

ಉದ್ವಿಗ್ನ ಭಾರತ-ಚೀನಾ ಗಡಿಯಲ್ಲಿ ಶಾಂತಿ ಕಾಪಾಡುವ ಸಂಬಂಧ ಉಭಯ ದೇಶಗಳು ಕೈಜೋಡಿಸಿರುವುದು ಸ್ವಾಗತಾರ್ಹ. ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧೋನ್ಮಾದದಲ್ಲಿ ಮುಳುಗಿರುವಾಗ ಭಾರತ ಮತ್ತು ಚೀನಾದ ಈ ನಡೆ ಮಹತ್ವದ್ದು ಹಾಗೂ ಅಂತಾರಾಷ್ಟ್ರೀಯ ವಲಯಕ್ಕೂ ಸಂದೇಶ ನೀಡುವಂಥದ್ದು. ಗಡಿ ಗಸ್ತು ಒಪ್ಪಂದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ವಿಶ್ವಾಸ ಹೆಚ್ಚಲು ನೆರವಾಗಲಿದೆ. ಅಂದರೆ, 2020ರಲ್ಲಿ ನಡೆದ ಗಲ್ವಾನ್ ಘರ್ಷಣೆಗಿಂತ ಮೊದಲು ಎರಡೂ ದೇಶಗಳ ಸೈನಿಕರು ಎಲ್ಲಿ ಇದ್ದರೋ ಅಲ್ಲಿಗೆ ವಾಪಸಾದರೆ ಪರಿಸ್ಥಿತಿ ಸಹಜತೆಗೆ ಮರಳಿತು ಎನ್ನಬಹುದು. ಪ್ರಸ್ತುತ ಗಡಿಯಲ್ಲಿ ಎರಡೂ ದೇಶಗಳ ತಲಾ 50 ಸಾವಿರ ಸೈನಿಕರು ಹಾಜರಿದ್ದಾರೆ. ‘ಗಡಿ ಗಸ್ತು ಒಪ್ಪಂದ’ ಏರ್ಪಟ್ಟ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಸೈನಿಕರು ಮರಳಲಿದ್ದಾರೆ. ಈ ಮೂಲಕ ಕಳೆದ ನಾಲ್ಕು ವರ್ಷಗಳ ಉದ್ವಿಗ್ನ ಸ್ಥಿತಿ ಕೊನೆಗೊಳ್ಳಲಿರುವುದು ಆಶಾದಾಯಕ ಬೆಳವಣಿಗೆ. ಈ ಒಪ್ಪಂದ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ನೆರವಾಗಲಿದೆ. ಮತ್ತು ಉಭಯ ದೇಶಗಳ ನಡುವೆ ಮಾತುಕತೆಯ ದಾರಿಯನ್ನು ಪ್ರಶಸ್ತಗೊಳಿಸಲಿದೆ.
ಭಾರತ ಈ ನಿಟ್ಟಿನಲ್ಲಿ ನಡೆಸಿರುವ ರಾಜತಾಂತ್ರಿಕ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮಹತ್ವದ ಸಂದೇಶವನ್ನು ರವಾನಿಸಿದ್ದರು. ಭಾರತ ಮತ್ತು ಚೀನಾ ಎರಡೂ ಬಲಾಢ್ಯ ರಾಷ್ಟ್ರಗಳಾಗಿದ್ದು, ಉದ್ವಿಗ್ನತೆಯನ್ನು ತಗ್ಗಿಸಿ, ದ್ವಿಪಕ್ಷೀಯ ಸಂಬಂಧಗಳನ್ನು ಸಹಜಗೊಳಿಸುವುದು ಅವಶ್ಯ
ಕೂಡ ಹೌದು. ಭಾರತ ಮತ್ತು ಚೀನಾ ನಡುವಿನ ಮನಸ್ತಾಪ ಕಳೆದು ಬಾಂಧವ್ಯ ವೃದ್ಧಿಸುವ ದಿಸೆಯಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಮತ್ತು ವಾಂಗ್ ಯೀ ನಡುವೆ ಎರಡು ಸಭೆಗಳು ಹಾಗೂ ರಾಜತಾಂತ್ರಿಕ-ಮಿಲಿಟರಿ ಮಟ್ಟದಲ್ಲಿ 52 ಸಭೆಗಳು ನಡೆದಿವೆ. ಕಳೆದ ನಾಲ್ಕು ವರ್ಷಗಳಲ್ಲಿ, 31 ಸುತ್ತು ರಾಜತಾಂತ್ರಿಕ ಹಾಗೂ 21 ಸುತ್ತು ಮಿಲಿಟರಿ ಮಾತುಕತೆಗಳು ನಡೆದು ಶಾಂತಿ ಮರುಸ್ಥಾಪನೆಗೆ ಒಪ್ಪಂದ ರೂಪುಗೊಂಡಿದೆ ಎಂಬುದು ಗಮನಾರ್ಹ. ಹಿಮಾಲಯದ ಗಡಿ ಪ್ರದೇಶಗಳಲ್ಲಿ ಸೈನಿಕರ ಗಸ್ತು ಕುರಿತು ಭಾರತದ ಜೊತೆಗೆ ವಿವಾದ ಪರಿಹಾರ ಒಪ್ಪಂದ ಮಾಡಿಕೊಂಡಿರುವುದಾಗಿ ಚೀನಾ ಕೂಡ ಮಂಗಳವಾರ ದೃಢಪಡಿಸಿದೆ. ‘ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್ಎಸಿ) ಚೀನಾದೊಂದಿಗಿನ ಪಡೆಗಳ ವಾಪಸಾತಿ ಪೂರ್ಣಗೊಂಡಿದೆ. ಒಡಂಬಡಿಕೆಗೆ ಬಂದಿರುವುದರಿಂದ ಉಭಯ ದೇಶಗಳು ಶಾಂತಿಯಿಂದಿರಬಹುದು. ಎಲ್ಎಸಿಯಲ್ಲಿ 2020ರಂತೆ ಕಾವಲು ಕಾಯಲು ನಮಗೆ ಸಾಧ್ಯವಾಗಲಿದೆ’ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರ ಹೇಳಿಕೆ ಸಂಬಂಧಗಳು ಸಹಜಸ್ಥಿತಿಗೆ ಬರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ.
ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸದಲ್ಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಇಂಥ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿರುವುದು, ಶಾಂತಿ, ಸೌಹಾರ್ದದದ ಮುಂದಿನ ಹೆಜ್ಜೆಗಳಿಗೆ ಪೂರಕ. ಹಾಗಂತ ಭಾರತ ಪೂರ್ತಿ ನಿರಾಳವಾಗುವಂತೆಯೂ ಇಲ್ಲ. ಏಕೆಂದರೆ, ಚೀನಾ ಎಷ್ಟೋ ಬಾರಿ ತಾನು ಹೇಳಿದಂತೆ ನಡೆದುಕೊಂಡಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಆದ್ದರಿಂದ, ಡ್ರಾ್ಯಗನ್ ರಾಷ್ಟ್ರದ ಹೆಜ್ಜೆಗಳನ್ನು ಭಾರತ ಎಚ್ಚರಿಕೆಯಿಂದಲೇ ಗಮನಿಸಿ, ಮುಂದಡಿ ಇಡುವುದು ಹೆಚ್ಚು ಸೂಕ್ತ.