ಸಂಪಾದಕೀಯ; ರಾಷ್ಟ್ರವ್ಯಾಪಿ ತನಿಖೆ ಅಗತ್ಯ

Untitled design (1)
Published on

ಗಲ್ಪ್ ರಾಷ್ಟ್ರಗಳಿಂದ ಹಣ ಪಡೆದು ಸಾವಿರಾರು ಜನರನ್ನು ಇಸ್ಲಾಂಗೆ ಮತಾಂತರಗೊಳಿಸಿದ ಆರೋಪದ ಮೇಲೆ ಛಂಗೂರ್ ಬಾಬಾ ಎಂಬಾತನ ಬಂಧನವಾಗಿರುವ ಬೆನ್ನಲ್ಲೇ, ಉತ್ತರ ಪ್ರದೇಶ ಪೊಲೀಸರು ಆರು ರಾಜ್ಯಗಳಲ್ಲಿ 10 ದುಷ್ಕರ್ವಿುಗಳನ್ನು ಬಂಧಿಸುವ ಮೂಲಕ ಅಕ್ರಮ ಮತಾಂತರದ ಜಾಲವನ್ನು ಭೇದಿಸಿದ್ದಾರೆ. ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ, ಉತ್ತರಾಖಂಡ ಮತ್ತು ಗೋವಾದಲ್ಲಿ ಈ ದುಷ್ಕರ್ವಿುಗಳು ಸಿಕ್ಕಿಬಿದ್ದಿದ್ದಾರೆ. ಈ ಜಾಲವು ಕೇವಲ ಧಾರ್ವಿುಕ ಮತಾಂತರಕ್ಕೆ ಸೀಮಿತವಾಗಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಹಣದ ಅಕ್ರಮ ಲೇವಾದೇವಿ, ರಹಸ್ಯ ಕಾರ್ಯಾಚರಣೆಗಳಲ್ಲಿ ತೊಡಗುವ ದುಷ್ಕರ್ವಿುಗಳಿಗೆ ಪೊಲೀಸರಿಂದ ಮತ್ತು ಸಾರ್ವಜನಿಕರಿಂದ ಯಾವುದೇ ತೊಂದರೆ ಆಗದಂತೆ ಆಶ್ರಯ ಒದಗಿಸುವುದು, ಕಾನೂನು ಸಲಹೆಯ ಬೆಂಬಲ ಸಿಗುವಂತೆ ಮಾಡುವುದು, ಲವ್ ಜಿಹಾದ್​ನಂತಹ ಸಮಾಜಘಾತುಕ ಕೆಲಸಗಳಿಗೆ ಕುಮ್ಮಕ್ಕು ನೀಡುವಂತಹ ದುಷ್ಕೃತ್ಯಗಳಲ್ಲಿ ಈ ಜಾಲ ತೊಡಗಿತ್ತು. ಇದಕ್ಕೆ ಅಮೆರಿಕ, ಕೆನಡಾದಂತಹ ದೇಶಗಳಿಂದ ಹಣಕಾಸಿನ ನೆರವೂ ಹರಿದು ಬರುತ್ತಿತ್ತಲ್ಲದೆ, ಐಸಿಸ್​ನಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿತ್ತು ಎನ್ನುವುದು ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಭಾರತದ ಆಂತರಿಕ ಭದ್ರತೆ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಏಕತೆಗೆ ಎದುರಾಗಿರುವ ಗಂಭೀರ ಸವಾಲು.

ಲವ್ ಜಿಹಾದ್​ನಂತಹ ಕೃತ್ಯಗಳು ಈಗಾಗಲೇ ಸಾಮಾಜಿಕ ಸಾಮರಸ್ಯಕ್ಕೆ ತೀವ್ರ ಧಕ್ಕೆ ತಂದೊಡ್ಡಿವೆ. ಈಗ ಬಂಧನಕ್ಕೆ ಒಳಗಾಗಿರುವ ಜಾಲದ ವ್ಯಾಪ್ತಿ ಕೇವಲ ಆರು ರಾಜ್ಯಗಳಿಗೆ ಸೀಮಿತವಾಗಿ ಇರುವುದಿಲ್ಲ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ಇದು ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇಂತಹ ಕೃತ್ಯಗಳನ್ನು ಮತ್ತು ಈ ಜಾಲದ ಹಿಂದಿರುವ ಗಡಿಯಾಚೆಗಿನ ಹಣಕಾಸು ಮೂಲಗಳು, ಭಯೋತ್ಪಾದಕ ಸಂಘಟನೆಗಳ ಒಡನಾಟದ ಆರೋಪಗಳನ್ನು ಹಗುರವಾಗಿ ಪರಿಗಣಿಸಲಾಗದು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಈ ಜಾಲದ ಬಗ್ಗೆ ದೇಶಾದ್ಯಂತ ಸಮಗ್ರ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ. ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಆಧಾರಿತ ಗುಪ್ತಚರ ವ್ಯವಸ್ಥೆ ಮತ್ತು ಗಡಿಯಾಚೆಯಿಂದ ಬರುವ ಹಣಕಾಸು ವಹಿವಾಟಿನ ಮೇಲಿನ ಕಟ್ಟುನಿಟ್ಟಾದ ಕಣ್ಗಾವಲು ಇಡುವ ಮೂಲಕ ಈ ಜಾಲದ ಬೇರುಗಳನ್ನು ಕಿತ್ತೆಸೆಯಬಹುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗದಿದ್ದರೆ, ಇಂತಹ ಜಾಲಗಳು ಮತ್ತಷ್ಟು ಬೆಳೆಯುವ ಸಾಧ್ಯತೆ ಇರುತ್ತದೆ. ರಾಜ್ಯಗಳಲ್ಲಿ ಸ್ಥಳೀಯ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಬೇಕು. ಧಾರ್ವಿುಕ ಮತ್ತು ಸಾಮಾಜಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ವಿಷಯವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳದೆ, ರಾಷ್ಟ್ರೀಯ ಭದ್ರತೆ ಮತ್ತು ಏಕತೆಯ ದೃಷ್ಟಿಯಿಂದ ಪರಿಗಣಿಸುವುದು ಅಗತ್ಯ. ಈಗ 10 ದುಷ್ಕರ್ವಿುಗಳು ಸಿಕ್ಕಿಬಿದ್ದಿರುವುದು ಎಲ್ಲ ರಾಜ್ಯಗಳಿಗೂ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಸರ್ಕಾರ ಮತ್ತು ಸಮಾಜ ಈ ಪಿಡುಗಿನ ಮೂಲೋತ್ಪಾಟನೆಗೆ ಒಗ್ಗೂಡಿ ಕೆಲಸ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net