ಸಂಪಾದಕೀಯ: ನಿರ್ಲಕ್ಷ್ಯ ಸಲ್ಲ

de
Published on

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘ ಹಾವಳಿ ಹೆಚ್ಚುತ್ತಿದ್ದರೂ, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಮತ್ತು ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಮಳೆಯ ಪ್ರಮಾಣವು ಏರಿಕೆಯಾಗಿದ್ದು, ಆಗಾಗ ಬಿಸಿಲು ಆವರಿಸಿಕೊಳ್ಳುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಆದರೆ, ಮಳೆಗಾಲದ ಆರಂಭದಲ್ಲೇ ಸನ್ನದ್ಧವಾಗಿ ಇರಬೇಕಿದ್ದ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟ. ರಾಜಧಾನಿ ಬೆಂಗಳೂರಿನಲ್ಲಂತೂ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗಿದೆ. ರಾಜ್ಯದಲ್ಲಿ 2024ರ ಆರಂಭದಿಂದ ಇಲ್ಲಿಯವರೆಗೆ ಡೆಂಘ ರೋಗದ 6,831 ಪ್ರಕರಣಗಳು ದಾಖಲಾಗಿದ್ದು, 6 ಜನ ಮೃತಪಟ್ಟಿದ್ದಾರೆ. ಕಳೆದ ಐದು ದಿನಗಳಲ್ಲೇ 644 ಡೆಂಘ ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ಸಂಭವಿಸಿದೆ. ಸ್ವಲ್ಪ ತಲೆ ನೋವು ಕಾಣಿಸಿಕೊಂಡರೂ, ಮೈ ಬಿಸಿಯಾದರೂ ಹೆದರಿ ಆಸ್ಪತ್ರೆಯತ್ತ ಓಡುವ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಬೆಂಗಳೂರೊಂದರಲ್ಲೇ 1,700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿ. ಬೆಂಗಳೂರಿನ ನಂತರ ಡೆಂಘಯ ಹೆಚ್ಚು ಪ್ರಕರಣಗಳು ಚಿಕ್ಕಮಗಳೂರು, ಮೈಸೂರು, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡುಬಂದಿವೆ. ಡೆಂಘ ಹರಡಲು ಕಾರಣವೇನು, ತಡೆಯುವುದು ಹೇಗೆ ಎಂಬುದು ಗೊತ್ತಿದ್ದರೂ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಡೆಂಘ ಸೇರಿದಂತೆ ಮಳೆಗಾಲದಲ್ಲಿ ಆವರಿಸುವ ಕಾಯಿಲೆಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಮಾಹಿತಿ ಅಷ್ಟೊಂದು ಇಲ್ಲದಿರುವುದು ಕೂಡ ಈ ಸ್ಥಿತಿಗೆ ಕಾರಣ.

ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆಯಲ್ಲಿ ತೊಡಗಿವೆ ಎಂಬ ಆರೋಪ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಮಳೆನೀರು ನಿಲ್ಲುವ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಗಳ ಸಂತತಿ ಹೆಚ್ಚುತ್ತಿದ್ದು, ಡೆಂಘ ವೇಗವಾಗಿ ಹರಡಲು ಕಾರಣವಾಗಿದೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಸ್ಥಳೀಯ ಸಂಸ್ಥೆಗಳು ಗುರುತಿಸಿ, ಲಾರ್ವಾ ನಾಶಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು. ಮನೆ-ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಬೇಕು. ಜನಜಾಗೃತಿಗೂ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುವುದು ಅವಶ್ಯ. ಡೆಂಘ ನಿಯಂತ್ರಣದ ವಿಷಯದಲ್ಲಿ ಜನರ ಪಾತ್ರವೂ ಮುಖ್ಯ. ಜನರೂ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ, ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು, ಮಳೆನೀರು ನಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ಜನರು ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಡೆಂಘ ಪ್ರಕರಣಗಳು ಹೆಚ್ಚು ವರದಿಯಾಗುವ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಆರೋಗ್ಯ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ. ಇದರಿಂದ ಆರಂಭದಲ್ಲೇ ಜ್ವರ ಪತ್ತೆ ಹೆಚ್ಚಿ ಚಿಕಿತ್ಸೆ ನೀಡುವ ಮೂಲಕ ಕಾಯಿಲೆಯ ಪ್ರಸರಣ ಪ್ರಮಾಣ ಮತ್ತು ಸಾವಿನ ಪ್ರಮಾಣ ತಡೆಯಲು ಕ್ರಮ ವಹಿಸಿದೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳು ಶುಚಿತ್ವ ಕಾಪಾಡಲು ಶ್ರಮಿಸಬೇಕು. ಸ್ವಚ್ಛತೆಯೇ ಮೂಲಮಂತ್ರವಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net