ಸಂಪಾದಕೀಯ: ಸುರಕ್ಷತೆಗೆ ಆದ್ಯತೆ ಕೊಡಿ

ವಿಜಯವಾಣಿ (3)
Published on

ರಾಜಸ್ಥಾನದ ರಾಜಧಾನಿ ಜೈಪುರದ ಸೌರಭ್​ವಾನ್​ಸಿಂಗ್ (ಎಸ್​ಎಂಎಸ್) ಆಸ್ಪತ್ರೆಯ ಟ್ರಾಮಾ ಐಸಿಯು ವಿಭಾಗದಲ್ಲಿ ಸಂಭವಿಸಿದ ಅಗ್ನಿ ಅವಘಡ ಆಘಾತಕಾರಿಯಾಗಿದೆ. ಇದರಲ್ಲಿ 6 ರೋಗಿಗಳು ಸಜೀವ ದಹನಕ್ಕೊಳಗಾಗಿ ಜೀವ ಕಳೆದುಕೊಂಡಿದ್ದಾರೆ. 5 ರೋಗಿಗಳು ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಈ ಘಟನೆ ನಮ್ಮ ದೇಶದಲ್ಲಿರುವ ಆರೋಗ್ಯ ವ್ಯವಸ್ಥೆಯ ದೌರ್ಬಲ್ಯವನ್ನು ಬಹಿರಂಗಪಡಿಸಿದೆ. ಇದು ಇಡೀ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸುರಕ್ಷತಾ ನಿಯಮಗಳ ಅನುಪಾಲನೆಯ ಕೊರತೆಗೆ ಕನ್ನಡಿ ಹಿಡಿದಿದೆ. ಆಸ್ಪತ್ರೆಗಳಲ್ಲಿ ಮನುಷ್ಯಜೀವಕ್ಕಿರುವ ಮೌಲ್ಯ ಎಷ್ಟೆಂಬುದನ್ನು ಇದು ಪ್ರಶ್ನಿಸುವಂತೆ ಮಾಡಿದೆ.

ಮಧ್ಯರಾತ್ರಿ ಸುಮಾರಿಗೆ ಐಸಿಯುನ ಸ್ಟೋರೇಜ್ ರೂಮ್ಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ತ್ವರಿತವಾಗಿ ಹಬ್ಬಿದ ಹೊಗೆ ಮತ್ತು ವಿಷಕಾರಿ ಅನಿಲಗಳು 11 ರೋಗಿಗಳನ್ನು ಆವರಿಸಿವೆ. ಆಸ್ಪತ್ರೆ ಸಿಬ್ಬಂದಿ 4-5 ರೋಗಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರೂ, ಬಹುತೇಕರು ಹೊಗೆಯಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಯ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎಂಬುದು ರೋಗಿಗಳ ಕುಟುಂಬಸ್ಥರ ಆರೋಪವಾಗಿದೆ. ಬೆಂಕಿ ಕಾಣಿಸಿಕೊಂಡಿದ್ದನ್ನು ತಿಳಿಸಿದ ಕೂಡಲೇ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಧಾವಿಸಿ ಬಂದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಏಕೆಂದರೆ ಆಸ್ಪತ್ರೆಯಲ್ಲಿ ಅಗ್ನಿಶಾಮಕ ವ್ಯವಸ್ಥೆ ಇರಲಿಲ್ಲ. ಎಲೆಕ್ಟ್ರಿಕಲ್ ಉಪಕರಣಗಳ ನಿರ್ವಹಣೆಯ ಲೋಪವೂ ಈ ದುರಂತ ತೀವ್ರತೆಯನ್ನು ಹೆಚ್ಚಿಸಿದೆ ಎಂಬುದು ಅವರ ವಿವರಣೆಯಾಗಿದೆ.

ಇಂತಹ ಘಟನೆ ಇದೇ ಮೊದಲಲ್ಲ. 2024ರ ನವೆಂಬರ್​ನಲ್ಲಿ ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜ್​ನಲ್ಲಿ ಸಂಭವಿಸಿದ ಅಗ್ನಿ ದುರಂತ 18 ಜೀವಗಳನ್ನು ಕಸಿದಿತ್ತು. 2020ರ ಆಗಸ್ಟ್ನಲ್ಲಿ ಅಹಮದಾಬಾದ್​ನ ಐಸಿಯುಗಳಲ್ಲಿ ನಡೆದಿದ್ದ ಎರಡು ಘಟನೆಗಳು 16 ರೋಗಿಗಳ ಜೀವ ಬಲಿ ತೆಗೆದುಕೊಂಡಿದ್ದವು. 2024ರ ಮೇ ತಿಂಗಳಲ್ಲಿ ದೆಹಲಿಯ ವಿವೇಕ್ ವಿಹಾರ್​ನಲ್ಲಿ 7 ಮಕ್ಕಳು ಮೃತಪಟ್ಟಿದ್ದರು. ದೆಹಲಿಯಲ್ಲಿ 2023ರಿಂದ 2025ರ ಮೇವರೆಗೆ ಆಸ್ಪತ್ರೆಗಳಲ್ಲಿ 78 ಅಗ್ನಿ ಅವಘಡಗಳು ಸಂಭವಿಸಿವೆ. ಶೇ. 78ರಷ್ಟು ದುರಂತಗಳಿಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಸ್ಪತ್ರೆಗಳಿಗೆ ಕಡ್ಡಾಯ ಪರಿಶೀಲನೆ ಮತ್ತು ಆಡಿಟ್ ಜಾರಿಗೊಳಿಸಬೇಕು. ಫೈರ್ ಸೇಫ್ಟಿ ಉಪಕರಣಗಳ ಲಭ್ಯತೆಯನ್ನು ಖಚಿತಪಡಿಸಬೇಕು. ಎಮರ್ಜೆನ್ಸಿ ಎವ್ಯಾಕ್ಯುಯೇಷನ್ ಪ್ಲಾನ್​ಗಳನ್ನು ಬಲಪಡಿಸಬೇಕು. ಇದು ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ. ಜೈಪುರದ ಘಟನೆಯಲ್ಲಿ ಕೆಲವು ಸಿಬ್ಬಂದಿ ರಕ್ಷಣೆಗೆ ಧಾವಿಸದೇ ಓಡಿಹೋದರೆಂಬ ವರದಿಗಳಿವೆ. ಅದು ನಿಜವೇ ಆಗಿದ್ದರೆ ಹೊಣೆಗೇಡಿತನದ ವರ್ತನೆ. ಆಸ್ಪತ್ರೆಗಳ ಆಡಳಿತ ಮಂಡಳಿಗಳೂ ಈ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕಾಲಕಾಲಕ್ಕೆ ತಮ್ಮ ಆಸ್ಪತ್ರೆಗಳಲ್ಲಿನ ನಿರ್ವಹಣೆ ಕೊರತೆಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಡಾಕ್ಟರ್​ಗಳು, ನರ್ಸ್​ಗಳು, ಸಹಾಯಕರೇ ರೋಗಿಗಳ ಮೊದಲ ರಕ್ಷಕರು ಎಂಬುದನ್ನು ನೆನಪಿಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net