ಸಂಪಾದಕೀಯ: ಕರೊನಾ ಪ್ರಸರಣ ತಡೆಯಲು ನಮ್ಮ ಜವಾಬ್ದಾರಿ ನಿಭಾಯಿಸೋಣ

Corona Vaccine
Published on

ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಗುತ್ತಿರುವ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬರುತ್ತಿರುವುದು ಸ್ವಲ್ಪ ಸಮಾಧಾನ ನೀಡುವಂಥ ಸಂಗತಿ. ಆದರೆ, ಸೋಂಕು ಪ್ರಸರಣದ ವೇಗ ತಗ್ಗದೆ ಹೊಸ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕರೊನಾ ವಿರುದ್ಧದ ಸಮರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬೇಕಿದ್ದು, ಸರ್ಕಾರ ಮತ್ತು ಜನರ ಪಾತ್ರ ಮಹತ್ವದ್ದು. ಈ ನಡುವೆ ರಾಜ್ಯದಲ್ಲಿ ಲಕ್ಷಣರಹಿತ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದ್ದು, ಶೇಕಡ 97ರಷ್ಟು ಮಂದಿಗೆ ಕಾಯಿಲೆಯ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿಲ್ಲ. ಹೀಗಾಗಿ, ಬಹುತೇಕ ಇಂಥ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ( ಹೋಂ ಐಸೋಲೇಷನ್) ಸರ್ಕಾರ ಅವಕಾಶ ನೀಡಿದ್ದು ಗೊತ್ತಿರುವಂಥದ್ದೇ. ಆದರೆ, ಈ ಹೊತ್ತಲ್ಲಿ ತೋರುತ್ತಿರುವ ನಿರ್ಲಕ್ಷ್ಯ, ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿರುವ ಕಾರಣದಿಂದಾಗಿ ಮರಣಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ. ಇದನ್ನು ತಪ್ಪಿಸಲು ಸರ್ಕಾರ ಹೋಂ ಐಸೋಲೇಷನ್​ಗೆ ಶುಕ್ರವಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇದನ್ನೂ ಓದಿ: ಸುರೇಶ್​ ಅಂಗಡಿಯವರ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​

ಸೋಂಕಿನ ಲಕ್ಷಣಗಳು ಕಂಡುಬಂದ 24 ಗಂಟೆಯೊಳಗೆ ಫೋನ್ ಅಥವಾ ಆಸ್ಪತ್ರೆಗೆ ಭೇಟಿ ಕೊಟ್ಟು ಸಲಹೆ ಪಡೆಯುವಂತೆ ಸೂಚಿಸಲಾಗಿದೆ. ಇದರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಲಿದೆ ಅಲ್ಲದೆ, ಅಗತ್ಯ ಅರಿವು ರೋಗಿಗಳಲ್ಲಿ ಮೂಡಲಿದೆ. ಬೇಸರದ ಇನ್ನೊಂದು ಸಂಗತಿಯೆಂದರೆ ಕೋವಿಡ್ ಸೋಂಕಿತರು ಮತ್ತು ವಾರಿಯರ್ಸ್ ಬಗ್ಗೆ ಜನರ ದೃಷ್ಟಿ ಇನ್ನೂ ಬದಲಾಗದಿರುವುದು. ಅವರನ್ನು ವಿನಾಕಾರಣ ಅಸ್ಪಶ್ಯರಂತೆ ಕಾಣಲಾಗುತ್ತಿದ್ದು, ಈ ಮನೋಭಾವ ಬದಲಾಗಲೇಬೇಕಿದೆ. ಕರೊನಾಕ್ಕೆ ಅತಿಯಾಗಿ ಹೆದರಬೇಕಾದ ಅಗತ್ಯವಿಲ್ಲ. ಸೂಕ್ತ ಎಚ್ಚರಿಕೆ ಜತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡು ಸೋಂಕಿನ ಅಪಾಯವನ್ನು ಸೋಲಿಸಬಹುದು. ಈಗಾಗಲೇ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡ 83ಕ್ಕಿಂತ ಹೆಚ್ಚಿದ್ದು, 9.40 ಲಕ್ಷಕ್ಕೂ ಹೆಚ್ಚು (ಶೇಕಡ 14.74) ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಪ್ರತಿ 100 ತಪಾಸಣೆಗೆ ಶೇಕಡ 12 ಜನರಲ್ಲಿ ಸೋಂಕು ಕಂಡುಬರುತ್ತಿದೆ.

ಮುಂಬರುವ ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತಗ್ಗಬೇಕಿದೆ ಅಲ್ಲದೆ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರು ಉದಾಸೀನ ಮಾಡದೆ ಸರ್ಕಾರದ ನಿಯಮಾವಳಿಗಳನ್ನು ಸೂಕ್ತವಾಗಿ ಪಾಲಿಸಿದರೆ ಶೀಘ್ರ ಚೇತರಿಕೆ ಕಾಣಲು ಸಾಧ್ಯವಾಗಲಿದೆ. ಮುಖಗವಸು ಬಳಕೆ, ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆ ಸಾಕಷ್ಟು ಅರಿವು ಮೂಡಿಸಿದ ನಂತರ ಸರ್ಕಾರ ಈಗ ದಂಡಾಸ್ತ್ರಕ್ಕೆ ಮುಂದಾಗಿದೆ. ಮಾಸ್ಕ್ ಹಾಕದಿರುವವರನ್ನು ಗುರುತಿಸಿ ದಂಡ ಹಾಕುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ. ಜನರು ಕೂಡ ಹೊಸ ಮಾರ್ಗಸೂಚಿಯನ್ನು ಮತ್ತು ಇತರ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಬೇಕು. ರೋಗಿಗಳನ್ನು ಪರಿಸ್ಥಿತಿ ಕೈಮೀರಿದ ಮೇಲೆ ಆಸ್ಪತ್ರೆಗೆ ದಾಖಲಿಸುವುದಕ್ಕಿಂತ, ಆರಂಭಿಕ ಹಂತದಲ್ಲೇ ಆ ಕಾಳಜಿ ತೋರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net