ಸಮತೋಲನ ಕಸರತ್ತು: ಜಾಗತಿಕ ಆರ್ಥಿಕ ಹಿನ್ನಡೆಯ ಪ್ರತಿಕೂಲ ವಾತಾವರಣ

Editorial
Published on

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಆರ್ಥಿಕ ಸಾಲಿನ ಮುಂಗಡಪತ್ರವನ್ನು ಬುಧವಾರ ಮಂಡಿಸಿದ್ದು, ಯಾವ ವಲಯಕ್ಕೆ ಏನು ದಕ್ಕಿದೆ, ಒಟ್ಟಾರೆ ಸ್ವರೂಪವೇನು ಎಂಬೆಲ್ಲ ಚರ್ಚೆ, ವಿಶ್ಲೇಷಣೆಗಳು ನಡೆಯುತ್ತಿವೆ. ಈ ವರ್ಷ ನಡೆಯಲಿರುವ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಈ ಸಲ ಜನಪ್ರಿಯ ಬಜೆಟ್ ಮಂಡನೆಯಾಗಬಹುದು ಎಂದು ಬಹುತೇಕವಾಗಿ ಭಾವಿಸಲಾಗಿತ್ತು. ಕರ್ನಾಟಕಕ್ಕೂ ವಿಶೇಷ ಕೊಡುಗೆ ದಕ್ಕಬಹುದು ಎಂದು ಊಹಿಸಲಾಗಿತ್ತು. ಆದರೆ, ಈ ಅಂದಾಜಿಗೆ ವ್ಯತಿರಿಕ್ತವಾಗಿ ಮುಂಗಡಪತ್ರ ರೂಪುಗೊಂಡಿದೆ ಎಂದರೆ ತಪ್ಪಲ್ಲ. ಮತಬುಟ್ಟಿ ತುಂಬಿಸುತ್ತದೆ ಎಂದು ಭಾವಿಸಲಾದ ಉಚಿತ ಕೊಡಗೆಗಳ ಘೋಷಣೆ ಅಥವಾ ಜನಪ್ರಿಯ ಯೋಜನೆಗಳ ಗೊಡವೆಗೆ ಹೋಗದ ಹಣಕಾಸು ಸಚಿವರು, ವರ್ತಮಾನದ ಸನ್ನಿವೇಶದಲ್ಲಿ ಉತ್ತಮವಾದುದನ್ನು ನೀಡಲು ಶ್ರಮಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಮೂಲಸೌಕರ್ಯಕ್ಕೆ 10 ಲಕ್ಷ ಕೋಟಿ ರೂ. ತೆಗೆದಿರಿಸಿರುವುದು, ರೈಲ್ವೆಗೆ 2.40 ಲಕ್ಷ ಕೋಟಿ ರೂ. ಒದಗಿಸಿರುವುದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು ನೀಡಿರುವುದು, ಕೃಷಿ ಸಾಲದ ಮೊತ್ತವನ್ನು 20 ಲಕ್ಷ ಕೋಟಿ ರೂ.ಗೆ ಏರಿಸಿರುವುದು... ಈ ಮುಂತಾದವು ಅಭಿವೃದ್ಧಿಯ ಮೇಲೆ ಗುರಿಯಿಟ್ಟು ತೆಗೆದುಕೊಂಡ ಕ್ರಮಗಳೆನ್ನಬಹುದು. ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಬದಲಾವಣೆ ಮಾಡುವ ಮೂಲಕ ವೇತನ ವರ್ಗಕ್ಕೆ ಸರ್ಕಾರ ಖುಷಿ ನೀಡಿದೆಯಾದರೂ, ವಾಸ್ತವದಲ್ಲಿ ಎಷ್ಟು ಜನರಿಗೆ ಇದರ ಲಾಭ ದೊರೆಯುತ್ತದೆಂಬುದು ನಂತರವೇ ಸ್ಪಷ್ಟವಾಗಬೇಕಿದೆ. ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಡೀಕರಣ ಉದ್ದೇಶದಿಂದ ಕೆಲ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಬಂಡವಾಳ ವೆಚ್ಚ ಹೆಚ್ಚಳವು ದೂರಗಾಮಿ ನೆಲೆಯಲ್ಲಿ ಅಭಿವೃದ್ಧಿಗೆ ಇಂಬುಗೊಡಬಹುದು. ಬರುವ ಆರ್ಥಿಕ ವರ್ಷದಲ್ಲಿ ಸುಮಾರು 15 ಲಕ್ಷ ಕೋಟಿ ರೂ.ಗಳ ಸಾಲ ಎತ್ತುವಳಿಗೆ ಸರ್ಕಾರ ನಿರ್ಧರಿಸಿರುವ ಬಗ್ಗೆ ಕೆಲ ಆರ್ಥಿಕ ತಜ್ಞರು ಆಕ್ಷೇಪವನ್ನೂ ಎತ್ತಿದ್ದಾರೆ.

ಬಹುತೇಕ ಎಲ್ಲ ದೇಶಗಳ ಜಿಡಿಪಿ ಕುಸಿದಿದೆ. ಸ್ವಲ್ಪ ಚೇತರಿಕೆ ಕಂಡುಬರುತ್ತಿದೆ ಎನ್ನುವ ಹೊತ್ತಲ್ಲಿ, ರಷ್ಯಾ-ಯೂಕ್ರೇನ್ ಸಮರ ಶುರುವಾಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥ ಹೊತ್ತಲ್ಲಿ ನಾಜೂಕಿನ ಹೆಜ್ಜೆ ಇರಿಸಬೇಕಾದುದು ಅನಿವಾರ್ಯ. ಸಚಿವೆ ನಿರ್ಮಲಾ ಸೀತಾರಾಮನ್ ಆ ನಿಟ್ಟಿನಲ್ಲಿ ಆಲೋಚಿಸಿದ್ದಾರೆ ಎಂಬುದಕ್ಕೆ ಮುಂಗಡಪತ್ರದಲ್ಲಿ ಪುರಾವೆಗಳು ಸಿಗುತ್ತವೆ. ಭಾರತ ಸದ್ಯ ಜಾಗತಿಕವಾಗಿ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಜಿಡಿಪಿಯನ್ನು ಐದು ಟ್ರಿಲಿಯನ್ ಡಾಲರ್​ಗಳಿಗೆ ಹೆಚ್ಚಿಸುವ ಮೂಲಕ, ಎರಡನೇ ಬೃಹತ್ ಆರ್ಥಿಕತೆಯನ್ನಾಗಿಸುವ ಕನಸನ್ನು ಪ್ರಧಾನಿ ಮೋದಿ ದೇಶದೆದುರು ಹರವಿಟ್ಟಿದ್ದಾರೆ. ಈ ಗುರಿ ತಲುಪಲು ಭಾರಿ ಕಸರತ್ತೇ ನಡೆಯಬೇಕಿದ್ದು, ಈ ಬಜೆಟ್ ಮೂಲಕ ಸರ್ಕಾರ ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವುದು ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net