ಸಂಪಾದಕೀಯ: ಪ್ರಯಾಣಿಕರ ಹಿತ ಕಾಪಾಡಿ

-67a8e5b747de7
Published on

ಇತ್ತೀಚೆಗಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಪ್ರಯಾಣ ದರ ಏರಿಕೆಯ ಬಿಸಿ ಅನುಭವಿಸಿದ್ದ ಸಾರ್ವಜನಿಕರಿಗೆ ಇದೀಗ ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳದ ಬರೆ ಬಿದ್ದಿದೆ. ಅದೂ ಒಂದೆರಡು ರೂಪಾಯಿ ಅಲ್ಲ. ಶೇಕಡ 46ರಷ್ಟು, ಅಂದರೆ, ಈಗಿರುವ ದರದ ಅರ್ಧದಷ್ಟು ಏರಿಕೆಯಾಗಿದೆ.

ಇದರಿಂದ ಪ್ರಯಾಣಿಕರಿಗೆ ಹೊರೆ ಆಗುವುದು ಖಚಿತ. ಸಂಚಾರಕ್ಕೆ ಇದುವರೆಗೆ ಮೆಟ್ರೋ ರೈಲಿನ ಮೇಲೆ ಅವಲಂಬಿತರಾಗಿದ್ದವರಲ್ಲಿ ಬಹುಪಾಲು ಜನರು ಇನ್ನು ಮುಂದೆ ಮತ್ತೆ ರಸ್ತೆಗಿಳಿಯುವ ಸಾಧ್ಯತೆ ಇರುತ್ತದೆ. ಖರ್ಚು, ನಿರ್ವಹಣೆ ವೆಚ್ಚ ಇತ್ಯಾದಿಯನ್ನು ಅವಲೋಕಿಸಿ ಆಯಾ ಸಂಸ್ಥೆಗಳು ಕಾಲಕಾಲಕ್ಕೆ ದರ ಏರಿಕೆ ಮಾಡುವುದು ಸಹಜ. ಆದರೆ, ದರ ಏರಿಕೆಯ ಪ್ರಮಾಣ ವಾಸ್ತವದ ನೆಲೆಗಟ್ಟಿನಲ್ಲಿ ಇರಬೇಕು ಮತ್ತು ಪ್ರಯಾಣಿಕರ ಹಿತವನ್ನೂ ಪರಿಗಣಿಸಬೇಕಿರುವುದು ಮುಖ್ಯ.

ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ರೈಲು ಸುಧಾರಣೆಯ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಬೆಂಗಳೂರಿನಲ್ಲಿ ಸಂಚಾರ ಸಿಕ್ಕು ಬವಣೆಯಿಂದ ಪಾರಾಗಲು, ಗಮ್ಯ ಸ್ಥಾನವನ್ನು ಬೇಗನೆ ತಲುಪಲು ಮತ್ತು ತ್ರಾಸದಾಯಕವಲ್ಲದ ಪ್ರಯಾಣಕ್ಕೆ ‘ನಮ್ಮ ಮೆಟ್ರೋ’ ಸೂಕ್ತ. ಹಾಗಾಗಿಯೇ ಅದೆಷ್ಟೋ ಜನರು ತಮ್ಮ ದ್ವಿಚಕ್ರ ಮತ್ತು ನಾಲ್ಕುಚಕ್ರದ ವಾಹನಗಳನ್ನು ಮೆಟ್ರೋ ರೈಲು ನಿಲ್ದಾಣದ ಬಳಿ ರ್ಪಾಂಗ್ ಮಾಡಿ, ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ರಾಜಧಾನಿಯಲ್ಲಿ ಮೆಟ್ರೋ ಮಾರ್ಗವೂ ವಿಸ್ತರಣೆಯಾಗುತ್ತಿದೆ. ಹೀಗಿರುವಾಗ, ಮತ್ತಷ್ಟು ಪ್ರಯಾಣಿಕಸ್ನೇಹಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮೆಟ್ರೋದಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಿಸಲು ಕಾಳಜಿ ವಹಿಸಬೇಕಿತ್ತು.

ಪ್ರಯಾಣ ದರದ ಏರಿಕೆ ಅನಿವಾರ್ಯವೇ ಆಗಿದ್ದಲ್ಲಿ ಶೇಕಡ 10ರಿಂದ 15ರಷ್ಟು ಹೆಚ್ಚಿಸಲು ಮುಂದಾಗಬಹುದಿತ್ತು. ಆದರೆ, ಹಾಗೆ ಮಾಡದೆ ಏಕಾಏಕಿ ಶೇ.46ರಷ್ಟು ಪ್ರಯಾಣದರ ಏರಿಕೆ ಮಾಡಿರುವ ಬಿಎಂಆರ್​ಸಿಎಲ್ ನಿರ್ಧಾರ ಯಾವುದೇ ನಿಟ್ಟಿನಲ್ಲೂ ಸಮರ್ಥನೀಯವಲ್ಲ. 2 ಕಿಲೋಮೀಟರ್​ವರೆಗಿನ ಪ್ರಯಾಣಕ್ಕೆ 10 ರೂ., 2-4 ಕಿಲೋಮೀಟರ್​ಗೆ 20 ರೂ., 4-6 ಕಿಲೋಮೀಟರ್​ಗೆ 30 ರೂ., 6-8 ಕಿ.ಮೀ.ಗೆ 40 ರೂ., 8-10 ಕಿ.ಮೀ.ಗೆ 50 ರೂ., 10-15 ಕಿ.ಮೀ.ಗೆ 60 ರೂ. ಮತ್ತು 25-30 ಕಿ.ಮೀ.ಗೆ 90 ರೂ. ಏರಿಕೆ ಮಾಡಲಾಗಿದೆ.

ಬಿಎಂಆರ್​ಸಿಎಲ್ ಅಂಕಿಅಂಶಗಳಂತೆ ಪ್ರಸ್ತುತ ಪ್ರತಿನಿತ್ಯ ಸರಾಸರಿ 6.36 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಪ್ರಯಾಣ ದರ ಏರಿಕೆಯ ಕಾರಣದಿಂದ ಇವರು ಮತ್ತೆ ಸ್ವಂತ ವಾಹನ ಅಥವಾ ಬಾಡಿಗೆ ಬೈಕ್, ಟ್ಯಾಕ್ಸಿಗಳನ್ನು ಬಳಸಲು ಆರಂಭಿಸಿದರೆ ಬೆಂಗಳೂರಿನಲ್ಲಿ ಸಂಚಾರ ಸಿಕ್ಕು ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಮತ್ತು ‘ನಮ್ಮ ಮೆಟ್ರೋ’ ಪ್ರಯಾಣಿಕರನ್ನು ಕಳೆದುಕೊಂಡ ಬಳಿಕ ಮತ್ತೆ ಅವರನ್ನು ರೈಲು ಹತ್ತಿಸಲು ಪ್ರಯಾಸ ಪಡಬೇಕಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಶೇ.46ರ ಏರಿಕೆಯಲ್ಲಿ ಒಂದಿಷ್ಟು ಕಡಿತ ಮಾಡುವ ಮೂಲಕ ಪ್ರಯಾಣಿಕರ ಹಿತವನ್ನು ಕಾಪಾಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net