

18 ವಯಸ್ಸಿಗಿಂತಲೂ ಕಡಿಮೆ ವಯೋಮಿತಿಯುಳ್ಳ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ನಿಷೇಧಿಸುವಂತೆ ಕೋರಿ ಮಕ್ಕಳ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಮಕ್ಕಳಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾಪವು ಸ್ವಾಗತಾರ್ಹವಾಗಿದ್ದರೂ ವಾಸ್ತವ ರೂಪದಲ್ಲಿ ಜಾರಿಗೆ ತರುವುದು ಸವಾಲಿನ ಸಂಗತಿಯಾಗಿದೆ. ಜಾಲತಾಣಗಳಿಗೆ ಸೀಮಿತವಾಗಿ ಪರಿಗಣಿಸದೆಯೇ ಸಂಪೂರ್ಣ ಸ್ಮಾರ್ಟ್ಫೋನ್ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಪರಾಮಶಿಸುವುದು ಅತ್ಯಗತ್ಯ.
ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸುವಂತೆ ಹೈಕೋರ್ಟ್ ಕೂಡ ಇತ್ತೀಚೆಗೆ ಮೌಖಿಕ ರೂಪದ ಸಲಹೆ ನೀಡಿರುವುದು ಗಮನಾರ್ಹವಾಗಿದೆ. 2020 ಮತ್ತು 2021ನೇ ಸಾಲಿನಲ್ಲಿ ನಾವೇ ಮಕ್ಕಳ ಕೈಗೆ ಮೊಬೈಲ್ಫೋನ್ ಕೊಟ್ಟಿದ್ದೇವೆ. ಕೋವಿಡ್ ಮಹಾಮಾರಿ ಹರಡಿದ ಈ ಅವಧಿಯಲ್ಲಿ ಲಾಕ್ಡೌನ್ ಹೇರಿದ ಸಂದರ್ಭದಲ್ಲಂತೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ಫೋನ್ ಅನಿವಾರ್ಯ ಎಂಬಂತಹ ಪರಿಸ್ಥಿತಿಯೇ ಸೃಷ್ಟಿಯಾಯಿತು. ಆನ್ಲೈನ್ ತರಗತಿಗಳು ಕೂಡ ನಡೆದವು. ಕೋವಿಡ್ ಮರೆಯಾದ ನಂತರವೂ ನೋಟ್ಸ್ಗಳಿಗೆ, ಮನೆಪಾಠಕ್ಕೆ, ತರಗತಿ ಸಂಬಂಧಿ ಮಾಹಿತಿಗಳ ರವಾನೆಗೆ ಮೊಬೈಲ್ಫೋನ್ ಬಳಕೆಯನ್ನು ಶಾಲೆ ಹಾಗೂ ವಿದ್ಯಾರ್ಥಿಗಳು ಮುಂದುವರಿಸಿಕೊಂಡೇ ಬಂದಿದ್ದಾರೆ.
ಮೊಬೈಲ್ಫೋನ್ ಈಗ ಎಲ್ಲರಿಗೂ ಅಚ್ಚುಮೆಚ್ಚು ಹಾಗೂ ಅನಿವಾರ್ಯ ಉಪಕರಣವಾಗಿ ಪರಿಣಮಿಸಿದೆ. ಮನೆಯಲ್ಲೇ ಇರಲಿ, ಕಚೇರಿಗೆ ಹೋಗಿರಲಿ, ಹೊರಗಡೆಯೇ ತಿರುಗಾಡುತ್ತಿರಲಿ; ಯಾವುದೇ ವಸ್ತು ಜತೆಗಿಲ್ಲದಿದ್ದರೂ ಮೊಬೈಲ್ಫೋನ್ ಮಾತ್ರ ಪ್ರತಿಕ್ಷಣದ ಸಂಗಾತಿಯೇ ಆಗಿದೆ. ವಯಸ್ಕರರೇ ಇದರ ಆಕರ್ಷಣೆಗೆ ಸಿಲುಕಿರುವಾಗ ಇನ್ನು ಮಕ್ಕಳು ಇದರಿಂದ ದೂರವಿರಲು ಹೇಗೆ ಸಾಧ್ಯ? ಮಕ್ಕಳ ಹಕ್ಕುಗಳ ಆಯೋಗವು ಕೋರಿರುವಂತೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿದರೂ ಇದನ್ನು ವಾಸ್ತವವಾಗಿ ಕಾರ್ಯರೂಪಕ್ಕೆ ತರುವುದು ಸುಲಭದ ಸಂಗತಿಯಲ್ಲ. ಮನೆಯಲ್ಲಿ ಪಾಲಕರು ಬಳಸುವ ಮೊಬೈಲ್ಫೋನ್ ಇಲ್ಲವೇ ಕಂಪ್ಯೂಟರ್ ಮೂಲಕ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮೊಬೈಲ್ಫೋನ್ ಬಳಕೆಯು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಮಕ್ಕಳ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಬಳಕೆಯಿಂದಾಗಿ ಕಣ್ಣುಗಳು ನಷ್ಟಕ್ಕೀಡಾಗುವ ಸಾಧ್ಯತೆಗಳಿರುತ್ತವೆ. ನಿದ್ರಾಹೀನತೆ, ಖಿನ್ನತೆ, ಮಾನಸಿಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ನಿರಂತರ ಬಳಕೆಯಿಂದಾಗಿ ಭುಜಗಳು ಮತ್ತು ಕೈಗಳ ಕೀಲುಗಳಲ್ಲಿ ದೀರ್ಘಕಾಲದ ನೋವು ಉಂಟಾಗುತ್ತದೆ. ಸ್ಮಾರ್ಟ್ಫೋನ್ಗಳ ವಿಕಿರಣದಿಂದ ಕ್ಯಾನ್ಸರ್ ಬರುವ ಅಪಾಯವೂ ಇರುತ್ತದೆ. ಹೀಗಾಗಿ, ಸಾಮಾಜಿಕ ಜಾಲ ತಾಣ ಮಾತ್ರವಲ್ಲದೆ, ಸಂಪೂರ್ಣ ಸ್ಮಾರ್ಟ್ಫೋನ್ನಿಂದಲೇ ಮಕ್ಕಳನ್ನು ದೂರವಿಡುವುದು ಅತ್ಯಗತ್ಯವಾಗಿದೆ. ಆದರೆ, ಮಾಹಿತಿ ತಂತ್ರಜ್ಞಾನ ಕ್ರಾಂತಿಯ ನಂತರ ಇಂಟರ್ನೆಟ್ ಬಳಕೆ ಕೆಲವೊಂದು ಶೈಕ್ಷಣಿಕ ಮಾಹಿತಿಗೆ ಅನಿವಾರ್ಯವಾಗಿ ಪರಿಣಮಿಸಿದೆ. ಹೀಗಾಗಿ, ಹೆತ್ತವರ ಸಮ್ಮುಖದಲ್ಲಿ ಮಾತ್ರವೇ ಮೊಬೈಲ್ಫೋನ್ ಬಳಕೆಗೆ ಆಸ್ಪದ ನೀಡುವಂತಾಗಬೇಕು. ಅಪ್ರಾಪ್ತ ವಯಸ್ಕರರು ಜಾಲತಾಣದಲ್ಲಿ ಖಾತೆ ತೆರೆಯದಂತೆ ಪೋಷಕರು ಎಚ್ಚರ ವಹಿಸಬೇಕು. ಸರಳವಾಗಿ ಹೇಳುವುದಾದರೆ ಸ್ಮಾರ್ಟ್ಫೋನ್ ಅಪಾಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಹಾಗೂ ಸೂಕ್ತ ಬಳಕೆ ಕುರಿತ ಶಿಕ್ಷಣ ನೀಡುವ ಅಗತ್ಯತೆಯು ಈ ಸಂದರ್ಭದಲ್ಲಿ ಕಂಡುಬರುತ್ತದೆ.