ಸಂಪಾದಕೀಯ: ಒಮ್ಮತದಿಂದ ಜಾರಿಯಾಗಲಿ

ದೆ
Published on

ದೇಶಾದ್ಯಂತ ಲೋಕಸಭೆ ಮತ್ತು ಎಲ್ಲ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಲು ಅವಕಾಶ ಕಲ್ಪಿಸುವ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಹಸಿರುನಿಶಾನೆ ತೋರಿಸಿದೆ. ಈ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳಿಗೆ ಕೇಂದ್ರ ಸಂಪುಟ ತನ್ನ ಅಂಗೀಕಾರ ಮುದ್ರೆ ಒತ್ತಿದೆ. ಈ ಮಹತ್ವದ ತೀರ್ವನಕ್ಕೆ ದೇಶದ 32 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದರೆ, ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಸೇರಿದಂತೆ 15 ಪಕ್ಷಗಳು ನಿರೀಕ್ಷೆಯಂತೆಯೇ ವಿರೋಧ ವ್ಯಕ್ತಪಡಿಸಿವೆ.

ದೇಶದಾದ್ಯಂತ ಐದು ವರ್ಷಗಳಿಗೆ ಒಮ್ಮೆ ಮಾತ್ರ ಚುನಾವಣೆ ನಡೆಯುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಮತದಾರರೂ ಲೋಕಸಭೆಗೆ ಒಮ್ಮೆ, ವಿಧಾನಸಭೆಗೆ ಇನ್ನೊಮ್ಮೆ ಹೀಗೆ ಹಲವು ಬಾರಿ ಮತದಾನ ಮಾಡುವುದು ತಪ್ಪುತ್ತದೆ. ಐದು ವರ್ಷಗಳ ಕಾಲ ಸರ್ಕಾರದ ನೀತಿಗಳಲ್ಲಿ ಯಾವುದೇ ಮಹತ್ತರ ಬದಲಾವಣೆಗಳು ಆಗುವುದಿಲ್ಲವಾದ್ದರಿಂದ ಕೈಗಾರಿಕೆಗಳು ಮತ್ತು ಔದ್ಯಮಿಕ ವಲಯ ಕೂಡ ತಮ್ಮ ವಹಿವಾಟನ್ನು ಯಾವುದೇ ಆತಂಕವಿಲ್ಲದೆ ನಿರ್ವಹಿಸಬಹುದು. ಮತದಾನಕ್ಕಾಗಿ ಪದೇಪದೆ ಜನರಿಗೆ ರಜೆ ನೀಡುವುದು ತಪ್ಪುತ್ತದೆ. ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಸರ್ಕಾರಿ ಯಂತ್ರವನ್ನು ಪದೇಪದೆ ಚುನಾವಣಾ ಕಾರ್ಯಕ್ಕಾಗಿ ಬಳಸಿಕೊಳ್ಳುವ ಅನಿವಾರ್ಯತೆ ನಿವಾರಣೆಯಾಗುತ್ತದೆ. ಇವು ಮೇಲ್ನೋಟಕ್ಕೆ ಕಂಡುಬರುವ ಪ್ರಯೋಜನಗಳು ಮಾತ್ರ. ಇವುಗಳಲ್ಲದೆ ಇನ್ನೂ ಹತ್ತು ಹಲವು ರೀತಿಯ ಲಾಭಗಳು ಈ ಯೋಜನೆಯ ಅನುಷ್ಠಾನದಿಂದ ಆಗಲಿವೆ. ಹಾಗಾಗಿಯೇ ಈ ಪರಿಕಲ್ಪನೆಗೆ ಸುಪ್ರೀಂಕೋರ್ಟ್, ಹೈಕೋರ್ಟ್​ಗಳ ನ್ಯಾಯಮೂರ್ತಿಗಳು, ನ್ಯಾಯಾಂಗದ ಪ್ರಮುಖರು ಕೂಡ ಬೆಂಬಲ ಸೂಚಿಸಿದ್ದಾರೆ.

ಪ್ರಜಾಪ್ರಭುತ್ವವೆಂದ ಮೇಲೆ ವಿರೋಧ ಬರುವುದೂ ಸಹಜ. ಈ ಯೋಜನೆಯ ಅನುಷ್ಠಾನದಲ್ಲಿ ಆಗಬಹುದಾದ ತೊಂದರೆಗಳನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಮುಂದೊಡ್ಡಿದ್ದಾರೆ. ಇಡೀ ದೇಶ ಒಮ್ಮೆಗೇ ಮತ ಚಲಾಯಿಸುವಂತಾದರೆ ಪ್ರಾದೇಶಿಕ ವಿಷಯಗಳು ರಾಷ್ಟ್ರೀಯ ವಿಷಯಗಳಿಂದಾಗಿ ಮೂಲೆಗುಂಪಾಗುವ ಸಾಧ್ಯತೆ ಇರುತ್ತದೆ. ಈವರೆಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದ್ದುದರಿಂದ ಮತದಾರರು ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ಒಲವು ತೋರುತ್ತಿದ್ದರು. ಈ ಪರಿಕಲ್ಪನೆ ಜಾರಿಯಿಂದ ಮತದಾರರು ಗೊಂದಲಕ್ಕೆ ಒಳಗಾಗಬಹುದು, ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕವನ್ನು ವಿರೋಧ ಪಕ್ಷಗಳ ನಾಯಕರು ವ್ಯಕ್ತಪಡಿಸಿದ್ದಾರೆ. ಈ ಪ್ರಶ್ನೆಗಳಿಗೂ ಕೇಂದ್ರ ಸರ್ಕಾರದಿಂದ ಸೂಕ್ತ ಉತ್ತರ ದೊರೆಯಬೇಕು. ಅಗತ್ಯವೆನಿಸಿದರೆ ಈ ವಿಷಯವನ್ನು ಇನ್ನೊಮ್ಮೆ ಸಾರ್ವಜನಿಕ ಚರ್ಚೆಗೆ ಬಿಡಬೇಕು. ಸರ್ವಪಕ್ಷ ಸಭೆಯನ್ನೂ ಕರೆದು ರ್ಚಚಿಸಬೇಕು. ಈ ಯೋಜನೆಯು ಬಹುಮತದಿಂದ ಜಾರಿಗೆ ಬಂದರೆ ಸಾಲದು, ಸರ್ವಾನುಮತದಿಂದ ಅನುಷ್ಠಾನಕ್ಕೆ ಬರುವಂತಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net