

ಮಾಹಿತಿ-ತಂತ್ರಜ್ಞಾನ ತುಂಬ ವೇಗವಾಗಿ ಬೆಳೆದು, ಅದರ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಆಗಿದೆ. ಸೇವೆಗಳ ತ್ವರಿತ ಲಭ್ಯತೆ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಪಾರದರ್ಶಕತೆ, ಸೂಕ್ತ ನಿಗಾ ವ್ಯವಸ್ಥೆ ಸೇರಿದಂತೆ ಹಲವು ಅನುಕೂಲಗಳಿಗೆ ಇದು ದಾರಿ ಮಾಡಿಕೊಟ್ಟಿದೆ. ಖಾಸಗಿ ರಂಗವಂತೂ ಐಟಿಯನ್ನು ಸರಿಯಾಗಿ ಅಳವಡಿಸಿಕೊಂಡು, ಹೊಸ ಸುಧಾರಣೆಗಳಿಗೆ ನಾಂದಿಹಾಡುತ್ತಿದೆ. ಅದರಂತೆ ಸರ್ಕಾರದ ಇಲಾಖೆಗಳು ಕೂಡ ಹೊಸತನ ಅಳವಡಿಸಿಕೊಳ್ಳುವ ಮೂಲಕ ಕಾಲಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ, ಅನಿವಾರ್ಯ. ಅದರಲ್ಲೂ ಕರ್ನಾಟಕ ಮಾಹಿತಿ-ತಂತ್ರಜ್ಞಾನ ರಂಗದಲ್ಲಿ ಜಾಗತಿಕ ಛಾಪು ಮೂಡಿಸಿದ್ದು, ಇಲ್ಲಿನ ಎಲ್ಲ ವಲಯಗಳಲ್ಲೂ ಅದರ ಪರಿಣಾಮಕಾರಿ ಜಾರಿ ಅವಶ್ಯ. ಸರ್ಕಾರದ ವಿವಿಧ ವಿಭಾಗಗಳು ತಮ್ಮ ಸೇವೆಯನ್ನು ತಂತ್ರಜ್ಞಾನ ಆಧಾರಿತವಾಗಿ ನೀಡುತ್ತಿವೆಯಾದರೂ, ಅದರಿಂದ ಅನುಕೂಲಕ್ಕಿಂತ ಹೆಚ್ಚು ಸಮಸ್ಯೆಗಳೇ ಸೃಷ್ಟಿಯಾಗುತ್ತಿರುವುದು ವಿಪರ್ಯಾಸ. ಇಂಥ ಬೆಳವಣಿಗೆಗಳು ಯೋಜನೆಯ ಮೂಲೋದ್ದೇಶಕ್ಕೇ ಧಕ್ಕೆ ತರುತ್ತವೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜನರು ಪಾವತಿಸುವ ಕೆಲಭಾಗ ಹಣ ರಾಜ್ಯ ನಕ್ಸಲರು ಹಾಗೂ ಉಗ್ರ ಸಂಘಟನೆಗಳ ಕೃತ್ಯಕ್ಕೂ ಬಳಕೆಯಾಗುತ್ತಿರುವ ಅನುಮಾನ ಶೃಂಗೇರಿಯಲ್ಲಿ ವ್ಯಕ್ತವಾದ ಬೆನ್ನಲ್ಲೇ ಆನ್ಲೈನ್ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿರುವ ಡಿಜಿಟಲ್ ತಂತ್ರಾಂಶ ಕೂಡ ಹಲವೆಡೆ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿರುವುದು ಆತಂಕ ಮೂಡಿಸಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿನ ಅಕ್ರಮ ತಡೆಗಟ್ಟುವುದಕ್ಕಾಗಿ ನಗದು, ಡಿಮಾಂಡ್ ಡ್ರಾಫ್ಟ್ (ಡಿಡಿ) ನಿರ್ಬಂಧಿಸಿ ಬ್ಯಾಂಕ್ ಮತ್ತು ಡಿಜಿಟಲ್ ಪೇಮೆಂಟ್ ಮೂಲಕ ಹಣಕಾಸು ವ್ಯವಹಾರ ನಡೆಸುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಖಜಾನೆ-2 ಮತ್ತು ಕಾವೇರಿ ತಂತ್ರಾಂಶ ಇನ್ನೂ ಇಂಟಿಗ್ರೇಷನ್ ಆಗದ ಕಾರಣ ಸಾರ್ವಜನಿಕರು, ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳು, ಗುತ್ತಿಗೆ ನೌಕರರು ಸೇರಿ ಯಾರು ಬೇಕಾದರೂ ನಕಲಿ ಚಲನ್ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಬಹುದಾದಂಥ ದಾರಿ ಹುಟ್ಟಿಕೊಂಡಿದೆ.
ಇನ್ನು ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದರೂ ಕೆಲಸಗಳು ಬೇಗ ಆಗಲ್ಲ ಎಂಬ ವಾಸ್ತವವನ್ನು ಮನಗಂಡೇ ಆನ್ಲೈನ್ ಸೇವೆಗಳನ್ನು ಆರಂಭಿಸಲಾಗಿದೆ. ಆದರೆ, ಅಂಥ ಸೇವೆಗಳನ್ನು ಬರೀ ಆರಂಭಿಸಿದರೆ ಸಾಕಾಗುವುದಿಲ್ಲ. ಅವುಗಳ ಸಮರ್ಪಕ ನಿರ್ವಹಣೆಯೂ ಅಗತ್ಯ. ಅನ್ಲಾಕ್ ಆಗಿರುವುದರಿಂದ ಆರ್ಟಿಒ ಕಚೇರಿಗಳಿಗೆ ಜನರು ಅಗತ್ಯ ಕೆಲಸಕಾರ್ಯಗಳಿಗಾಗಿ ಬರುತ್ತಿದ್ದರೂ, ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಗಂಟೆಗಟ್ಟಲೆ ಸರತಿಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಇದು ಅಪರೂಪಕ್ಕೆ ಸೃಷ್ಟಿಯಾಗುವ ಸಮಸ್ಯೆಯೇನಲ್ಲ. ಸರ್ಕಾರಿ ಕಚೇರಿಗಳಿಗೆ ಹೋದರೆ ಅಲ್ಲಿ ‘ಸರ್ವರ್ ಸಮಸ್ಯೆಯಾಗಿದೆ, ನೆಟ್ವರ್ಕ್ ಇಲ್ಲ’ ಎಂಬ ಸಿದ್ಧ ಉತ್ತರ ಯಾವಾಗಲೂ ದೊರೆಯುತ್ತದೆ. ಜನರ ಸಮಯ, ಶ್ರಮ ಹಾಳಾಗುವುದಲ್ಲದೆ, ಅವರು ಕೆಲಸ ಮಾಡಿಸಿಕೊಳ್ಳಲು ಮತ್ತೆ ಮಧ್ಯವರ್ತಿಗಳನ್ನು, ದಲ್ಲಾಳಿಗಳನ್ನು ಹಿಡಿಯುತ್ತಾರೆ. ಇದು ಹೊಸ ಬಗೆಯ ಮೋಸ, ವಂಚನೆಗೆ ಕಾರಣವಾಗುತ್ತದೆ. ತಾಂತ್ರಿಕ ಸಮಸ್ಯೆಗಳು ಆಗಾಗ ಸೃಷ್ಟಿಯಾಗುತ್ತವೆ ಹೌದಾದರೂ, ಅದರ ತ್ವರಿತ ನಿವಾರಣೆಗೂ ಸೂಕ್ತ ವ್ಯವಸ್ಥೆ ರೂಪಿಸಬೇಕು. ಇಲ್ಲದಿದ್ದಲ್ಲಿ ಜನರು ಇಂಥ ಸೇವೆಗಳ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಹಾಗಾದಗಂತೆ ಸರ್ಕಾರ ಎಚ್ಚರಿಕೆ ವಹಿಸಲಿ.