

ಸ್ವಾತಂತ್ರ್ಯೋತ್ಸವ ನಿಮಿತ್ತ ಐತಿಹಾಸಿಕ ಕೆಂಪುಕೋಟೆಯಿಂದ ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿರುವುದು, ಹೊಸ ಭರವಸೆಯನ್ನು ಮೂಡಿಸಿದೆ. ಅಲ್ಲದೆ, ಪದೇಪದೆ ಅಣ್ವಸ್ತ್ರ ಬೆದರಿಕೆ ಒಡ್ಡುತ್ತಿದ್ದ ಪಾಕಿಸ್ತಾನಕ್ಕೆ, ಪ್ರಧಾನಿ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದು, ಶತ್ರುರಾಷ್ಟ್ರದ ಬೆದರಿಕೆಗೆ ಜಗ್ಗುವುದಿಲ್ಲ ಎಂದಿದ್ದಾರೆ. ಸಿಂಧೂ ಜಲ ಒಪ್ಪಂದ ರದ್ದತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ‘ನೀರು ಮತ್ತು ರಕ್ತ ಒಟ್ಟೊಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂಬ ಕಠಿಣ ಸಂದೇಶವನ್ನು ರವಾನಿಸಿದ್ದಾರೆ. ಜತೆಗೆ ಹಲವು ಕ್ಷೇತ್ರಗಳಲ್ಲಿ ದೇಶ ಸಾಧಿಸಲಿರುವ ನಾವೀನ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಮುಖ್ಯವಾಗಿ, 3.5 ಕೋಟಿ ಉದ್ಯೋಗ ಸೃಷ್ಟಿಗೆ 1 ಲಕ್ಷ ಕೋಟಿ ರೂ. ಮೊತ್ತದ ಹೊಸ ಯೋಜನೆ ರೂಪಿಸಲಾಗುವುದು ಎಂದಿರುವುದು ಯುವಸಮೂಹದ ಪಾಲಿಗೆ ಶುಭಸುದ್ದಿ. ತಯಾರಿಕಾ ವಲಯಕ್ಕೆ ಒತ್ತು, ಬಾಹ್ಯಾಕಾಶ ತಂತ್ರಜ್ಞಾನ ವಿಸ್ತರಣೆ, ಸಾಗರಾಳದಲ್ಲಿ ಸಂಪನ್ಮೂಲ ಅನ್ವೇಷಣೆಗೆ ಸಮುದ್ರಮಂಥನ ಸೇರಿ ಹಲವು ಸಂಗತಿಗಳ ಮೇಲೆ ಪ್ರಧಾನಿ ಮೋದಿ ಬೆಳಕು ಚೆಲ್ಲಿದ್ದಾರೆ. ಭಾರತ ಪ್ರಸಕ್ತ ಸವಾಲುಗಳಿಗೆ ಸಮರ್ಥ ಪರಿಹಾರ ಕಂಡುಕೊಂಡು, ಭವಿಷ್ಯದ ದಾರಿಯನ್ನು ಸುಗಮಗೊಳಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.
ಎಂಟು ವರ್ಷಗಳ ಬಳಿಕ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಸಮಗ್ರವಾಗಿ ಪರಿಷ್ಕರಿಸಲಾಗುತ್ತಿದ್ದು, ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್ಟಿ ತಗ್ಗಿಸಲಾಗುವುದು, ಇದು ದೇಶದ ಜನರಿಗೆ ದೀಪಾವಳಿಯ ಉಡುಗೊರೆ ಆಗಿರಲಿದೆ ಎಂದಿದ್ದಾರೆ ಮೋದಿ. ಅಲ್ಲದೆ, ಜಿಎಸ್ಟಿ ಸ್ಲ್ಯಾಬ್ಗಳನ್ನು 4ರಿಂದ 2ಕ್ಕೆ ತಗ್ಗಿಸುವ ಸಾಧ್ಯತೆಯೂ ಇದೆ. ಜಿಎಸ್ಟಿಯಲ್ಲಿ ಸುಧಾರಣೆ ಆಗಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿದೆ. ಜಿಎಸ್ಟಿ ವ್ಯವಸ್ಥೆಯ ಆಮೂಲಾಗ್ರ ಸುಧಾರಣೆಯಾಗಬೇಕಿದ್ದು, ಲೋಪಗಳನ್ನು ನಿವಾರಿಸಬೇಕಿದೆ. ಎಂಥ ಉತ್ತಮ ವ್ಯವಸ್ಥೆಯಲ್ಲೂ ಅಪಸವ್ಯಗಳು ನುಸುಳಿದರೆ, ಅದರಿಂದ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ. ಜಿಎಸ್ಟಿಯು ಇದಕ್ಕೆ ಹೊರತಾಗಿಲ್ಲ. ಕೆಲವೆಡೆ ಜಿಎಸ್ಟಿ ಅಧಿಕಾರಿಗಳೇ ಲಂಚಕ್ಕಾಗಿ ಉದ್ಯಮಿಗಳನ್ನು ಸಿಲುಕಿಸುವ ಹೀನಕೃತ್ಯದಲ್ಲಿ ತೊಡಗಿರುವುದು ಖಂಡನೀಯ. ಸರ್ಕಾರ ಒಂದೆಡೆ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ, ನವೋದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಹೀಗಿರುವಾಗ ಇಲಾಖೆಯ ಅಧಿಕಾರಿಗಳೇ ಭ್ರಷ್ಟರಾಗಿ ಎಲ್ಲ ದಾಖಲೆಗಳು ಸರಿ ಇದ್ದರೂ, ಉದ್ಯಮಿಗಳಿಗೆ ಕಿರುಕುಳ ನೀಡುವಂಥ ಪ್ರಕರಣಗಳು ನಿಲ್ಲಬೇಕು ಮತ್ತು ಇಂಥ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತೊಂದೆಡೆ, ಜಿಎಸ್ಟಿ ವಂಚನೆಯ ಪ್ರಕರಣಗಳಿಗೂ ಕಡಿವಾಣ ಹಾಕಬೇಕಿದೆ. 2020-21ರಿಂದ 2024-25ರವರೆಗೆ ಜಿಎಸ್ಟಿ ಅಧಿಕಾರಿಗಳು 91,370 ಪ್ರಕರಣಗಳಿಂದ ಒಟ್ಟು 7.08 ಲಕ್ಷ ಕೋಟಿ ರೂ. ಮೊತ್ತದ ಜಿಎಸ್ಟಿ ವಂಚನೆಯನ್ನು ಪತ್ತೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ನೀಡಿದ್ದಾರೆ. ಆರ್ಥಿಕತೆಗೆ ಉತ್ತೇಜನ ಸಿಗಬೇಕು, ತೆರಿಗೆ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಜಿಎಸ್ಟಿ ವ್ಯವಸ್ಥೆ ದೋಷಗಳಿಂದ ಮುಕ್ತವಾಗಬೇಕು. ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು.