ಸೌಹಾರ್ದಯುತ ಪರಿಹಾರ; ಮೇಕೆದಾಟು ಯೋಜನೆಯಲ್ಲಿ ರಾಜಕೀಯ ಸಲ್ಲ..

Editorial
Published on

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗುವ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ. ಕಾವೇರಿ ಕಣಿವೆ ನೀರು ಬಳಕೆ ವಿಷಯವಾಗಿ ತಮಿಳುನಾಡಿನ ಆಕ್ಷೇಪ ಇಂದು-ನಿನ್ನೆಯದೇನಲ್ಲ. ಮೇಕೆದಾಟು ಯೋಜನೆಯಿಂದ ವಿದ್ಯುತ್ ಉತ್ಪಾದನೆ, ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ. ಉಭಯ ರಾಜ್ಯಗಳ ಸಂಕಷ್ಟ ನಿರ್ವಹಣೆಗೆ ನೀರು ಸಂಗ್ರಹಿಸುವುದೂ ಈ ಯೋಜನೆಯ ಉದ್ದೇಶವಾಗಿದೆ. ಪ್ರಸಕ್ತ ಯೋಜನೆಗೆ ತಮಿಳುನಾಡಿನ ನೆಲ-ಜಲ ಯಾವುದೂ ಬಳಕೆಯಾಗುತ್ತಿಲ್ಲ. ಕರ್ನಾಟಕ ತನ್ನ ಪಾಲಿನ ನೀರಿನಲ್ಲಿ ಜಲಾಶಯ ನಿರ್ಮಾಣ ಮಾಡಲು ಮುಂದಾಗಿದೆ. ಆದರೂ, ರಾಜಕೀಯ ಕಾರಣಗಳಿಂದ ತಮಿಳುನಾಡು ಇದಕ್ಕೆ ವಿರೋಧ ಮುಂದುವರಿಸಿದೆ. ಮೇಕೆದಾಟು ಯೋಜನೆಯಡಿ 67.16 ಟಿಎಂಸಿ ಸಂಗ್ರಹ ನ್ಯಾಯಮಂಡಳಿ ತೀರ್ಪಿಗೆ ವಿರುದ್ಧ ಎಂದು ಅದು ಆಕ್ಷೇಪವೆತ್ತಿದೆ. ಅಷ್ಟೇ ಅಲ್ಲ, ಹೇಗಾದರೂ ಮಾಡಿ ಕರ್ನಾಟಕದ ಈ ಪ್ರಯತ್ನಕ್ಕೆ ತಡೆ ಹಾಕಬೇಕೆಂದು ಹೊಸ ದಾರಿಗಳನ್ನು ಶೋಧಿಸುತ್ತಿದೆ.

ಈ ವಿವಾದವನ್ನು ಸೌಹಾರ್ದದ ನೆಲೆಯಲ್ಲಿ ಬಗೆಹರಿಸುವ ದೃಷ್ಟಿಯಿಂದ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮಿಳು ನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಬರೆದು ಯೋಜನೆಯ ಸ್ವರೂಪ, ಉದ್ದೇಶವನ್ನು ವಿವರಿಸಿದ್ದರಲ್ಲದೆ, ಕುಡಿಯುವ ನೀರಿಗೆ ಅನುಕೂಲವಾಗುವ ಪ್ರಸಕ್ತ ಯೋಜನೆಯನ್ನು ವಿರೋಧಿಸದಂತೆ ಮನವಿ ಮಾಡಿದ್ದರು. ಆದರೆ, ಆ ರಾಜ್ಯದ ನಿಲುವು ಬದಲಾಗದಿರುವುದರಿಂದ ‘ಕಾನೂನು ಹೋರಾಟ ಮುಂದುವರಿಯಲಿದೆ, ಇದಕ್ಕಾಗಿ ನಮ್ಮ ಕಾನೂನು ತಂಡ ಸಜ್ಜಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ವಿಸõತ ಯೋಜನಾ ವರದಿ ಸಿದ್ಧಪಡಿಸಿದೆ. ಅಲ್ಲದೆ, ಸುಪ್ರೀಂ ಕೋರ್ಟ್​ನಲ್ಲಿರುವ ಪ್ರಕರಣದ ಆದೇಶ ಹೊರಬಿದ್ದ ಬಳಿಕ ಮುಂದಿನ ಹೆಜ್ಜೆಯಿಟ್ಟು, ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿ ಪಡೆಯಲು ಮುಂದಾಗಿದೆ. ‘ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂಕೋರ್ಟ್​ನಲ್ಲಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಜೂನ್ 18ರಂದು ಸ್ಪಷ್ಟಪಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಇದ್ದ ದೊಡ್ಡ ತಡೆಯೊಂದು ನಿವಾರಣೆಯಾದಂತಾಗಿತ್ತು. ‘ಟೆಂಡರ್ ಕರೆದು, ಯೋಜನೆಯ ಕಾಮಗಾರಿ ಆರಂಭಿಸಿ, ನಾವು ನಿಮ್ಮ ಜತೆ ಇದ್ದೇವೆ’ ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಜಲವಿವಾದಗಳು ಕೋರ್ಟು ಮೆಟ್ಟಿಲು ಹತ್ತಿದರೆ ಬಗೆಹರಿಯಲು ದಶಕಗಳೇ ಬೇಕು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಅಷ್ಟಕ್ಕೂ, ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಆದರೂ, ಅದು ವಿರೋಧ, ಆಕ್ಷೇಪ ತೋರುತ್ತಿರುವುದು ಸೂಕ್ತವಲ್ಲ. ಮುಖ್ಯವಾಗಿ, ಇಂಥ ವಿವಾದಗಳು ರಾಜ್ಯ ರಾಜ್ಯಗಳ ನಡುವೆ ಸೌಹಾರ್ದದ ನೆಲೆಯಲ್ಲಿ ಇತ್ಯರ್ಥಗೊಳ್ಳಬೇಕು. ಗೊಂದಲ, ಅನುಮಾನಗಳಿದ್ದರೆ ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಸಂಘರ್ಷದ ಹಾದಿ ತುಳಿಯಬಾರದು. ಮೇಕೆದಾಟು ಯೋಜನೆ ವಿಷಯದಲ್ಲಿ ತಮಿಳುನಾಡು ಆ ವಿವೇಚನೆ ಪ್ರದರ್ಶಿಸಲಿ, ರಾಜ್ಯ ಸರ್ಕಾರ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇರಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net