

ಮಾರಕ ಕರೊನಾ ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆ. ಇದರ ಗಂಭೀರತೆ ಅರಿತು ಕೇಂದ್ರ ಸರ್ಕಾರ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಿದ್ದು, ಗುರುವಾರ ಎರಡನೇ ದಿನವನ್ನು ಪೂರೈಸಿದೆ. ಸೋಂಕನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಏಕೈಕ ಪರಿಹಾರವಾಗಿರುವುದರಿಂದ ಕೇಂದ್ರ ಅನಿವಾರ್ಯವಾಗಿಯೇ ಈ ಕ್ರಮ ಘೋಷಿಸಿದೆ. ಇಡೀ ದೇಶದ ಜನರು ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ, ಏಪ್ರಿಲ್ 14ರ ಹೊತ್ತಿಗೆ ಸೋಂಕನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯವಾಗಿದೆ. ಆದರೆ, ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಬಡವರು, ದಿನಗೂಲಿ ನೌಕರರು, ಕಾರ್ವಿುಕರ ಸಂಖ್ಯೆಯೂ ಹೆಚ್ಚು. ದಿನದ ದುಡಿಮೆ ನಿಂತಿರುವುದರಿಂದ ಅವರ ಹೊಟ್ಟೆಪಾಡು ಹೇಗೆ, ತೀರಾ ಕನಿಷ್ಠ ಅಗತ್ಯಗಳನ್ನು ಪೂರೈಸುವುದು ಹೇಗೆ ಎಂಬ ಸಂಗತಿ ಯಕ್ಷಪ್ರಶ್ನೆಯಾಗಿ ಕಾಡುತ್ತಿತ್ತು ಅಲ್ಲದೆ ಒಂದು ಬಗೆಯ ಆತಂಕಕ್ಕೂ ಕಾರಣವಾಗಿತ್ತು.
ಈ ಎಲ್ಲ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತಿರುವ ಕೇಂದ್ರ ಸರ್ಕಾರ ಗುರುವಾರ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸಂವೇದನೆ ಮೆರೆದಿದೆ. ಸಾಮಾಜಿಕ ಸುರಕ್ಷೆ, ಆಹಾರ ಭದ್ರತೆ, ಮಹಿಳೆಯರ ಯೋಗಕ್ಷೇಮ, ಕಾರ್ವಿುಕರ ಕಾಳಜಿ ಎಲ್ಲವನ್ನೂ ಈ ನಿಧಿ ಒಳಗೊಳ್ಳಲಿದೆ. ಕರ್ನಾಟಕ ಸರ್ಕಾರ ಕೂಡ ಇತ್ತೀಚೆಗಷ್ಟೇ ದಿನಗೂಲಿ ನೌಕರರಿಗೆ ಹಾಗೂ ಬಿಪಿಎಲ್ ಕಾರ್ಡದಾರರಿಗೆ ಕೆಲ ನೆರವನ್ನು ಘೋಷಿಸಿತ್ತು. ಅದರ ಬೆನ್ನಲ್ಲೇ, ಕೇಂದ್ರ ಸಕಾಲಿಕವಾಗಿ ನೆರವಿನ ರೂಪದಲ್ಲಿ ಸಮಸ್ಯೆಗೆ ಮದ್ದರೆಯಲು ಹೊರಟಿರುವುದು ಉತ್ತಮ ಹೆಜ್ಜೆ. ಈಗಿನ ಸಂಕಷ್ಟ ದೊಡ್ಡ ಪ್ರಮಾಣದಲ್ಲಿದೆ, ವಿತ್ತೀಯ ಸ್ಥಿತಿ ಪಾತಾಳದತ್ತ ಮುಖ ಮಾಡಿದೆ ಎಂಬುದು ನಿಜವೇ. ಆದರೆ, ಕರೊನಾ ಸೋಂಕಿನಿಂದ ಯಾರೂ ಮೃತಪಡಬಾರದು ಎಂಬ ಕಾಳಜಿಯನ್ನು ಹೇಗೆ ತೋರಲಾಗುತ್ತಿದೆಯೋ ಹಾಗೇ ಹಸಿವಿನಿಂದಲೂ ಯಾರೊಬ್ಬರೂ ಸಾಯುವಂತಾಗಬಾರದು ಎಂಬ ಎಚ್ಚರಿಕೆ ವಹಿಸುವುದು ಕೂಡ ಅಷ್ಟೇ ಅಗತ್ಯ.
ಗುರುವಾರ ನೆರವಿನ ಕ್ರಮಗಳನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಬಡವರಿಗೆ ತಿಂಗಳಿಗೆ 10 ಕಿಲೋ ಆಹಾರಧಾನ್ಯ ಉಚಿತವಾಗಿ ವಿತರಣೆ(80 ಕೋಟಿ ಜನರಿಗೆ ಲಾಭ), ಆರೋಗ್ಯ ಸಿಬ್ಬಂದಿಗೆ 50 ಲಕ್ಷ ರೂ.ಗಳ ವೈದ್ಯಕೀಯ ವಿಮೆ, ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ ಕಂತು ವರ್ಗಾವಣೆ, ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ 500 ರೂಪಾಯಿ ನೆರವು, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ಎರಡು ಕಂತುಗಳಲ್ಲಿ 1 ಸಾವಿರ ರೂ. ನೆರವು, ಉಜ್ವಲಾ ಫಲಾನುಭವಿಗಳಿಗೆ ಮೂರು ತಿಂಗಳು ಗ್ಯಾಸ್ ಸಿಲಿಂಡರ್ ಉಚಿತ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲದ ಪ್ರಮಾಣ ಹೆಚ್ಚಳ ಹೀಗೆ ಹಲವು ಕ್ರಮಗಳು ಈ ಹೊತ್ತಲ್ಲಿ ಸಂಕಷ್ಟದಲ್ಲಿರುವವರಿಗೆ ಭರವಸೆ ಮೂಡಿಸಲಿರುವುದಂತೂ ಹೌದು.
ಈ ಯೋಜನೆ ಮತ್ತು ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬರುವಂತಾಗಲಿ. ಆ ಮೂಲಕ ಬಡವರ್ಗ ಮತ್ತು ಕೂಲಿಕಾರ್ವಿುಕರ ಬದುಕಿನ ಬಂಡಿ ಸರಾಗವಾಗಿ ಸಾಗುವಂತಾಗಲಿ. ಸರ್ಕಾರ ತನ್ನ ಕರ್ತವ್ಯ ಮಾಡಿದೆ. ಜನರು ಕೂಡ ಮನೆಯಲ್ಲೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ವಿರುದ್ಧ ಹೋರಾಡಲಿ.