ಸಂಪಾದಕೀಯ | ಮಕ್ಕಳ ಬಗ್ಗೆ ಕಾಳಜಿ ಅಗತ್ಯ - ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡಬೇಕಿದೆ

Online Education
Published on

ಕರೊನಾದ ದುಷ್ಪರಿಣಾಮ ಬಹುತೇಕ ಎಲ್ಲರ ಮೇಲೂ, ಎಲ್ಲ ಕ್ಷೇತ್ರಗಳ ಮೇಲೂ ಆಗಿದೆ ನಿಜ. ಆದರೆ, ಶೈಕ್ಷಣಿಕ ವರ್ಷವೇ ತಿರುವುಮುರುವಾಗಿರುವದರಿಂದ ಹೆಚ್ಚು ಸಮಸ್ಯೆ ಮತ್ತು ಸಂದಿಗ್ಧತೆಗೆ ಒಳಗಾಗಿರುವವರು ಮಕ್ಕಳು ಮತ್ತು ಅವರ ಪಾಲಕರು. ಲಾಕ್​ಡೌನ್ ತೆರವಿನ ಬಳಿಕ ಕೈಗಾರಿಕೆ ಸೇರಿ ಇತರ ರಂಗಗಳು ಮತ್ತೆ ಕಾರ್ಯಾರಂಭ ಮಾಡಿವೆ ಎಂಬುದೇನೋ ನಿಜ. ಆದರೆ, ಶಾಲೆಗಳನ್ನು ಹೀಗೆ ಪುನರಾರಂಭಿಸುವ ಪ್ರಕ್ರಿಯೆ ಸುಲಭವಾದದ್ದಲ್ಲ. ಸೋಂಕಿನ ಪ್ರಸರಣ ಮತ್ತು ಅಪಾಯ ಪೂರ್ತಿ ತಗ್ಗಿಲ್ಲವಾದ್ದರಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಪರ-ವಿರೋಧ ಅಭಿಪ್ರಾಯ ಬರುತ್ತಿವೆ.

ಈಗಿನ ಸನ್ನಿವೇಶದಲ್ಲಿ, ಯಾವಾಗ ಶಾಲೆಗಳು ಆರಂಭಗೊಳ್ಳಲಿವೆ ಎಂಬುದನ್ನು ನಿಖರವಾಗಿ ಹೇಳಲು ಸರ್ಕಾರಕ್ಕೂ ಸಾಧ್ಯವಾಗದಂಥ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾದರೆ ಮಕ್ಕಳ ಕಲಿಕೆ ಹೇಗೆ, ಈ ಶೈಕ್ಷಣಿಕ ವರ್ಷ ಹೀಗೇ ಕಳೆದು ಹೋಗುತ್ತದೆಯೇ, ಬೌದ್ಧಿಕ ವಿಕಾಸದ ಪಾಡೇನು? ಎಂಬ ಸರಣಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ದೊರೆತಿಲ್ಲ. ಮಕ್ಕಳು ಮನೆಯಲ್ಲಿಯೇ ಇದ್ದು, ಲವಲವಿಕೆ ಕಳೆದುಕೊಳ್ಳುತ್ತಿದ್ದಾರೆ. ಹೇಗಾದರೂ ಮಾಡಿ ಪಾಠಗಳನ್ನು ಮುಂದುವರಿಸಬೇಕೆಂದು ನಿರ್ಧರಿಸಿ ಆನ್​ಲೈನ್ ಮೂಲಕ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಈ ಆನ್​ಲೈನ್ ಕಲಿಕೆಯ ಸಮಸ್ಯೆಗಳು ಕೂಡ ಅಷ್ಟಿಷ್ಟಲ್ಲ. ತಂತ್ರಜ್ಞಾನದ ಲಭ್ಯತೆ ಎಲ್ಲರಿಗೂ ತಲುಪಿಲ್ಲ. ಸ್ಮಾರ್ಟ್​ಫೋನ್​ಗಳನ್ನು ಕೊಳ್ಳುವ ಶಕ್ತಿ ತುಂಬ ಜನರಲ್ಲಿ ಇಲ್ಲ. ಅದಲ್ಲದೆ, ಮೊಬೈಲ್ ಅಥವಾ ಕಂಪ್ಯೂಟರ್ ವೀಕ್ಷಣೆಯ ಅವಧಿ ಹೆಚ್ಚಾಗಿರುವುದರಿಂದ, ಮಕ್ಕಳಿಗೆ ಆರೋಗ್ಯ ಸಮಸ್ಯೆಗಳೂ ಕಾಡುತ್ತಿವೆ.

ಕರೊನಾ ಕಾಲಿಟ್ಟ ಬಳಿಕ ರಾಜ್ಯಾದ್ಯಂತ ಮಕ್ಕಳ ಕಣ್ಣಿನ ಸಮಸ್ಯೆ ಪ್ರಕರಣಗಳ ಸಂಖ್ಯೆ ಶೇಕಡ 30ರಷ್ಟು ಹೆಚ್ಚಾಗಿದೆ. ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್ ಶಿಕ್ಷಣದಿಂದಾಗಿ ಮಕ್ಕಳು ಕಣ್ಣನೇ ಕಳೆದುಕೊಳ್ಳಬೇಕಾದ ಭೀತಿ ಶುರುವಾಗಿದೆ. ಆನ್​ಲೈನ್ ಕಲಿಕೆ ಅವಧಿ ವಿಸ್ತರಣೆ ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟು ಮಾತ್ರವಲ್ಲ, ಮಕ್ಕಳು ಏಕತಾನತೆಯನ್ನು ಅನುಭವಿಸುವಂತಾಗಿದ್ದು, ಚಟುವಟಿಕೆಗಳಿಲ್ಲದೆ ಮಂಕಾಗುತ್ತಿದ್ದಾರೆ. ಶಾಲೆ ಇದ್ದಾಗ ಪಾಠಗಳ ಜತೆಗೆ ಆಟೋಟಕ್ಕೂ ಪ್ರಾಶಸ್ಱ ಇರುತ್ತಿತ್ತು. ಈಗ ಕರೊನಾ ಭಯದಿಂದ ಪಾಲಕರು ಮಕ್ಕಳನ್ನು ಮನೆ ಹೊರಗಡೆ ಕಳಿಸುವಂತೆಯೂ ಇಲ್ಲ.

ಆದರೆ, ದಿನವೂ ಅದೇ ಆನ್​ಲೈನ್ ತರಗತಿ (ಈ ರೀತಿಯ ಪಾಠಗಳು ಅರ್ಥವಾಗುವುದೇ ಇಲ್ಲ ಎಂದು ಹೇಳುವ ಮಕ್ಕಳ ಸಂಖ್ಯೆಯೇ ಹೆಚ್ಚು), ಅದೇ ಹೋಂವರ್ಕ್​ನ ದಿನಚರಿ ಮಕ್ಕಳ ಕ್ರಿಯಾಶೀಲತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ, ತಂದೆ-ತಾಯಿ ಇಬ್ಬರೂ ಉದ್ಯೋಗಕ್ಕೆ ಹೋಗುವಂಥ ಮನೆಗಳಲ್ಲಂತೂ ಮಕ್ಕಳು ಇಡೀ ದಿನ ಒಂಟಿತನದ ಭಾವ ಎದುರಿಸುತ್ತಾರೆ. ದೈಹಿಕ ಆರೋಗ್ಯವನ್ನು ಕಾಪಾಡುವ ಜತೆಗೆ ಮಕ್ಕಳ ಮಾನಸಿಕ ಸ್ವಾಸ್ಥ್ಯದ ಕಡೆಗೂ ಅಷ್ಟೇ ಗಮನ ನೀಡಬೇಕಿದೆ. ಇಲ್ಲವಾದಲ್ಲಿ ಹೊಸ ಸಮಸ್ಯೆಗೆ ಆಹ್ವಾನ ನೀಡಿದಂತಾಗುತ್ತದೆ ಎಂಬ ತಜ್ಞರ ಎಚ್ಚರಿಕೆಯನ್ನು ಮರೆಯಬಾರದು. ಶೈಕ್ಷಣಿಕ ಸಂಸ್ಥೆಗಳು, ಪಾಲಕರು ಸಮಾಲೋಚನೆ ನಡೆಸಿ ಪರಿಹಾರ ಸೂತ್ರ ಕಂಡುಹಿಡಿಯಬೇಕು. ಈ ಮೂಲಕ ಮಕ್ಕಳ ಹಿತವನ್ನು ರಕ್ಷಿಸುವ, ಅವರ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net