ಸಂಪಾದಕೀಯ; ಷಡ್ಯಂತ್ರ ಬಯಲಾಗಲಿ

dharmasthala
Published on

ಕರ್ನಾಟಕದ ಹೆಮ್ಮೆಯ ಮತ್ತು ಪ್ರಸಿದ್ಧ ಶ್ರದ್ಧಾಕೇಂದ್ರವಾದ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಕಾರಸ್ಥಾನ ನಡೆದಿತ್ತು ಎಂಬುದು ಇದೀಗ ಸಾಬೀತಾಗಿದೆ. ಕುತಂತ್ರದ ಒಂದೊಂದೇ ವಿವರಗಳು ಬಯಲಾಗತೊಡಗಿದ್ದು, ಬಲೆ ಹೆಣೆದಿದ್ದವರ ಹುನ್ನಾರಗಳೂ ಬಹಿರಂಗಗೊಳ್ಳುತ್ತಿವೆ. ಆದರೆ, ಸದ್ಯಕ್ಕೆ ಪಾತ್ರಧಾರಿಗಳು ಮಾತ್ರ ವಿಚಾರಣೆ ಎದುರಿಸುತ್ತಿದ್ದು, ನಿಜವಾದ ಸೂತ್ರಧಾರಿಗಳನ್ನು ಪತ್ತೆಹಚ್ಚಿ, ಷಡ್ಯಂತ್ರದ ಮುಖವಾಡವನ್ನು ಕಿತ್ತೊಗೆಯಬೇಕಿದೆ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಧರ್ಮಸ್ಥಳದ ವರ್ಚಸ್ಸಿಗೆ ಕುಂದು ತರಬೇಕೆಂಬ ಷಡ್ಯಂತ್ರ, ಪಿತೂರಿಯನ್ನು ದೊಡ್ಡಮಟ್ಟದಲ್ಲಿ ಹೆಣೆದದ್ದು ಸ್ಪಷ್ಟವಾಗುತ್ತಿದೆ. ಇದಕ್ಕಾಗಿ ಕೆಲಸ ಮಾಡಿರುವ ಜಾಲ ಬರೀ ಜನರ ನಂಬಿಕೆಗಳನ್ನು ಘಾಸಿಗೊಳಿಸಿಲ್ಲ, ಸಮಾಜಮುಖಿ ಕೆಲಸಗಳಿಗೆ, ಶ್ರೀಕ್ಷೇತ್ರದ ಪ್ರಾಮುಖ್ಯತೆಗೆ ಭಂಗ ತರುವ ಪ್ರಯತ್ನ ಮಾಡಿದೆ.

ಧರ್ಮಸ್ಥಳ ಪುರಾತನವಾದ ಧಾರ್ವಿುಕ ಮತ್ತು ಆಧ್ಯಾತ್ಮಿಕ ಕ್ಷೇತ್ರ. ಧರ್ಮಸ್ಥಳ ಮಂಜುನಾಥನಿಗೆ ಅಸಂಖ್ಯ ಭಕ್ತರಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶಿವರಾತ್ರಿಯ ಸಂದರ್ಭದಲ್ಲಂತೂ ಕರ್ನಾಟಕದ ಮೂಲೆಮೂಲೆಗಳಿಂದ ಮತ್ತು ನೆರೆರಾಜ್ಯಗಳಿಂದ ಜನರು ಪಾದಯಾತ್ರೆ ಮೂಲಕ ಧರ್ಮಸ್ಥಳವನ್ನು ತಲುಪುತ್ತಾರೆ. ಇಂದಿಗೂ ಮಂಜುನಾಥನ ಹೆಸರಿನಲ್ಲಿ ನ್ಯಾಯಪಂಚಾಯ್ತಿಗಳು ನಡೆಯುತ್ತವೆ. ಮುಖ್ಯವಾಗಿ, ಇಲ್ಲಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವ ಸಮಾಜಮುಖಿ ಕೆಲಸಗಳು, ಮಹಿಳಾ ಸ್ವಸಹಾಯ ಸಂಘಗಳ ಕಾರ್ಯಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಜನರ ಜೀವನಮಟ್ಟವನ್ನು ಉತ್ತಮಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೇ ಧರ್ಮಸ್ಥಳಕ್ಕೆ ಭೇಟಿ ನೀಡಿ, ಇಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪ್ರಶಂಸಿಸಿದ್ದರು. ಅಲ್ಲದೆ, ಸಮಾಜಸೇವೆಗೆ ವೀರೇಂದ್ರ ಹೆಗ್ಗಡೆಯವರ ಕೊಡುಗೆಯನ್ನು ಗಮನಿಸಿಯೇ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಹೆಗ್ಗಡೆಯವರು ಹಲವು ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸೌಲಭ್ಯ ಕಲ್ಪಿಸಿದ್ದಾರೆ.

ಆದರೆ, ಧರ್ಮಸ್ಥಳದ ಅರಣ್ಯಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬ ನೀಡಿದ ಹೇಳಿಕೆಯ ಬಗ್ಗೆ ಪೊಲೀಸರು ಪೂರ್ವಾಪರ ವಿಚಾರಿಸಬೇಕಿತ್ತು. ವಿಶೇಷ ತನಿಖಾ ತಂಡ ರಚನೆ ಮಾಡಿದ್ದರ ಪರಿಣಾಮ ‘ಇಲ್ಲಿ ಏನೋ ಇದೆ’ ಎಂಬ ಅನುಮಾನವೇ ವ್ಯಾಪಕಗೊಳ್ಳುವಂತಾಗಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಧರ್ಮಸ್ಥಳಕ್ಕೆ ಓಡಿಬಂದವು. ಎಸ್​ಐಟಿ ಅಧಿಕಾರಿಗಳ ಸಮ್ಮುಖದಲ್ಲೇ ದೂರುದಾರ ತೋರಿಸಿದ ಹಲವು ಪಾಯಿಂಟ್​ಗಳಲ್ಲಿ ಅಗೆದರೂ ಏನೂ ಸಿಗಲಿಲ್ಲ. ಹೀಗಾಗಿ, ಚಿನ್ನಯ್ಯ ಎಂಬ ಆ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ‘ನಾನು ಪಾತ್ರಧಾರಿ ಮಾತ್ರ ಸೂತ್ರಧಾರಿಗಳು ಬೇರೇನೆ ಇದ್ದಾರೆ’ ಎಂದು ಚಿನ್ನಯ್ಯ ಕೋರ್ಟ್​ನಲ್ಲಿ ಹೇಳಿದ್ದಾನೆ ಎನ್ನಲಾಗಿ ದೆ. ಇವರ ಜತೆ ಇನ್ನು ಕೆಲವರು ಸೇರಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ದೊಡ್ಡಮಟ್ಟದಲ್ಲಿ ಷಡ್ಯಂತ್ರ ರೂಪಿಸಿದ್ದರು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ತನಿಖೆ ಇಷ್ಟಕ್ಕೇ ನಿಲ್ಲಬಾರದು. ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಯಂತಹ ಉನ್ನತ ಸಂಸ್ಥೆಗೆ ವಹಿಸಬೇಕು. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಸಂಪೂರ್ಣ ವಿವರ ಹೊರಬರಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net