ಸಂಪಾದಕೀಯ: ರಾಜಕೀಯ ಸಲ್ಲ

Untitled design (3)
Published on

ಭಯೋತ್ಪಾದಕರ ಷಡ್ಯಂತ್ರಗಳ ಬಗ್ಗೆ ದಿನೇ ದಿನೇ ಭಯಾನಕ ವಿಷಯಗಳು ಹೊರಬೀಳುತ್ತಿವೆ. ದಿಲ್ಲಿಯಲ್ಲಿ ಸ್ಫೋಟ ನಡೆಸಿದ ಉಗ್ರಗಾಮಿಗಳು ಅಯೋಧ್ಯೆಯ ರಾಮಮಂದಿರ, ಕಾಶಿ ವಿಶ್ವನಾಥ ದೇಗುಲ, ಬಿಜೆಪಿಯ ಕಾರ್ಯಾಲಯ ಮತ್ತು ಭಾರತೀಯ ಸೇನೆಯ ಕಚೇರಿಗಳನ್ನು ಗುರಿಯಾಗಿಸಿಕೊಂಡಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಟರ್ಕಿಯಲ್ಲಿ ಕುಳಿತು ಮುಂಬೈನ 26/11 ಮಾದರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ವಿಷಯವೂ ಬಯಲಾಗಿದೆ. ನಾನಾ ಕಡೆ ಎನ್​ಐಎ ನಡೆಸಿದ ದಾಳಿಗಳಲ್ಲಿ 15ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದ್ದು, ಐಸಿಸ್​ಗೆ ಸಂಬಂಧಿಸಿದ ಮಾಡ್ಯೂಲ್​ಗಳು ಬಹಿರಂಗಗೊಂಡಿವೆ. ಇವೆಲ್ಲವೂ ಭಯೋತ್ಪಾದಕರ ಜಾಲದ ಆಳ-ಅಗಲಕ್ಕೆ ಸಾಕ್ಷಿಯಾಗಿವೆ.

ಇಂತಹ ಸಂದರ್ಭದಲ್ಲಿ ದೇಶದಲ್ಲಿ ರಾಜಕೀಯ ಏಕತೆ ಪ್ರದರ್ಶಿಸಬೇಕಾದ್ದು ಬಹುಮುಖ್ಯ. ಆದರೆ, ಕೆಲವು ರಾಜಕಾರಣಿಗಳು ಈ ಜವಾಬ್ದಾರಿಯನ್ನು ಮರೆತು, ‘ಬಿಹಾರ ಚುನಾವಣೆ ಸಮಯದಲ್ಲಿಯೇ ಈ ಸ್ಫೋಟ ಏಕೆ ಸಂಭವಿಸಿತು?’ ಎಂದು ಪ್ರಶ್ನಿಸುತ್ತ, ಅನುಮಾನದ ಕಣ್ಣಿಂದ ನೋಡುತ್ತಿರುವುದು ದೇಶವಿರೋಧಿ ಧೋರಣೆ. ಅಷ್ಟೇ ಅಲ್ಲ, ಅದು ಬಾಲಿಶತನದ ಪರಮಾವಧಿ. ಚುನಾವಣೆಗೂ, ಭಯೋತ್ಪಾದನೆ ಕೃತ್ಯಕ್ಕೂ ಏನು ಸಂಬಂಧ? ಇದೊಂದು ರಾಷ್ಟ್ರೀಯ ಸಮಸ್ಯೆ. ಈ ವಿಷಯದಲ್ಲಿ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡುವುದು ದೇಶದ್ರೋಹಕ್ಕೆ ಸಮಾನ. ಈ ರೀತಿಯ ವರ್ತನೆಯಿಂದ ಭಯೋತ್ಪಾದಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಯುದ್ಧ ಅಷ್ಟರಮಟ್ಟಿಗೆ ದುರ್ಬಲವಾಗದಂತೆ ಆಗುತ್ತದೆ. ಈ ರೀತಿಯ ಆರೋಪ-ಪ್ರತ್ಯಾರೋಪ ಮಾಡುತ್ತಿರುವವರು ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸುವುದು ಒಳಿತು. 2008ರ ಭೀಕರ ಮುಂಬೈ ದಾಳಿಯ ನಂತರ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ರಾಷ್ಟ್ರೀಯ ಭದ್ರತಾ ಕಾಯ್ದೆಗಳನ್ನು ಬಲಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುವುದು ಅಗತ್ಯ. ಇಂತಹ ಸಂದರ್ಭಗಳನ್ನು ಎದುರಿಸುವಾಗ ವಿರೋಧ ಪಕ್ಷಗಳ ರಾಜಕೀಯ ನಾಯಕರು ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಮರೆತು ರಾಷ್ಟ್ರಹಿತಕ್ಕೆ ಆದ್ಯತೆ ನೀಡಬೇಕಾಗುತ್ತದೆ.

ಭಯೋತ್ಪಾದನೆಗೆ ಧರ್ಮ, ಪ್ರದೇಶ, ಭಾಷೆ ಮುಂತಾಗಿ ಯಾವುದರ ಗಡಿಯೂ ಇಲ್ಲ. ಇದು ಭಾರತದ ವಿರುದ್ಧ ಹೊರಗಿನ ಶಕ್ತಿಗಳು ಸಾರಿರುವ ಪರೋಕ್ಷ ಯುದ್ಧ. ಭಾರತವನ್ನು, ಭಾರತೀಯರನ್ನು ಎದುರಿನಿಂದ ಎದುರಿಸಲಾಗದೆ ಹೇಡಿತನದಿಂದ ಕದ್ದು ಮುಚ್ಚಿ ಮಾಡುವ ಕೃತ್ಯಗಳಿವು. ಇಂತಹುದು ಭಾರತಕ್ಕೆ ಹೊಸದೇನಲ್ಲ. ಹಿಂದೆಯೂ ಹಲವು ಬಾರಿ ಇಂತಹ ಕೃತ್ಯಗಳು ನಡೆದಿವೆ. ಭಾರತ ತಕ್ಕ ಉತ್ತರವನ್ನೂ ನೀಡಿದೆ. ಈ ಸಮಯದಲ್ಲಿ ಗುಪ್ತಚರ ವ್ಯವಸ್ಥೆಯ ಬಲವರ್ಧನೆ, ದೇಶಾದ್ಯಂತ ಜನ ಜಾಗೃತಿ ಅಗತ್ಯ. ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಸ್ಪೋಟದ ಹಿಂದಿನ ಅಸಲಿಯತ್ತು ಒಂದೊಂದಾಗಿ ಹೊರಬರುತ್ತಿವೆ. ಪೂರ್ಣ ಸತ್ಯ ಹೊರಬರುವವರೆಗೆ ಎಲ್ಲರೂ ತಾಳ್ಮೆ ವಹಿಸುವುದು ಒಳ್ಳೆಯದು. ಯಾರೂ ಇದನ್ನು ಒಂದು ರಾಜಕೀಯ ಆಯುಧವಾಗಿ ಬಳಸುವುದು ಸರಿಯಲ್ಲ. ಅದರಿಂದ ದೇಶದ ಭದ್ರತೆಗೇ ಧಕ್ಕೆಯಾಗುತ್ತದೆ. ಎಲ್ಲ ಪಕ್ಷಗಳು ಮತ್ತು ಜನತೆ ಒಗ್ಗೂಡಿ, ಭಯೋತ್ಪಾದನೆ ವಿರುದ್ಧ ಒಂದೇ ಧ್ವನಿಯಲ್ಲಿ ಎದುರಿಸಿನಿಂತರೆ ಮಾತ್ರ ಭಾರತ ಸುರಕ್ಷಿತವಾಗಿರುತ್ತದೆ. ರಾಜಕೀಯ ಪೈಪೋಟಿಯೆಲ್ಲವೂ ಚುನಾವಣಾ ವೇದಿಕೆಗಳಿಗೆ ಸೀಮಿತವಾಗಿರಲಿ; ರಾಷ್ಟ್ರೀಯ ಭದ್ರತೆಯಲ್ಲಿ ಏಕತೆಯೇ ಗೆಲುವಿನ ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net