

ಕಳೆದ ಮೂರು ತಿಂಗಳಲ್ಲಿ ಸುಮಾರು 3 ಸಾವಿರ ಟನ್ ವಿದೇಶಿ ಅಡಿಕೆ ಅಕ್ರಮವಾಗಿ ಭಾರತಕ್ಕೆ ಆಮದಾಗಿರುವುದನ್ನು ಕೇಂದ್ರ ಸರ್ಕಾರವೇ ಅಧಿಕೃತವಾಗಿ ಬಹಿರಂಗಪಡಿಸಿದೆ. ಅಂದರೆ, ಈ ಜಾಲ ಪ್ರಬಲವಾಗಿ ಬೆಳೆದು, ದೇಶೀಯ ಮಾರುಕಟ್ಟೆಯಲ್ಲಿ ಅಸ್ಥಿರತೆ ಸೃಷ್ಟಿಸಿದೆ ಎಂಬುದಕ್ಕೆ ಕೇಂದ್ರದ ಈ ಹೇಳಿಕೆ ಸಾಕ್ಷಿಯಾಗಿದೆ. ನಮ್ಮ ದೇಶದಲ್ಲಿ 1.6 ಕೋಟಿ ಅಡಿಕೆ ಬೆಳೆಗಾರರಿದ್ದು, 15.63 ಲಕ್ಷ ಟನ್ ಅಡಿಕೆ ಪ್ರತಿ ವರ್ಷ ಉತ್ಪಾದನೆ ಆಗುತ್ತಿದೆ. ಆದರೂ, 24 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಕಳ್ಳಸಾಗಣೆಯ ಮೂಲಕ ದೇಶವನ್ನು ಪ್ರವೇಶಿಸುತ್ತಿರುವ ಅಡಿಕೆಯಿಂದಾಗಿ ಸ್ಥಳೀಯ ಅಡಿಕೆ ಬೆಳೆಗಾರರಿಗೆ ಭಾರಿ ಹೊಡೆತ ಬೀಳುತ್ತಿದೆ.
ಮ್ಯಾನ್ಮಾರ್ನಿಂದ ಮಿಜೋ ರಾಂಗೆ ಅಡಿಕೆ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಗುವಾಹಟಿ ಹೈಕೋರ್ಟ್ನ ಐಜ್ವಾಲ್ ಪೀಠ ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ಕಳೆದ ವಾರವಷ್ಟೇ ಆದೇಶಿಸಿದೆ. ಕಳ್ಳಸಾಗಣೆ ತಡೆಯಲು ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿರುವ ಮಿಜೋರಾಂನ ಅಡಿಕೆ ಬೆಳೆಗಾರರು, ತಾವೇ ಚೆಕ್ಪೋಸ್ಟ್ಗಳನ್ನು ನಿರ್ವಿುಸಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಕಳ್ಳಸಾಗಣೆ ಮೂಲಕ ಬರುತ್ತಿರುವ ಅಡಿಕೆ ಹಾಗೂ ಸಾಗಿಸುತ್ತಿರುವ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಕಳ್ಳಸಾಗಣೆದಾರರ ನಡುವಿನ ಹೊಂದಾಣಿಕೆಯಿಂದ ಈ ಅವ್ಯವಹಾರ ನಡೆಯುತ್ತಿದ್ದು, ಹಲವು ವರ್ಷಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಆರೋಪಿಸಿದ್ದಾರೆ.
ಈ ಸಮಸ್ಯೆ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಡಿಕೆ ಬೆಳೆಯ ಪಾರಂಪಾರಿಕ ಪ್ರದೇಶಗಳಾದ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿಗೂ ಕಳ್ಳಸಾಗಾಣಿಕೆಯ ಕರಿನೆರಳು ಬೀಳುತ್ತಿದೆ. ಅಡಿಕೆಯ ಕಾನೂನುಬಾಹಿರು ಆಮದಿನ ಬಗ್ಗೆ ಕ್ಯಾಂಪ್ಕೋ ಸಂಸ್ಥೆ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದೆ. ಕಳ್ಳಸಾಗಾಣಿಕೆಯಿಂದ ದೇಶೀಯ ಅಡಿಕೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಅಕ್ರಮ ಅಡಿಕೆ ಸಾಗಾಣಿಕೆ ಮಾಫಿಯಾವು ರಾಜಕೀಯವಾಗಿಯೂ ಪ್ರಬಲವಾಗಿದೆ. ಇದರ ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗುತ್ತದೆ ಇಲ್ಲವೆ ಬೆದರಿಕೆ ಹಾಕಲಾಗುತ್ತದೆ. ಈ ಹಿಂದೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ದೇಶದ ಹಲವೆಡೆ ದಾಳಿ ನಡೆಸಿ, ಅಕ್ರಮವಾಗಿ ವಿದೇಶದಿಂದ ಆಮದು ಮಾಡಿಕೊಂಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದವು. ಆದರೂ, ಕಳ್ಳಮಾರ್ಗಗಳ ಮೂಲಕ ಆಮದು ಮುಂದುವರಿದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಪಿಡುಗಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು. ಸ್ಥಳೀಯ ಬೆಳೆಗಾರರನ್ನು ರಕ್ಷಿಸಬೇಕು.