

ರಾಜ್ಯದಲ್ಲಿ ಒಂದೆಡೆ ಆರ್ಥಿಕ ಅಭಿವೃದ್ಧಿಯ ಚಿತ್ರಣವನ್ನು ಬಿಂಬಿಸುತ್ತಿದ್ದರೂ, ಮತ್ತೊಂದೆಡೆ ಆರ್ಥಿಕ ಸಂಕಷ್ಟದ ತೀವ್ರತೆಯೂ ಅಷ್ಟೇ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದಕ್ಕೆ ಜ್ವಲಂತ ನಿದರ್ಶನ ಸಂಬಳ ಸಮಸ್ಯೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸಕಾಲಕ್ಕೆ ವೇತನ ಪಾವತಿಯಾಗದೆ ಸಿಬ್ಬಂದಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಅಷ್ಟೇ ಅಲ್ಲ, ಇದರಿಂದ ನೌಕರರ ಕಾರ್ಯದಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕೆಲಸದ ಸ್ಥಳದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಲವು ತಿಂಗಳುಗಳ ಕಾಲ ವೇತನ ಪಾವತಿಯಾಗದೆ ಇರುವುದರಿಂದ ನೌಕರರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಿರುವ ಘಟನೆಗಳು ಸಂಭವಿಸುತ್ತಿವೆ.
ಕಳೆದ ಮೂರು ತಿಂಗಳಿಂದ ವೇತನ ಸಿಗದೆ ಸಂಕಷ್ಟಕ್ಕೀಡಾದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು ಮಳಖೇಡದ ಮೇಲ್ವಿಚಾರಕಿ ಭಾಗ್ಯವತಿ ಅಗ್ಗಿಮಠ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ‘ನನ್ನ ಜೀವನ ನಡೆಸಲು, ಊಟ ಮಾಡಲು ಕಳೆದ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಇದು ನನ್ನ ಸಾವಲ್ಲ, ಕರ್ನಾಟಕದ ಗ್ರಂಥಾಲಯಗಳಲ್ಲಿ ಕೆಲಸದಲ್ಲಿ ಇರುವ ಲಕ್ಷಾಂತರ ಜನರ ಸಾವು’ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ. ಈ ಘಟನೆ ಭಾರಿ ಆಘಾತ ಸೃಷ್ಟಿಸಿದ್ದು, ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಣಕಿಸುವಂತಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ) ಅಡಿ ರಾಜ್ಯದ ಆರೋಗ್ಯ ಇಲಾಖೆ ಕಚೇರಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿಗೂ ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ 30 ಸಾವಿರ ನೌಕರರು ಚಿಂತಾಗ್ರಸ್ತರಾಗಿದ್ದಾರೆ. ಅಕ್ಟೋಬರ್ ತಿಂಗಳು ಅರ್ಧ ಕಳೆದರೂ ಜುಲೈ ತಿಂಗಳ ವೇತನ ಪಾವತಿಯಾಗಿಲ್ಲ. ಸಂಬಳ ವಿಳಂಬಕ್ಕೆ ತಾಂತ್ರಿಕ ಕಾರಣದ ನೆಪ ಹೇಳಲಾಗುತ್ತಿದ್ದು, ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯದ 48 ಮಂದಿ ಹೊರಗುತ್ತಿಗೆ ನೌಕರರಿಗೆ ಕೂಡ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ಜುಲೈನಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಒಂದು ತಿಂಗಳ ವೇತನ ನೀಡಲಾಗಿತ್ತು. ಬಳಿಕ ಮತ್ತೆ ಅದೇ ಸಮಸ್ಯೆ ಮರುಕಳಿಸಿದೆ.
ಇದು ಒಂದೆರಡು ಇಲಾಖೆಗಳ ಸಮಸ್ಯೆಯಲ್ಲ. ಹಲವೆಡೆ ಇದೇ ಸ್ಥಿತಿ ಇದ್ದು, ನೌಕರರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ‘ಗ್ಯಾರಂಟಿ’ಗಳ ಭರಾಟೆಯಲ್ಲಿ ಖಜಾನೆ ಖಾಲಿಯಾಗುತ್ತಿದೆ, ಅಭಿವೃದ್ಧಿ ಯೋಜನೆಗಳಿಗೆ ಹಣವೇ ಸಿಗುತ್ತಿಲ್ಲ ಎಂದು ಪ್ರತಿಪಕ್ಷಗಳು ಅರೋಪಿಸುತ್ತಿದ್ದರೂ, ಸರ್ಕಾರ ಉಚಿತ ಯೋಜನೆಗಳನ್ನು ಸಮರ್ಥಿಸಿಕೊಂಡು ಬಂದಿದೆ. ಆದರೆ, ಗ್ರಂಥಪಾಲಕರು, ಮೇಲ್ವಿಚಾರಕರು ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳತ್ತ ನಿರ್ಲಕ್ಷ್ಯ ತಳೆದಿದ್ದರ ಪರಿಣಾಮವೇ ಆತ್ಮಹತ್ಯೆಯಂಥ ಶೋಚನೀಯ ಘಟನೆ ಸಂಭವಿಸಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕು. ಸಂಬಳದ ಸಕಾಲಿಕ ಪಾವತಿ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಪರಾಮಶಿಸಿ, ಆ ನಿಟ್ಟಿನಲ್ಲಿರುವ ತೊಂದರೆಗಳನ್ನು ನಿವಾರಿಸಬೇಕು. ನೌಕರರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು, ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು.