

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಹಲವು ಮಹತ್ವದ ಸಂಗತಿಗಳನ್ನು ರ್ಚಚಿಸಿದ್ದಾರೆ ಮತ್ತು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ದೃಢಗೊಳಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾ ಪ್ರವಾಸದಲ್ಲಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುರುವಾರವಷ್ಟೇ ಪುತಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ‘ನಾವು ವಿಶೇಷವಾದ ಸುದೀರ್ಘ ಸಂಬಂಧ ಹೊಂದಿದ್ದು, ಇದನ್ನು ಗೌರವಿಸುತ್ತೇವೆ. ನಾವು ಉನ್ನತಮಟ್ಟದ ಒಳಗೊಳ್ಳುವಿಕೆ ಹೊಂದಿದ್ದು, ಅವು ಉತ್ತಮ ಕೊಡುಗೆಗಳನ್ನು ನೀಡಿವೆ’ ಎಂದಿದ್ದಾರೆ. ಅಲ್ಲದೆ, ಪುತಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆಯಾಗಲಿದೆ.
ವಿವೇಚನಾರಹಿತವಾಗಿ ಸುಂಕ ಹೇರುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶವನ್ನೇ ಆರ್ಥಿಕ ಹಿಂಜರಿತದತ್ತ ನೂಕುತ್ತಿದ್ದಾರೆ. ಮಾತ್ರವಲ್ಲ, ಬಹುತೇಕ ದೇಶಗಳೊಂದಿಗೆ ಬಾಂಧವ್ಯ ಹದಗೆಡಿಸಿಕೊಂಡು, ಜಾಗತಿಕವಾಗಿ ಏಕಾಂಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ-ರಷ್ಯಾ ಬಾಂಧವ್ಯವೃದ್ಧಿಯ ಪ್ರಯತ್ನಗಳಿಗೆ ವೇಗ ಸಿಕ್ಕಿರುವುದು ಸ್ವಾಗತಾರ್ಹ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ರಾಜತಾಂತ್ರಿಕ ಸಂಬಂಧ ಗಮನಾರ್ಹವಾಗಿ ಸುಧಾರಣೆಯಾಗಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಹೆಚ್ಚಿರುವ ಭಾರತದ ಶಕ್ತಿಯನ್ನು ಸರಿಯಾಗಿ ಗ್ರಹಿಸಿರುವ ಪುತಿನ್, ಸ್ನೇಹವನ್ನು ಹೂಡಿಕೆಯ ಹಾದಿಯಲ್ಲೂ ವಿಸ್ತರಿಸಿದ್ದಾರೆ. ರಷ್ಯಾದ ಅತಿದೊಡ್ಡ ತೈಲ ಕಂಪನಿಯಾಗಿರುವ ರೊಸ್ನೆಫ್ಟ್ ಈಗಾಗಲೇ ಭಾರತದಲ್ಲಿ 20 ಬಿಲಿಯನ್ ಡಾಲರ್ (ಅಂದಾಜು 1.69 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಮೂಲಕ ಹೂಡಿಕೆ ಮಾಡಲಿವೆ. ಇದರಿಂದ ಉಭಯ ದೇಶಗಳ ಬಾಂಧವ್ಯದ ಹಾದಿ ಮತ್ತಷ್ಟು ವಿಸ್ತಾರವಾಗಲಿದೆ.
2024ರ ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಜಗತ್ತು ಆಹಾರ, ಇಂಧನ ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಿಂದ ತತ್ತರಿಸುತ್ತಿದ್ದಾಗ ಈ ಯಾವುದೇ ಸಮಸ್ಯೆ ನಮ್ಮ ರೈತರಿಗೆ ಎದುರಾಗಲು ನಾವು ಬಿಡಲಿಲ್ಲ. ಈ ವಿಷಯದಲ್ಲಿ ರಷ್ಯಾ ಜತೆಗಿನ ನಮ್ಮ ಸ್ನೇಹ ಪ್ರಮುಖ ಪಾತ್ರ ವಹಿಸಿತು’ ಎಂದಿದ್ದರಲ್ಲದೆ, ಉಭಯ ದೇಶಗಳ ನಡುವಿನ ಇಂಧನ ಕ್ಷೇೕತ್ರದ ಸಹಕಾರದಿಂದ ಇಡೀ ಜಗತ್ತಿಗೆ ಒಳಿತಾಗಿದೆ ಎಂಬುದನ್ನು ಮೆಲುಕು ಹಾಕಿದ್ದರು. ‘ಭಾರತದಲ್ಲಿ ಹೂಡಿಕೆ ಮಾಡಲು ರಷ್ಯಾ ಸಿದ್ಧವಿದೆ’ ಎಂದು ಪುತಿನ್ ಹಲವು ವೇದಿಕೆಗಳಲ್ಲಿ ಪುನರುಚ್ಚರಿಸಿದ್ದಾರೆ. ‘ಭಾರತದ ನಾಯಕತ್ವವು, ಭಾರತ ಮೊದಲು ಎನ್ನುವ ನೀತಿಯನ್ನು ಪಾಲಿಸುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಸ್ಥಿರತೆಯನ್ನು ತರುತ್ತಿದ್ದಾರೆ. ಭಾರತದಲ್ಲಿನ ಹೂಡಿಕೆಗಳು ಲಾಭದಾಯಕ ಎಂಬುದು ನಮ್ಮ ನಂಬಿಕೆ’ ಎಂದೂ ಮಾಸ್ಕೋದಲ್ಲಿ 2024ರ ಡಿಸೆಂಬರ್ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಹಠಮಾರಿ ಧೋರಣೆಯ ನಡುವೆ ಭಾರತ ಮತ್ತು ರಷ್ಯಾದ ಸ್ನೇಹ ಬಲಗೊಳ್ಳುವಂಥ ವಾತಾವರಣ ಸೃಷ್ಟಿಯಾಗಿದೆ ಮತ್ತು ಇದರಿಂದ ಎರಡು ದೇಶಗಳಿಗೆ ಮಾತ್ರವಲ್ಲದೆ, ಇತರ ದೇಶಗಳಿಗೂ ಲಾಭವಾಗಲಿದೆ ಎಂಬುದು ನಿಸ್ಸಂಶಯ.