

ದೇಶದಲ್ಲಿ 2020ರ ಜುಲೈ 29ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಗೆ ಬಂದಾಗ ಉತ್ಸಾಹದ ವಾತಾವರಣವಿತ್ತು. ಏಕೆಂದರೆ, ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯ ಅಗತ್ಯವನ್ನು ಶೈಕ್ಷಣಿಕ ತಜ್ಞರು ಪ್ರತಿಪಾದಿಸುತ್ತಲೇ ಬಂದಿದ್ದರು. 1986ರಲ್ಲಿ ಜಾರಿಗೆ ಬಂದ ಶಿಕ್ಷಣ ನೀತಿಯ 34 ವರ್ಷಗಳ ದೀರ್ಘಾವಧಿಯ ಬಳಿಕ ಹೊಸ ನೀತಿ ಅಸ್ತಿತ್ವಕ್ಕೆ ಬಂದಿದ್ದರಿಂದ ಸಾಕಷ್ಟು ನಿರೀಕ್ಷೆಗಳು ಮೂಡಿದ್ದವು ಮತ್ತು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ ಎಂಬ ಆಶಾವಾದ ಹುಟ್ಟಿಕೊಂಡಿತ್ತು. ಆದರೆ, ಇದೇ ಜುಲೈ 29ಕ್ಕೆ ಎನ್ಇಪಿ ಜಾರಿಗೆ ಬಂದು ಐದು ವರ್ಷಗಳಾಗಿವೆ. ಈ ಅವಧಿಯಲ್ಲಿ ಎನ್ಪಿಯ ಉದ್ದೇಶ ಈಡೇರಿದೆಯೆ? ಶೈಕ್ಷಣಿಕ ರಂಗದಲ್ಲಿ ಸುಧಾರಣೆ ಸಾಧ್ಯವಾಗಿದೆಯೇ? ಎಂಬ ಪ್ರಶ್ನೆಗೆ ಎದುರಾಗುವುದು ನಿರಾಶಾದಾಯಕ ಉತ್ತರವೇ. ಈಗಲೂ ನೀತಿಯ ಜಾರಿಯಲ್ಲಿ ಗೊಂದಲ ಮುಂದುವರಿದಿರುವುದು ದುರದೃಷ್ಟಕರ. ವಿಶ್ವವಿದ್ಯಾಲಯಗಳ ನಡುವೆ ಸಮನ್ವಯ ಇಲ್ಲ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಏಕರೂಪತೆಯಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗುತ್ತಿದ್ದು, ಇನ್ನಾದರೂ ಸಮಗ್ರ ಮತ್ತು ವ್ಯವಸ್ಥಿತ ಜಾರಿ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಲಕ್ಷಾಂತರ ಪಾಲಕರು, ಶಿಕ್ಷಣ ತಜ್ಞರು, ಸಾಮಾಜಿಕ ತಜ್ಞರ ಅಭಿಪ್ರಾಯವನ್ನು ಕ್ರೋಡೀಕರಿಸಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದ ಹಂತದಲ್ಲಿ ಎಡವಿರುವುದು ಸ್ಪಷ್ಟ. ಎನ್ಇಪಿ ಅನುಷ್ಠಾನದ ವಿಷಯದಲ್ಲೂ ರಾಜಕೀಯ ಮೇಲಾಟ ಜೋರಾಗಿದೆ. ಹೀಗಾಗಿ, ಈ ನೀತಿಯನ್ನು ಸಮಗ್ರವಾಗಿ ಜಾರಿಗೊಳಿಸುವುದು ಗೊಂದಲದ ಗೂಡಾಗಿ ಪರಿಣಮಿಸಿದೆ. ಎನ್ಇಪಿಯನ್ನು ಪರಿಪೂರ್ಣವಾಗಿ ಅವಲೋಕಿಸಿ, ಶೈಕ್ಷಣಿಕ ಮಟ್ಟ ಸುಧಾರಣೆ, ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಬೇಕು. ಅದನ್ನು ಬಿಟ್ಟು ರಾಜಕೀಯ ಭಿನ್ನಾಭಿಪ್ರಾಯಗಳು ಶೈಕ್ಷಣಿಕ ವಲಯದ ಸುಧಾರಣೆಗೆ ಧಕ್ಕೆ ತರುವಂತಾಗಬಾರದು. ಬಿಜೆಪಿಯೇತರ ಆಡಳಿತ ಹೊಂದಿರುವ ಹಲವು ರಾಜ್ಯಗಳಂತೂ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಅಭಿಪ್ರಾಯಕ್ಕೂ ಮನ್ನಣೆ ನೀಡುತ್ತಿಲ್ಲ. ಎನ್ಇಪಿ ಜಾರಿಯ ಬದಲು ಅವು ತಮ್ಮದೇ ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಅದರ ಅನುಷ್ಠಾನಕ್ಕೆ ಮುಂದಾಗುತ್ತಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಜ್ಞಾನದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು, ಜ್ಞಾನ ಮತ್ತು ಕೌಶಲಾಭಿವೃದ್ಧಿಗೆ ಸಮಾನ ಆದ್ಯತೆ, ಪದವಿ ಶಿಕ್ಷಣವನ್ನು ಅಂತಾರಾಷ್ಟಿŠೕಯ ಮಟ್ಟಕ್ಕೆ ಕೊಂಡೊಯ್ಯುವುದು, ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು, ಶಿಕ್ಷಣ ಅಭಿವೃದ್ಧಿಯಲ್ಲಿ ಸಮುದಾಯ ಮತ್ತು ತತ್ತ್ವಜ್ಞಾನಿಗಳ ಪಾತ್ರಕ್ಕೆ ಅವಕಾಶ-ಹೀಗೆ ವ್ಯಾಪಕ ಸುಧಾರಣೆಗಳನ್ನು ತರುವ ಗುರಿಯನ್ನು ಎನ್ಇಪಿ ಒಳಗೊಂಡಿದೆ. ಶಿಕ್ಷಣ ನೀತಿಯಲ್ಲಿ ಸರ್ಕಾರ, ಸ್ಥಳೀಯಾಡಳಿತಗಳ ಸಹಭಾಗಿತ್ವ ಕಡಿಮೆಯಾಗಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರ ಸಹಭಾಗಿತ್ವ ಹೆಚ್ಚುತ್ತ ಹೋದಂತೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬ ವಾಸ್ತವವನ್ನು ಮನಗಂಡರೆ ಎನ್ಇಪಿ ಬಗೆಗಿನ ಪೂರ್ವಗ್ರಹಗಳು ದೂರವಾಗಬಹುದು. ಈಗಾಗಲೇ ಹೊಸ ನೀತಿಗೆ ಐದು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ರಂಗ ನಾವೀನ್ಯ ಮತ್ತು ಸುಧಾರಣೆಯ ಆಶಯದೊಂದಿಗೆ ಮುಂದೆ ಸಾಗಲಿ ಎಂಬುದೇ ಆಶಯ.