಗೂ ಶಾಂತಿಪ್ರಿಯ ರಾಷ್ಟ್ರ. ಯಾರ ಮೇಲೂ ಎರಗಿ ಹೋಗುವ ರಾಷ್ಟ್ರವಲ್ಲ. ಪಾಕಿಸ್ತಾನ ಹಿಂದೆ ಮಾಡಿದ್ದ ಮೋಸ, ನಂಬಿಕೆದ್ರೋಹಗಳನ್ನು ಮರೆತು 1998ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆ ರಾಷ್ಟ್ರದ ಜತೆ ಸೌಹಾರ್ದ ಸಂಬಂಧ ಬೆಳೆಸುವ ಪ್ರಯತ್ನ ಮಾಡಿದರು. ಪಾಕಿಸ್ತಾನಕ್ಕೆ ರೈಲು, ಬಸ್ ಸಂಚಾರವನ್ನೂ ಆರಂಭಿಸಿದರು. ಆದರೆ, ಭಯೋತ್ಪಾದನೆಯ ರಫ್ತು, ಹಿಂಸೆಯ ಹರಡುವಿಕೆಯಲ್ಲೇ ಉಸಿರಾಡುತ್ತಿರುವ ಪಾಕಿಸ್ತಾನ 1999ರಲ್ಲಿ ಕಾರ್ಗಿಲ್ನ ಪ್ರದೇಶಗಳನ್ನು ತನ್ನದಾಗಿಸಿಕೊಳ್ಳಲು ಹವಣಿಸಿತು. ಇದಕ್ಕೆ ಭಾರತ ದಿಟ್ಟ ಉತ್ತರ ನೀಡಿತು. ವಾಜಪೇಯಿ ಯುದ್ಧಭೂಮಿಗೇ ತೆರಳಿ ಸೈನಿಕರನ್ನು ಹುರಿದುಂಬಿಸಿದರು. ಮೇನಲ್ಲಿ ಆರಂಭಗೊಂಡ ಸಮರ ಜುಲೈ 26ಕ್ಕೆ ಮುಗಿದು. ಭಾರತ ವಿಜಯದ ಪತಾಕೆಯನ್ನು ಹಾರಿಸಿದಾಗ, ಹೆಮ್ಮೆಯ ಭಾವ ಇಮ್ಮಡಿಗೊಂಡಿತು.
ಇದೆಲ್ಲವೂ ನಡೆದು 25 ವರ್ಷಗಳೇ ಸಂದಿವೆ. ಆದರೆ, ಪಾಕಿಸ್ತಾನ ಬದಲಾಗಿದೆಯೇ? ಪಾಠ ಕಲಿತಿದೆಯೇ? ಎಂಬ ಪ್ರಶ್ನೆಗೆ ಉತ್ತರ ಮಾತ್ರ ನಿರಾಶಾದಾಯಕವೇ. ಭಾರತದಲ್ಲಿ 18ನೇ ಲೋಕಸಭೆ ಚುನಾವಣೆ ಮುಗಿದ ಬಳಿಕ ಪಾಕಿಸ್ತಾನದಿಂದ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ದಾಳಿ ಪ್ರಕರಣಗಳು ಹೆಚ್ಚಿವೆ. ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿಯನ್ನು, ಜಮ್ಮುವಿನಲ್ಲಿ ನಾಗರಿಕರನ್ನು ಗುರಿಯಾಗಿಸಿ ಭಯೋತ್ಪಾದಕರ ದಾಳಿಗಳು ಹೆಚ್ಚುತ್ತಲೇ ಇವೆ. ಪಾಕಿಸ್ತಾನ ಆರ್ಥಿಕವಾಗಿ ಸೊರಗಿದ್ದರೂ, ಭಯೋತ್ಪಾದನೆಗೆ ಆರ್ಥಿಕ ಮೂಲಗಳನ್ನು ಹೊಂದಿಸುತ್ತಲೇ ಇದೆ. ಈ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಲಯದ ಗಮನಕ್ಕೂ ತಂದಿದ್ದಾರೆ. ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಶಾಪ. ಅದನ್ನು ಪೋಷಿಸುತ್ತಿರುವುದನ್ನೇ ನೀತಿಯಾಗಿಸಿಕೊಂಡಿರುವ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗಿಸುವುದು ಮತ್ತು ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಸುವುದು ಈಗಿನ ತುರ್ತು ಅಗತ್ಯ.
ಕಾಶ್ಮೀರ ವಿವಾದ ಇತ್ಯರ್ಥದ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿ ಬೆನ್ನಿಗೆ ಚೂರಿಹಾಕಿದ ಪಾಕ್, ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು. ಆದರೆ, ಆಪರೇಷನ್ ವಿಜಯ ಮೂಲಕ ಭಾರತೀಯ ಸೇನೆಯು ಪಾಕ್ಗೆ ತಕ್ಕ ಶಾಸ್ತಿ ಮಾಡಿತು. ಈ ಯುದ್ಧದಲ್ಲಿ ನವವಿವಾಹಿತರು, ವಿವಾಹ ನಿಗದಿಯಾಗಿದ್ದ ಅನೇಕ ಯೋಧರು ಹುತಾತ್ಮರಾದರು. ವೈಯಕ್ತಿಕ ಬದುಕಿಗಿಂತ ದೇಶ ಮಿಗಿಲೆಂದು ತ್ಯಾಗ ಮಾಡಿದ ಈ ಧೀರ ಸೇನಾನಿಗಳಿಗೆ ಸಲಾಂ. ನಮ್ಮ ಯೋಧರು ದೇಶದ ಸುರಕ್ಷತೆಗೆ ಬದ್ಧರಾಗಿದ್ದು, ಯಾವುದೇ ತ್ಯಾಗಕ್ಕೆ ಸಿದ್ಧರಿದ್ದಾರೆ. ದೇಶದ ಗೌರವ ಮತ್ತು ಘನತೆ ರಕ್ಷಣೆಗಾಗಿ ನಾವು ಯಾವುದೇ ಕ್ರಮಕ್ಕೆ ಸಿದ್ಧ. ಅಗತ್ಯ ಬಿದ್ದರೆ ನಮ್ಮ ಯೋಧರು ಗಡಿ ದಾಟಲು ಸಿದ್ಧ. ಇಂಥ ಪ್ರಸಂಗ ಎದುರಾದರೆ ನಾಗರಿಕರು ಸೇನೆಯ ಬೆಂಬಲಕ್ಕೆ ನಿಲ್ಲಬೇಕು.
| ರಾಜನಾಥ ಸಿಂಗ್ ರಕ್ಷಣಾ ಸಚಿವ