

ಬೆಂಗಳೂರಿನಲ್ಲಿ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ 19 ಕಿಮೀ ಉದ್ದದ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಇದೇ ವೇಳೆ, ಮೂರನೇ ಹಂತದ ಕಿತ್ತಳೆ ಮಾರ್ಗದ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಿದರು. ಈ ಮಾರ್ಗವು 32 ಕಿಮೀ ಉದ್ದವಿರಲಿದ್ದು, ಜೆ.ಪಿ.ನಗರ- ಹೆಬ್ಬಾಳ ಕೆಂಪಾಪುರವರೆಗಿರಲಿದೆ. 2030ರ ಹೊತ್ತಿಗೆ, ಒಟ್ಟಾರೆಯಾಗಿ ಮೆಟ್ರೋ ಮಾರ್ಗದ ಉದ್ದ 220 ಕಿಮೀಗೆ ಹೆಚ್ಚಲಿದೆ. ದಿನಂಪ್ರತಿ ಸಾವಿರಾರು ವಾಹನಗಳು ರಸ್ತೆಗಿಳಿಯುವ ಬೆಂಗಳೂರಿನಂತಹ ನಗರದಲ್ಲಿ ವಾಹನದಟ್ಟಣೆಯನ್ನು ತುಸುವಾದರೂ ತಗ್ಗಿಸಲು ಮೆಟ್ರೋದಂಥ ಸಮೂಹ ಸಾರಿಗೆ ಬಹು ಉಪಯುಕ್ತ ಎಂಬುದು ಇಷ್ಟು ದಿನಗಳ ಅನುಭವದಿಂದ ಸಿದ್ಧವಾಗಿದೆ. ಹಾಗೆನೋಡಿದರೆ, ಬೆಂಗಳೂರಿನ ಜಾಗತಿಕ ಇಮೇಜಿಗೆ ಹೋಲಿಸಿದರೆ ಮೆಟ್ರೋ ಸಂಪರ್ಕ ಜಾಲ ಇನ್ನಷ್ಟು ಹೆಚ್ಚಿಗೆ ಇರಬೇಕಿತ್ತು. ಮೆಟ್ರೋ ರೈಲು ವ್ಯವಸ್ಥೆ ವಿಶಿಷ್ಟ ಆಡಳಿತ ಸ್ವರೂಪ ಹೊಂದಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವೆರಡೂ ಇದರಲ್ಲಿ ಪಾಲುದಾರರು. ಎರಡೂ ಸರ್ಕಾರಗಳು ಯೋಜನೆಗೆ ಅಗತ್ಯವಾದ ಬಂಡವಾಳ ಹೂಡಿಕೆಯನ್ನು ಮಾಡುತ್ತವೆ. ಆದರೆ ಈ ಜಂಟಿ ಪಾಲುದಾರಿಕೆಯೇ ಕೆಲವೊಮ್ಮೆ ಗೊಂದಲ ಹಾಗೂ ಕ್ರೆಡಿಟ್ ವಾರ್ಗೂ ಹಾದಿಮಾಡುವುದು ವಿಪರ್ಯಾಸ. ಕೆಲ ದಿನಗಳ ಹಿಂದೆ ಮೆಟ್ರೋ ಟಿಕೆಟ್ ದರ ಹೆಚ್ಚಿಸಿದಾಗ, ಈ ನಿರ್ಣಯ ಕೈಗೊಂಡಿದ್ದು ನಾನಲ್ಲ ನಾನಲ್ಲ ಎಂದು ಇನ್ನೊಬ್ಬರ ಹೆಗಲ ಮೇಲೆ ಹೊರಿಸುವ ಪ್ರವೃತ್ತಿ ಕಂಡುಬಂತು. ಇದೀಗ ಹಳದಿ ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಯಾರದು ಹೆಚ್ಚುಗಾರಿಕೆ ಎಂಬ ಚರ್ಚೆ ನಡೆಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವೆರಡಕ್ಕೂ ಮಹತ್ವವಿದ್ದು, ದೇಶದ ವ್ಯವಸ್ಥೆ ಸುಗಮವಾಗಿ ನಡೆದುಕೊಂಡು ಹೋಗುವಲ್ಲಿ ಇಬ್ಬರಿಗೂ ತಮ್ಮದೇ ಆದ ಹಕ್ಕು ಹಾಗೂ ಕರ್ತವ್ಯಗಳು ಇವೆ. ಆ ನಿಟ್ಟಿನಲ್ಲಿ ನೋಡಿದಾಗ, ಉಭಯ ಸರ್ಕಾರಗಳ ನಡುವಿನ ಸಮನ್ವಯ ಹಾಗೂ ಸಹಕಾರಕ್ಕೆ ಮೆಟ್ರೋ ಉತ್ತಮ ಮಾದರಿ ಆಗಬಲ್ಲದು. ಭಾರತದಂತಹ ದೇಶದಲ್ಲಿ ಮೆಟ್ರೋದಂಥ ಸಂಕೀರ್ಣ ಯೋಜನೆಗಳ ಅನುಷ್ಠಾನ ಸುಲಭಸಾಧ್ಯವಲ್ಲ. ದೊಡ್ಡ ಮೊತ್ತದ ಹಣಕಾಸು ಕ್ರೋಡೀಕರಣ ಒಂದೆಡೆಯಾದರೆ, ಯೋಜನೆಗೆ ಬೇಕಾದ ಭೂಸ್ವಾಧೀನ ಇತ್ಯಾದಿ ಮತ್ತೊಂದು ಸವಾಲು.
ಎರಡೂ ಸರ್ಕಾರಗಳು ಒಮ್ಮನಸ್ಸಿನಿಂದ ಕಾರ್ಯನಿರ್ವಹಿಸಿದರೆ ಇಂಥ ಸವಾಲುಗಳನ್ನು ಎದುರಿಸಿ ಯೋಜನೆಯ ಕಾರ್ಯಗತಕ್ಕೆ ಅನುಕೂಲವಾಗುತ್ತದೆ. ಮೆಟ್ರೋ ಮಾತ್ರವಲ್ಲ, ಇತರ ರೈಲ್ವೆ ಯೋಜನೆಗಳಿಗೂ ಪರಸ್ಪರ ಸಹಕಾರ ಅಗತ್ಯ. ಕರ್ನಾಟಕ ಸರ್ಕಾರ ಭೂಮಿ ಮತ್ತು ವೆಚ್ಚ ಹಂಚಿಕೆಯಲ್ಲಿ ವಿಫಲವಾದ ಕಾರಣ ಶಿವಮೊಗ್ಗ-ಹರಿಹರ ರೈಲ್ವೆ ಯೋಜನೆ ಸ್ಥಗಿತಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈಚೆಗೆ ಲೋಕಸಭೆಯಲ್ಲಿ ತಿಳಿಸಿದ್ದು ಇದಕ್ಕೊಂದು ನಿದರ್ಶನ. ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ 8,969 ಹೆಕ್ಟೇರ್ ಭೂಮಿಯಲ್ಲಿ 5,657 ಹೆಕ್ಟೇರ್ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗಂತ ರಾಜ್ಯ ಸರ್ಕಾರಕ್ಕೂ ಸಮಸ್ಯೆ ಇಲ್ಲವೆಂದಲ್ಲ. ರೈಲ್ವೆ ಯೋಜನೆಗಳ ಪೂರ್ಣಗೊಳಿಸುವಿಕೆ ರಾಜ್ಯ ಸರ್ಕಾರದ ತ್ವರಿತ ಭೂಸ್ವಾಧೀನ, ಅರಣ್ಯ ತೆರವು, ಶಾಸನಬದ್ಧ ಅನುಮತಿಗಳು ಇತ್ಯಾದಿ ಮೇಲೆ ಅವಲಂಬಿತವಾಗಿದೆ ಎಂದು ರೈಲ್ವೆ ಸಚಿವರು ಹೇಳಿರುವುದು ಸಹಕಾರ ಹಾಗೂ ಸಮನ್ವಯದ ಅಗತ್ಯವನ್ನು ಸಾರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಇಂಥ ಮನೋಭಾವ ಅಪೇಕ್ಷಣೀಯ.