ಸಂಕೀರ್ಣ ಸನ್ನಿವೇಶ: ಭಾರತ ಜಾಗರೂಕತೆಯಿಂದ ವ್ಯವಹರಿಸಬೇಕು..

Editorial
Published on

ಅಫ್ಘಾನಿಸ್ತಾನದಿಂದ ಅಮೆರಿಕದ ಸೈನಿಕರು ವಾಪಸ್ ಹೊರಡುತ್ತಿದ್ದಂತೆ, ಅಲ್ಲಿ ಮತ್ತೆ ತಾಲಿಬಾನ್ ಹಿಡಿತ ಬಿಗಿಯಾಗುತ್ತಿದೆ. ಈಗಾಗಲೇ ಅವರು ಹಲವು ಪ್ರದೇಶಗಳನ್ನು ವಶಕ್ಕೆ ಪಡೆದಿದ್ದಾರೆ. ಆ ದೇಶದ ಎರಡನೆಯ ಅತಿ ದೊಡ್ಡ ನಗರವಾದ ಕಂದಹಾರ್​ಗೆ ತಾಲಿಬಾನಿಗಳು ಭಾನುವಾರ ಪ್ರವೇಶಿಸುವುದರೊಂದಿಗೆ, ಆಡಳಿತ ಮರುವಶ ಪ್ರಯತ್ನದಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಈ ಬೆಳವಣಿಗೆ ಭಾರತ ಸೇರಿದಂತೆ ಹಲವು ದೇಶಗಳಿಗೆ ಹಲವು ಸಂದೇಶಗಳನ್ನು ರವಾನಿಸುತ್ತಿದೆ. ಅಲ್ ಕೈದಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಒಸಾಮಾ ಬಿನ್ ಲಾಡೆನ್ 2001ರಲ್ಲಿ ಅಮೆರಿಕದ ಮೇಲೆ ದಾಳಿ ಎಸಗುವ ಮೂಲಕ ಆ ದೈತ್ಯ ದೇಶದ ಸಾಮರ್ಥ್ಯವನ್ನೇ ಕೆಣಕಿದ. ಈ ದಾಳಿ ತನಗಾದ ಬಹುದೊಡ್ಡ ಅವಮಾನವೆಂದು ಬಗೆದ ಅಮೆರಿಕವು ಲಾಡೆನ್ ಬೇಟೆಗಾಗಿ ಅಫ್ಘಾನಿಸ್ತಾನಕ್ಕೆ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳಿಸಿತು. ಕೊನೆಗೂ ಆತ ಅಮೆರಿಕನ್ ಸೇನೆಯ ಕೈಗೆ ಸಿಕ್ಕು ಹತನಾದದ್ದು ಪಾಕಿಸ್ತಾನದ ಅಬೋಟಾಬಾದ್​ನಲ್ಲಿ. ಭಯೋತ್ಪಾದನೆ ಮುಂದುವರಿದರೆ ಎಲ್ಲರಿಗೂ ಆಪಾಯ ಎಂಬ ಕಾರಣಕ್ಕೆ, ಅಲ್ ಕೈದಾದ ಸಮೂಲ ನಿಮೂಲನೆಯಾಗಬೇಕೆಂದು ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಸಿದ ಅಮೆರಿಕ ಸಾಕಷ್ಟು ಸಾವುನೋವು ಎದುರಿಸಬೇಕಾಯಿತು. ಹೀಗೆಂದೇ, ಇದು ‘ಎಂದೂ ಜಯಿಸಲಾಗದ ಯುದ್ಧ’ ಎಂದು ಪರಿಭಾವಿಸಿ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗಲೇ, ಆಫ್ಘನ್ ನೆಲದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಆಲೋಚನೆ ಮೂಡಿ, ಹಂತಹಂತವಾಗಿ ಈ ಪ್ರಕ್ರಿಯೆ ಶುರುವಾಯಿತು.

ನೂತನ ಅಧ್ಯಕ್ಷ ಜೋ ಬೈಡೆನ್ ಕೂಡ ಇದೇ ನಿಲುವು ಹೊಂದಿರುವುದರಿಂದ ಆಫ್ಘನ್​ನಿಂದ ಅಮೆರಿಕದ ಸೈನಿಕರ ವಾಪಸಾತಿ ಮುಂದುವರಿದಿದೆ. ಅದಾಗುತ್ತಿದ್ದಂತೆ ತಾಲಿಬಾನಿಗಳು ಚಿಗಿತುಕೊಂಡಿದ್ದು, ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಹಿಡಿಯುವ ಯತ್ನವನ್ನು ತೀವ್ರಗೊಳಿಸಿದ್ದಾರೆ. ತಾಲಿಬಾನಿಗಳು ಕಂದಹಾರಕ್ಕೆ ಬಂದ ಹಿನ್ನೆಲೆಯಲ್ಲಿ, ಭಾರತವು ತನ್ನ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭಾನುವಾರ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ಕರೆಸಿಕೊಂಡಿದೆ. ಆಫ್ಘನ್​ನಲ್ಲಿ ಮತ್ತೆ ತಾಲಿಬಾನಿಗಳ ಆಡಳಿತ ಆರಂಭವಾದರೆ, ಏರ್ಪಡಬಹುದಾದ ಸನ್ನಿವೇಶಗಳನ್ನು ಮುನ್ನಂದಾಜಿಸಿಕೊಂಡು ಭಾರತ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ, ಅಫ್ಘಾನಿಸ್ತಾನದಲ್ಲಿ ತಾನು ಕೈಗೆತ್ತಿಕೊಂಡಿರುವ ಅಪಾರ ಮೊತ್ತದ ಯೋಜನೆಗಳ ರಕ್ಷಣೆ, ತಾಲಿಬಾನಿ ಉಗ್ರರು ಪಾಕಿಸ್ತಾನದ ಚಿತಾವಣೆಯಿಂದ ಭಾರತದಲ್ಲಿ ಉಗ್ರಕೃತ್ಯಗಳನ್ನು ನಡೆಸದಂತೆ ನೋಡಿಕೊಳ್ಳುವುದು ಮುಂತಾದ ಉದ್ದೇಶದಿಂದ, ತಾಲಿಬಾನ್ ನಾಯಕರ ಜತೆ ಮಾತುಕತೆ ನಡೆಸುವ ಆಯ್ಕೆಯನ್ನು ಭಾರತ ಮುಕ್ತವಾಗಿರಿಸಿಕೊಂಡಿದೆ. ಈ ಹಿಂದೆ ಇಂಥ ಉದ್ದೇಶವನ್ನು ಭಾರತ ಹೊಂದಿರಲಿಲ್ಲ. ಆದರೆ ಭಾರತದ ಮೇಲೆ ಸದಾ ದ್ವೇಷಕಾರುವ ಪಾಕಿಸ್ತಾನವು ಈ ಸನ್ನಿವೇಶದ ದುರುಪಯೋಗ ಮಾಡಿಕೊಂಡು, ತಾಲಿಬಾನ್ ಉಗ್ರರಿಗೆ ಪ್ರಚೋದನೆ ನೀಡಿ ಭಾರತದೊಳಕ್ಕೆ ನುಗ್ಗಿಸಲು ಯತ್ನಿಸಿದರೂ ಅಚ್ಚರಿ ಇಲ್ಲ. ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತಂದುಕೊಂಡಿರುವ ಭಾರತಕ್ಕೆ ತಾಲಿಬಾನ್ ಉಪಟಳ ತಲೆಬೇನೆಯಾಗದಂತೆ ನೋಡಿಕೊಳ್ಳಬೇಕಿದೆ. ಇದಕ್ಕೆ ರಾಜತಾಂತ್ರಿಕ ಕಾರ್ಯತಂತ್ರವೂ ಬೇಕಾಗುತ್ತದೆ. ಈ ಕಾರಣಕ್ಕೇ ತಾಲಿಬಾನ್ ಜತೆ ಮಾತುಕತೆ ನಡೆಸುವುದಕ್ಕೆ ಭಾರತ ತೆರೆದ ಮನಸ್ಸು ಹೊಂದಿರುವುದು. ಒಟ್ಟಿನಲ್ಲಿ, ಅಫ್ಘಾನಿಸ್ತಾನದಲ್ಲಿನ ವಾತಾವರಣ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಕಟ್ಟೆಚ್ಚರ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net