

ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧ ಕಳೆದ ಕೆಲ ವರ್ಷಗಳಲ್ಲಿ ಹೊಸ ಎತ್ತರಕ್ಕೆ ತಲುಪಿದೆ ಎಂಬುದರಲ್ಲಿ ಅನುಮಾನವಿಲ್ಲ. ಎಲ್ಲ ರಂಗಗಳಲ್ಲಿ ವರ್ಧಿಸುತ್ತಿರುವ ಭಾರತದ ವರ್ಚಸ್ಸು, ಅಂತಾರಾಷ್ಟ್ರೀಯ ಶಕ್ತಿಯಾಗಿ ಮನ್ನಣೆ ಪಡೆಯುತ್ತಿರುವ ಬಗೆ ಇದೆಲ್ಲವನ್ನೂ ಅಮೆರಿಕ ಗಮನಿಸಿಯೇ, ಸ್ನೇಹಹಸ್ತವನ್ನು ಚಾಚಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಗೆಳೆತನದ ಬೆಸುಗೆಗೆ ಜಾಗತಿಕ ರಂಗವೂ ಅಚ್ಚರಿಗೊಂಡಿದೆ. ಕಳೆದ ವರ್ಷ ಮೋದಿ ಅಮೆರಿಕಕ್ಕೆ ಭೇಟಿ ನೀಡಿ, ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಟ್ರಂಪ್ ವೇದಿಕೆ ಹಂಚಿಕೊಂಡಿದ್ದಲ್ಲದೆ, ಭಾರತದ ಬಗೆಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಬಂದಾಗ ಇಲ್ಲಿ ದೊರೆತ ಆತ್ಮೀಯತೆ ಮತ್ತು ಸ್ವಾಗತದಿಂದ ಬಹು ಹರ್ಷಗೊಂಡು, ಆ ಅನುಭವವನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಂಡರು. ಹಾಗಂತ ಇದೇನು ತೋರಿಕೆಯ ‘ಬಾಂಧವ್ಯವೃದ್ಧಿ’ ಅಲ್ಲ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಭಾರತದ ನಿಲುವು, ಕ್ರಮಗಳನ್ನು ಅಮೆರಿಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಮರ್ಥಿಸಿಕೊಂಡು ಬಂದಿದೆ.
ಚೀನಾದ ಗಡಿತಂಟೆಯ ವೇಳೆಯೂ ಅಮೆರಿಕ ಭಾರತದ ಪರ ನಿಲುವನ್ನು ತಳೆಯಿತು. ಅಲ್ಲದೆ, ಡ್ರ್ಯಾಗನ್ ರಾಷ್ಟ್ರದೊಂದಿಗೆ ಆರ್ಥಿಕ ನಂಟು ಕಡಿದುಕೊಳ್ಳುವ ಸುಳಿವನ್ನೂ ನೀಡಿದೆ. ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಲು ಚುನಾವಣಾ ಕಣದಲ್ಲಿದ್ದಾರೆ. ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ (ಕರೊನಾ ಸೋಂಕಿನ ಹಾವಳಿ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವ ಚರ್ಚೆಯೂ ನಡೆಯುತ್ತಿದೆ) ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಈಗಾಗಲೇ ರಂಗೇರಿದೆ. 20 ಲಕ್ಷದಷ್ಟು ಭಾರತೀಯ-ಅಮೆರಿಕನ್ ಸಮುದಾಯದ ಮತಗಳು ಎರಡೂ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದ್ದು, ಮತ ಸೆಳೆಯಲು ತಂತ್ರಗಾರಿಕೆ ಆರಂಭವಾಗಿದೆ. ಅದರ ಭಾಗವಾಗಿಯೇ, ಟ್ರಂಪ್ ಬಿಡುಗಡೆ ಮಾಡಿರುವ ಪ್ರಥಮ ಜಾಹೀರಾತಿನ ವಿಡಿಯೋ ಮೋದಿ ಮಾಡಿರುವ ಹಲವು ಭಾಷಣಗಳ ತುಣುಕುಗಳನ್ನು ಒಳಗೊಂಡಿದೆ. 107 ಸೆಕೆಂಡ್ ಅವಧಿಯ ಈ ವಿಡಿಯೋ ಸಾಕಷ್ಟು ಸದ್ದು ಮಾಡಿದೆ. ಇದನ್ನೂ ಓದಿ: VIDEO: ಅಂತರ್ ಧರ್ಮೀಯ ವಿವಾಹ; ‘ಲವ್ ಜಿಹಾದ್ ‘ಎಂದು ಹೋರಾಟಕ್ಕಿಳಿದವರಿಗೆ ತಿರುಗೇಟು ಕೊಟ್ಟ ಯುವತಿ…
ಇದೆಲ್ಲವೂ ಸರಿಯೇ. ಆದರೆ, ‘ಅಮೆರಿಕ ಮೊದಲು’ ಎಂಬ ವಿಷಯ ಬಂದಾಗ ಟ್ರಂಪ್ ಆಡಳಿತ ಅದೆಷ್ಟೋ ಬಾರಿ ಭಾರತೀಯ ಸಮುದಾಯದವರ ಹಿತಕ್ಕೆ ಧಕ್ಕೆ ಒದಗುವಂಥ ಕ್ರಮಗಳನ್ನು ಕೈಗೊಂಡಿದ್ದಿದೆ ಎಂಬುದನ್ನು ಮರೆಯುವಂತಿಲ್ಲ. ವಿಶೇಷವಾಗಿ ಎಚ್1ಬಿ ವೀಸಾ ವಿಷಯದಲ್ಲಿ. ಈ ವೀಸಾ ನೀಡಿಕೆಗೆ ಕಡಿವಾಣ ಹಾಕಿದ್ದರಿಂದ ಭಾರತೀಯ ಮಾಹಿತಿ-ತಂತ್ರಜ್ಞಾನ ಕಂಪನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗಿರುವುದುಂಟು. ಹೀಗೆ ಹಲವು ವಿಷಯಗಳಲ್ಲಿ ಅದು ವ್ಯತಿರಿಕ್ತ ನಿಲುವುಗಳನ್ನು ತಳೆದಿದೆ. ರಾಜತಾಂತ್ರಿಕ ಬಾಂಧವ್ಯದ ಹಾದಿಯನ್ನು ಹೀಗೆ ಎರಡು ದೋಣಿಗಳಲ್ಲಿ ಕಾಲಿಟ್ಟು ಕ್ರಮಿಸಲಂತೂ ಸಾಧ್ಯವಿಲ್ಲ ಎಂಬುದನ್ನು ಆ ರಾಷ್ಟ್ರ ಅರ್ಥಮಾಡಿಕೊಳ್ಳಬೇಕಿದೆ. ಮತ್ತು ಮುಂದೆ ದ್ವಂದ್ವ ನಿಲುವು ತಳೆಯದೆ, ಸ್ಪಷ್ಟ, ಸಕಾರಾತ್ಮಕ ನಿಲುವನ್ನು ಅಳವಡಿಸಿಕೊಂಡರೆ ಉಭಯ ರಾಷ್ಟ್ರಗಳ ಪಾಲಿಗೂ ಉತ್ತಮ ಬೆಳವಣಿಗೆಯೇ. ಹಾಗಾಗಿ, ಮುಂದಿನ ನಡೆ, ನಿಲುವು ಕುತೂಹಲ ಮೂಡಿಸಿದೆ.