ಇಂದು ಜಯಂತಿ; ಭವಸಾಗರ ದಾಟಿಸು ನಿಜಶರಣ ಅಂಬಿಗರ ಚೌಡಯ್ಯ...

xcvxcvxcvxcv
Published on
ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ಏಕದೇವೋಪಾಸನೆ, ಇಷ್ಟಲಿಂಗ ನಿಷ್ಠೆ ಈ ಎಲ್ಲ ವಿಶೇಷತೆಗಳನ್ನು ಕಾಣಬಹುದು. ಇವರ ವಚನಗಳು ಅಧರಕ್ಕೆ ಕಹಿಯಾದರೆ ಉದರಕ್ಕೆ ಸಿಹಿ.
ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಅಂಬಿಗರ ಚೌಡಯ್ಯ ಆ ಕಾಲದ ಅಸಂಖ್ಯಾತ ಶರಣ ಸಂಕುಲದಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿರುವ ವೀರಗಣಾಚಾರಿ, ತತ್ವನಿಷ್ಠ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರನಾಗಿ ಕ್ರಾಂತಿಯ ಕೆಂಡದುಂಡೆಯಾಗಿ ಹೊರಹೊಮ್ಮುತ್ತಾರೆ. ಅನೇಕ ಬಿರುದಾಂಕಿತ ಚೌಡಯ್ಯನವರಿಗೆ ಡಾ. ಜಿ ಎಸ್. ಶಿವರುದ್ರಪ್ಪನವರು ಹೀಗೆ ಉದ್ಗಾರವೆತ್ತಿದ್ದಾರೆ- ‘ಮುಚ್ಚುಮರೆಯಿಲ್ಲದೆ ಬಿಚ್ಚು ಮನಸ್ಸಿನ ಕಂಡುದನ್ನು ಕಂಡಂತೆ ಹೇಳುವ ಕೆಚ್ಚು; ಡಂಭಾಚಾರವನ್ನು ಕಂಡರೆ ಸಾತ್ವಿಕವಾದ ರೊಚ್ಚು; ಇದು ವ್ಯಕ್ತಿತ್ವದ ಪಡಿಅಚ್ಚು; ನಿಜದ ನಗಾರಿ ನಿರ್ಭಯತೆಯ ಭೇರಿ ಅನುಭವವಿಹಾರಿ ಚಿನ್ಮಯ ಚಕೋರಿ’ ಎಂದು ಕಾವ್ಯಾನಂದದ ಕಾವ್ಯವಾಣಿ ನುಡಿದಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಲ್ಲಿದೆ ಚೌಡಯ್ಯದಾನಪುರ. 12ನೇ ಶತಮಾನದಲ್ಲಿ ಚಂದ್ರಾಪುರ, ಶಿವಪುರ, ನರಸೀಪುರ- ಇವು ತ್ರಿಪುರಗಳಾಗಿದ್ದು, ಈ ತ್ರಿಪುರಗಳಲ್ಲಿ ಶಿವಪುರ ಇಂದಿನ ಚೌಡಯ್ಯದಾನಪುರ, ಅಂಬಿಗರ ಚೌಡಯ್ಯನವರ ಜನ್ಮಸ್ಥಳ ಎಂಬುದು ಆ ಭಾಗದ ಸುತ್ತಮುತ್ತಲಿನ ಊರುಗಳಲ್ಲಿ ಜನರು ಆಡುವ ಭಾಷೆ ಆಧಾರದ ಮೇಲೆ ಶ್ರುತಪಡುತ್ತದೆ. ಅಲ್ಲದೇ ಚೌಡಯ್ಯ ಶರಣರು ತಮ್ಮ ವಚನಗಳಲ್ಲಿ ಬಳಸಿದ ಬೈಗುಳಗಳು ಇಲ್ಲಿ ಇಂದಿಗೂ ಬಳಕೆಯಲ್ಲಿವೆ. ಪೊ›. ಡಾ. ಬಸವರಾಜ ಸಿದ್ದಾಶ್ರಮ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸ್ಥಳೀಯವಾಗಿ ಅಧ್ಯಯನ ಮಾಡಿ ಇದನ್ನು ಒಪ್ಪಿಕೊಳ್ಳುತ್ತಾರೆ. ತಂದೆ ವೀರುಪಾಕ್ಷ, ತಾಯಿ ಪಂಪಾದೇವಿಯ ಪುಣ್ಯಗರ್ಭದಲ್ಲಿ 1120ರ ಜನವರಿ 21ರಂದು ಜನಿಸಿ ತ್ರಿಪುರಗಳಲ್ಲಿ ಒಂದಾದ ನರಸೀಪುರದಲ್ಲಿ ಇರುವ ಉದ್ದಾಲಕ ಮುನಿಗಳ ಆಶ್ರಮದಲ್ಲಿ ಸಕಲ ವಿದ್ಯೆಗಳನ್ನು ಪಡೆಯುತ್ತಾರೆ.

ಗ್ರಾಮದ ಮುಂದಿರುವ ತುಂಗಭದ್ರಾ ನದಿಯಲ್ಲಿ ದೋಣಿ ನಡೆಸುವ ಅಂಬಿಗ ಕಾಯಕ ವೃತ್ತಿ ಕೈಗೊಂಡು ಸದ್ಗುಣ ಸಂಪನ್ನೆಯಾದ ಶಿವಶರಣೆ ಸುಲೋಚನೆ ಎಂಬ ವಧುವನ್ನು ವಿವಾಹವಾಗಿ ಗೃಹಸ್ಥ ಜೀವನಕ್ಕೆ ಕಾಲಿಡುತ್ತಾರೆ. ಬಸವಾದಿ ಶರಣರ ಚಿಂತನೆಯಿಂದ ಪ್ರಭಾವಿತರಾಗಿ ದಂಪತಿ ಸಮೇತ ಅಂದಿನ ಕಲ್ಯಾಣ, ಇಂದಿನ ಬಸವ ಕಲ್ಯಾಣ(ಬೀದರ ಜಿಲ್ಲೆ)ಕ್ಕೆ ಪ್ರವೇಶಿಸಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಭಾಗವಹಿಸಿ ಶೂನ್ಯಪೀಠಾದ್ಯಕ್ಷರಾದ ಅಲ್ಲಮಪ್ರಭುಗಳು, ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಶಿವಯೋಗಿ ಸಿದ್ದರಾಮೇಶ್ವರರು, ಹಡಪದ ಅಪ್ಪಣ್ಣ ಮಡಿವಾಳ ಮಾಚಯ್ಯ, ನುಲೀಯ ಚಂದಯ್ಯ ಮುಂತಾದ ಶರಣರ ಸಭೆಯಲ್ಲಿ ಅನುಭಾವ ಚಿಂತನೆ ಆರಂಭವಾಗಿತ್ತು. ಅಲ್ಲಮಪ್ರಭುದೇವರು ‘ಇಲ್ಲಿ ನದಿಗಳೇ ಇಲ್ಲ, ಇದು ಬಯಲುಸೀಮೆ. ಇಲ್ಲಿ ನೀವು ಅಂಬಿಗ ಕಾಯಕ ಹೇಗೆ ಮಾಡುತ್ತಿರಿ?’ ಎಂದು ಅನುಭಾವಿಕ ಅರ್ಥದಲ್ಲಿ ಪ್ರಶ್ನೆ ಮಾಡಿದಾಗ ಅಂಬಿಗರ ಚೌಡಯ್ಯ ಮಾರ್ವಿುಕವಾದ ಉತ್ತರವನ್ನು ನೀಡುತ್ತಾರೆ. ‘ತಡೆ ನಡೆಯಿಲ್ಲದ ಮಹಾನದಿಯಲ್ಲಿ ಒಡಲಿಲ್ಲದಂಬಿಗ ಬಂದಿದ್ದೇನೆ ಹಿಡಿವ ಬಿಡುವ ಮನವ ಬೆಲೆಗೊಟ್ಟಡೆ ಕಡೆಗಣಿಸಿ ಹಾಯಿಸುವೆ ಮಹಾಹೊಳೆಯ. ನುಡಿಯಿಲ್ಲದ ನಿಸ್ಸೀಮ ಗ್ರಾಮದಲ್ಲಿರಿಸುವೆನೆಂದಾತನಂಬಿಗರ ಚೌಡಯ್ಯ’ ಎಂಬ ಚೌಡಯ್ಯ ಶರಣರ ಉತ್ತರವನ್ನು ಕಂಡು ಶಿವಶರಣರೆಲ್ಲ ಸಂತುಷ್ಟಗೊಂಡು ಜಯಘೋಷ ಮಾಡುತ್ತಾರೆ. ಆಗ ಬಸವಣ್ಣನವರು ‘ನೀವು ಅಸಾಮಾನ್ಯ ಅನುಭಾವಿಗಳು. ನಂಬಿದವರಿಗೆ ಇಂಬಿಟ್ಟು ಕಡೆಗೆ ಹಾಯಿಸುವ ನಿರಾಕಾರದ ಪರಶಿವನ ನಿಲುವು ನಿಮ್ಮಲ್ಲಿದೆ. ನೀವು ಅನುಭವ ಮಂಟಪದ ಅರ್ನ್ಯಘರತ್ನ’ ಎಂದು ಗುಣಗಾನ ಮಾಡಿ ‘ಶಿವಶರಣರೆಲ್ಲರಲ್ಲಿ ನಿಜಶರಣ’ ಎಂದು ಬಿರುದಾಂಕಿತ ನೀಡಿ ಗೌರವಿಸುತ್ತಾರೆ.

ಕಲ್ಯಾಣದಲ್ಲಿ ತ್ರಿಪುರಾಂತಕ ಕೆರೆಯಲ್ಲಿ ದೋಣಿ ನಡೆಸುವ ಕಾಯಕ ಕೈಗೊಂಡು ಕಾಯಕ ದಾಸೋಹ, ಶಿವಯೋಗ ಸಾಧನೆಯನ್ನು ಆಚರಿಸುತ್ತಾ, ಸಾವಿರ ಸಾವಿರ ವಚನಗಳನ್ನು ಬರೆಯುತ್ತಾರೆಂದು ತಿಳಿದು ಬರುತ್ತದೆ. ಆದರೆ ಕಲ್ಯಾಣ ಕ್ರಾಂತಿಯಲ್ಲಿ ಎಲ್ಲವೂ ನಾಶವಾಗಿ ಕೇವಲ 330 ವಚನಗಳು ನಮಗೆ ಇಂದು ದೊರೆಯುತವೆ. ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ. ಕಲ್ಯಾಣ ಕ್ರಾಂತಿಯಲ್ಲಿ ಶರಣಧರ್ಮ ರಕ್ಷಣೆ, ವಚನ ಸಾಹಿತ್ಯ ಉಳಿವಿನಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖವಾದದ್ದು. ಮಗುವಿನಂತೆ ಬೆನ್ನಿಗೆ ವಚನ ಸಾಹಿತ್ಯ ಕಟ್ಟುಗಳನ್ನು ಕಟ್ಟಿಕೊಂಡು ಖಡ್ಗ ಹಿಡಿದು ಹೋರಾಡಿದ ವೀರಗಣಾಚಾರಿ ಶರಣರು ಅವರು. ಶಿವಶರಣರೆಲ್ಲ ಕ್ರಾಂತಿಯಲ್ಲಿ ಚದುರಿ ಹೋದಾಗ ಕಲ್ಯಾಣದಿಂದ ಉಳವಿಯ ಮಾರ್ಗ ಹಿಡಿದ ಚೆನ್ನಬಸವಣ್ಣನವರ ತಂಡದಲ್ಲಿ ಚೌಡಯ್ಯ ಶರಣರು ಇದ್ದು ಉಳವಿಯ ದಟ್ಟ ಕಾಡಿನ ಗವಿಗಳಲ್ಲಿ ವಚನ ಸಾಹಿತ್ಯ ರಕ್ಷಣೆ ಆದಾಗ ಮರಳಿ ತನ್ನ ಜನ್ಮಭೂಮಿಯಾದ ಶಿವಪುರಕ್ಕೆ(ಚೌಡಯ್ಯದಾನಪುರ) ಬಂದು ತುಂಗಭದ್ರಾ ನದಿಯಲ್ಲಿ ದೋಣಿ ಕಾಯಕ ಮಾಡುತ್ತಾ ಮೂಢನಂಬಿಕೆ, ಕಂದಾಚಾರ, ವೈದಿಕತೆಯನ್ನು ವಿರೋಧಿಸುತ್ತಾ ಶಿವಾನುಭವ, ವಚನಗಳ ಚಿಂತನೆ, ಶರಣ ತತ್ವವನ್ನು ಪ್ರಚಾರಗೊಳಿಸತೊಡಗಿದರು.

ಜನರಿಗೆ ಅಂಟಿರುವ ಕ್ಷಯರೋಗ, ಕುಷ್ಠರೋಗ ಇತ್ಯಾದಿ ರೋಗರುಜಿನಗಳನ್ನು ಭಸ್ಮ(ವಿಭೂತಿ ಗಟ್ಟಿ )ಮಂತ್ರ, ಪಾದೋದಕ ಪ್ರೋಕ್ಷಣೆಯಿಂದ ನಿವಾರಿಸುತ್ತಿದ್ದರು. ತುಂಬಿದ ಹೊಳೆಯಲ್ಲಿ ಕಲ್ಲಿನ ದೋಣಿ ನಡೆಸಿ ಪವಾಡಗೈಯುತ್ತಾ ಗುತ್ತಲರಸನ ಮಗ ಹಾವು ಕಚ್ಚಿ ಸತ್ತಾಗ ಭಸ್ಮ(ವಿಭೂತಿ ) ಮಂತ್ರ ಪಾದೋದಕ ಪ್ರೋಕ್ಷಣೆಯಿಂದ ಮರಳಿ ಬದುಕಿಸಿ ಪವಾಡಗೈಯುತ್ತಾರೆ. ಇದರಿಂದ ಸಂತಸಗೊಂಡ ಗುತ್ತಲರಸನು ಗುರುಕಾಣಿಕೆಯಾಗಿ ಪೂರ್ವ-ಪಶ್ಚಿಮಕ್ಕೆ 14 ಮೈಲು, ದಕ್ಷಿಣ-ಉತ್ತರಕ್ಕೆ 7 ಮೈಲು ಭೂಮಿಯನ್ನು ಶರಣರ ಪಾದಕ್ಕೆ ಅರ್ಪಿಸುತ್ತಾನೆ. ಕಾಲಾನಂತರ ಚೌಡಯ್ಯ ಶರಣರು ತನ್ನ ಶಿಷ್ಯನಾದ ಶಿವದೇವಮುನಿಗಳಿಗೆ ಆ ಭೂಮಿಯನ್ನು ಧಾನವಾಗಿ ನೀಡಿ ಅದನ್ನು ಬಡವರು, ರೋಗಿಗಳ, ನೊಂದವರ, ದೀನದಲಿತರ ಬವಣೆ ಹಿಂಗಲು ಬಳಸಬೇಕೆಂದು ಅಪ್ಪಣೆ ಮಾಡುತ್ತಾರೆ.

ಅಂಬಿಗರ ಚೌಡಯ್ಯನವರಿಗೆ ಪುರವರ(ಪುರವಂತ) ಎಂಬ ಮಗ ಇದ್ದು, ತಂದೆಯ ಗಣಾಚಾರದ ಬೆಡಗಿನ ಕಾಲಜ್ಞಾನದ ವಚನಗಳನ್ನು ಹಾಗೂ ಕಲ್ಯಾಣದ ಶಿವಶರಣರ ವಚನಗಳನ್ನು ಪಟ್ಟಣಕ್ಕೆ ಪಂಚರಾತ್ರಿ ಹಳ್ಳಿಗೆ ಏಕರಾತ್ರಿಯಂತೆ ಸಂಚರಿಸಿ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರಚಾರ ಪ್ರಸಾರ ಮಾಡುತ್ತಾ ಪುರವಂತಿಕೆಯ ಮೂಲಪುರುಷನಾಗುತ್ತಾನೆ.

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ, ಏಕದೇವೋಪಾಸನೆ, ಇಷ್ಟಲಿಂಗ ನಿಷ್ಠೆ, ಬೆಡಗು ಕಾಲಜ್ಞಾನ ವಚನಗಳು, ಸಂಕೀರ್ಣ ವಚನಗಳು, ಜೀವನ್ಮುಕ್ತನ ಸ್ಥಿತಿ, ನೈತಿಕ ಮೌಲ್ಯ ವಚನಗಳು, ಆಧ್ಯಾತ್ಮಿಕತೆ, ವಿಡಂಬನೆ, ಸೃಷ್ಟಿಯ ಕ್ರಮ ಈ ಎಲ್ಲ ವಿಶೇಷತೆಗಳನ್ನು ಕಾಣಬಹುದು.

ಚೌಡಯ್ಯನವರು ತುಂಬಿದ ನದಿಗೆ ದೋಣಿಗೆ ಹುಟ್ಟು ಹಾಕುವ ಅಂಬಿಗ ಮಾತ್ರನಲ್ಲದೇ ಭವಸಾಗರವೆಂಬ ಈ ಸಂಸಾರದ ಶರಧಿಯನ್ನು ಅರಿವೆಂಬ ಹುಟ್ಟು ಹಾಕಿ ದಾಟಿಸುವ ಕೌಶಲವುಳ್ಳವರಾಗಿದ್ದಾರೆ. ಅಪಾರ ಅನುಭಾವದ ಅಮೃತವನ್ನು ಚಾಟಿಏಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸುತ್ತಾರೆ. ಅವರದು ಚುಚ್ಚುಮಾತಿನ, ಬಿಚ್ಚು ಹೃದಯದ, ಕೆಚ್ಚಿನ ಅಮರ ವಚನಗಳು. ನುಡಿದಂತೆ ನಡೆದ; ನಡೆದಂತೆ ನುಡಿದ ಧೀರ ವೀರ ಶರಣ. ಸಮಾಜದ ವಿಮರ್ಶೆ ಮಾಡಿ, ಮೂಢನಂಬಿಕೆ ಗಳನ್ನು ಬೆರಳು ಮಾಡಿ ತೋರಿಸಿ ತಾನು ಶುದ್ಧನಾಗಿ ಸಿದ್ಧಶುದ್ಧ ಬಾಳನ್ನು ಬೆಳಗಿಸಿಕೊಂಡ ಶರಣ. ಇವರ ವಚನಗಳು ಅಧರಕ್ಕೆ ಕಹಿಯಾದರೆ ಉದರಕ್ಕೆ ಸಿಹಿ. ಇವರ ವಚನಗಳು ನುಡಿದರೆ ಏಟೊಂದು ತುಂಡೆರಡು. ಇಚ್ಛಾಮರಣ ಶಕ್ತಿಯುಳ್ಳ ಅಂಬಿಗರ ಚೌಡಯ್ಯ ಶತಾಯುಷಿಗಳಾಗಿದ್ದು, ಕೊನೆಯ ದಿನಗಳಲ್ಲಿ ಶಿವಾನುಭವ ಚಿಂತನೆಗೈಯುತ್ತಾ ಗುರುನಾಮಸ್ಮರಣೆಯೊಂದಿಗೆ ತುಂಗಭದ್ರಾನದಿಯ ತೀರದಲ್ಲಿ ಗಂಗೆಯ ಮಡಿಲಲ್ಲಿ ಬಯಲಿನಲ್ಲಿ ಬಯಲಾಗುತ್ತಾರೆ. ಇಂದಿಗೂ ನದಿತೀರದಲ್ಲಿ ಐಕ್ಯಮಂಟಪವಿದೆ. ಪಕ್ಕದಲ್ಲಿ ನರಸೀಪುರದಲ್ಲಿ ಚೌಡಯ್ಯನವರ ಗುರುಪೀಠವಿದೆ.

ಕರ್ನಾಟಕ ಸರ್ಕಾರ ಜ.21ರಂದು ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸುತ್ತಿರುವುದು ಆ ಮಹಾಶರಣರಿಗೆ ಸಂದ ಗೌರವವಾಗಿದೆ. ಕಲಬುರಗಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪನೆ ಮಾಡಿದ್ದು ಶ್ಲಾಘನೀಯ. ಕೂಡಲಸಂಗಮದ ಮಾದರಿಯಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಚೌಡಯ್ಯದಾನಪುರದಲ್ಲಿರುವ ಚೌಡಯ್ಯನವರ ಐಕ್ಯಮಂಟಪವನ್ನು ರಕ್ಷಿಸಬೇಕೆಂಬುದು ನಮ್ಮ ಹಾಗೂ ಚೌಡಯ್ಯನವರ ಎಲ್ಲ ಭಕ್ತರ ಅಪೇಕ್ಷೆಯಾಗಿದೆ.

(ಲೇಖಕರು ಹಾವೇರಿ ಜಿಲ್ಲೆ ಸುಕ್ಷೇತ್ರ ನರಸೀಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net