ಸಂಪಾದಕೀಯ: ಚುನಾವಣೆಯಲ್ಲಿ ಹಸ್ತಕ್ಷೇಪ ಸಲ್ಲ

-67b36eebda945
Published on

ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದಕ್ಕೆ (ವೋಟರ್ ಟರ್ನ್ ಔಟ್ ಇನ್ ಇಂಡಿಯಾ) ನೆರವಾಗುವ ನೆಪದಲ್ಲಿ ಹಂಚಿಕೆ ಮಾಡಿದ್ದ 182 ಕೋಟಿ ರೂ. (21 ದಶಲಕ್ಷ ಡಾಲರ್) ಮೊತ್ತದ ನಿಧಿಯನ್ನು ಬೊಕ್ಕಸದ ವೆಚ್ಚ ಕಡಿತದ ಭಾಗವಾಗಿ ಅಮೆರಿಕದ ಸರ್ಕಾರಿ ದಕ್ಷತಾ ಇಲಾಖೆ (ಡಿಒಜಿಇ) ರದ್ದುಪಡಿಸಿದೆ. ಅಚ್ಚರಿಯೆಂದರೆ, ಇಂಥದ್ದೊಂದು ನಿಧಿ ಬರುತ್ತಿತ್ತು ಎಂಬುದೇ ಬಹುತೇಕರಿಗೆ ತಿಳಿದಿರಲಿಲ್ಲ. ಅಂದರೆ, ಈ ನಿಧಿ ರಹಸ್ಯವಾಗಿ ಬೇರೆ ಯಾವುದೇ ರಾಜಕೀಯ ಉದ್ದೇಶ ಅಥವಾ ಹಿತಾಸಕ್ತಿಗಳಿಗೆ ಬಳಸಲಾಗುತ್ತಿತ್ತೆ ಇಲ್ಲವೆ ಸರ್ಕಾರವನ್ನು ಅಸ್ಥಿರಗೊಳಿಸಲು ಉಪಯೋಗಿಸಲಾಗುತ್ತಿತ್ತೆ ಎಂಬ ಅನುಮಾನ ಸ್ವಾಭಾವಿಕವಾಗಿಯೇ ಹುಟ್ಟಿಕೊಂಡಿದೆ.

ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಮಾತ್ರವಲ್ಲ, ಇಲ್ಲಿನ ಚುನಾವಣಾ ವ್ಯವಸ್ಥೆಯೂ ಅತ್ಯಂತ ಸಮರ್ಪಕ ಮತ್ತು ಅಷ್ಟೇ ದಕ್ಷವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದಕ್ಕೆ ವಿವಿಧ ಸಂಘಸಂಸ್ಥೆಗಳು ಹಾಗೂ ಸಮಾಜದ ವಿವಿಧ ರಂಗಗಳ ಗಣ್ಯರು ಕೈಜೋಡಿಸುತ್ತಾರೆ. ಮಾಧ್ಯಮಗಳು ಕೂಡ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತವೆ ಎಂಬುದು ಗಮನಾರ್ಹ.

ಆದ್ದರಿಂದ, ಮತದಾನ ಜಾಗೃತಿ ನೆಪದಲ್ಲಿ ವಿದೇಶಿ ಹಸ್ತಕ್ಷೇಪ ಹಾಗೂ ವಿದೇಶಿ ನೆರವಿನ ಅಗತ್ಯ ಖಂಡಿತವಾಗಿಯೂ ಭಾರತಕ್ಕೆ ಇಲ್ಲ. 2024ರ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆದ 18ನೇ ಲೋಕಸಭಾ ಚುನಾವಣೆಯ ಪ್ರಕ್ರಿಯೆಯನ್ನು ಹಲವು ರಾಷ್ಟ್ರಗಳ ಪ್ರತಿನಿಧಿಗಳು ವೀಕ್ಷಿಸಿ, ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಉದ್ಯಮಿ ಎಲಾನ್ ಮಸ್ಕ್ ಕೂಡ ಇಲ್ಲಿನ ಚುನಾವಣಾ ಪ್ರಕ್ರಿಯೆ ಹಾಗೂ ಫಲಿತಾಂಶದ ನಿಖರತೆಯನ್ನು ಶ್ಲಾಘಿಸಿದ್ದರು.

ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಭಾರತದ್ದು. ಚುನಾವಣೆ ಸಡೆಸಲಾಗದಷ್ಟು ದುರ್ಬಲ ರಾಷ್ಟ್ರವಲ್ಲ. ಭಾರತ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಿಗೆ ಚುನಾವಣೆ ಹಾಗೂ ರಾಜಕೀಯ ಉದ್ದೇಶಗಳಿಗೆ ನೀಡಲು ಲಕ್ಷಾಂತರ ಡಾಲರ್ ಮೊತ್ತದ ಅನುದಾನವನ್ನು ಅಮೆರಿಕ ಮೀಸಲಿಟ್ಟಿತ್ತು. ಬಾಂಗ್ಲಾದೇಶಕ್ಕೆ 29 ದಶಲಕ್ಷ ಡಾಲರ್ ಮೀಸಲಿರಿಸಲಾಗಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಚುನಾಯಿತ ಸರ್ಕಾರವೇ ಬಿದ್ದು ಹೋಗಿ, ಪ್ರಧಾನಿಯಾಗಿದ್ದ ಶೇಖ್ ಹಸೀನಾ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾರೆ.

ಬಾಂಗ್ಲಾದೇಶ ಮತ್ತೆ ರಾಜಕೀಯ ಅಸ್ಥಿರತೆ ಮತ್ತು ಹಿಂಸೆಯಿಂದ ಬಳಲುತ್ತಿದೆ ಎಂಬುದನ್ನು ಗಮನಿಸಿದರೆ ಅಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಏನೆಲ್ಲ ಮಾಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಭಾರತದಲ್ಲೂ ವಿದೇಶಿ ಶಕ್ತಿಗಳು ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಲೇ ಬಂದಿವೆ. ಆದರೆ, ಭಾರತ ಬಲಾಢ್ಯ ಮತ್ತು ಶಕ್ತಿಶಾಲಿ ರಾಷ್ಟ್ರ. ಆದರೆ, ಈ ಹಿಂದೆ ಯಾಕೆ ಇಂಥ ಅಪಸವ್ಯ ಸಂಭವಿಸಿತು ಎಂಬುದನ್ನು ಅವಲೋಕಿಸಿ, ಮುಂದಿನ ದಿನಗಳಲ್ಲಿ ಇಂಥದ್ದೊಂದು ಪ್ರಮಾದ ಮರುಕಳಿಸದಂತೆ, ಚುನಾವಣೆ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬೆಳವಣಿಗೆಯನ್ನು ಚುನಾವಣಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net