

ಬೆಂಗಳೂರಿನ ಹೊರವಲಯದ ಜಿಗಣಿ ಬಳಿ ನಾಲ್ವರು ಪಾಕಿಸ್ತಾನದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿಚಾರಣೆ ನಡೆಸಿದಾಗ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಅಕ್ರಮವಾಗಿ ಭಾರತದೊಳಕ್ಕೆ ಪ್ರವೇಶ ಮಾಡಿದ್ದ ಈ ನಾಲ್ವರೂ ತಮ್ಮ ಧಾರ್ವಿುಕ ಗುರುತು ಮರೆಮಾಚಲು ಹಿಂದು ಹೆಸರುಗಳನ್ನು ಇಟ್ಟುಕೊಂಡಿದ್ದರು. ರಹೀದ್ ಸಿದ್ದಿಕಿ, ಆಯೇಷಾ, ಹನೀಫ್ ಮತ್ತು ರುಬಿನಾ ಕ್ರಮವಾಗಿ ಶಂಕರ ಶರ್ವ, ಆಶಾ, ರಾಮಬಾಬು ಮತ್ತು ರಾಣಿ ಶರ್ಮಾ ಆಗಿ ಬದಲಾಗಿದ್ದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೇ ಹೇಳುವ ಪ್ರಕಾರ, ಇವರೆಲ್ಲರೂ ಭಾರತಕ್ಕೆ ಬಂದು 10 ವರ್ಷವಾಗಿದೆ. ಬೆಂಗಳೂರಿನಲ್ಲೇ ಒಂದು ವರ್ಷದಿಂದ ನೆಲೆಸಿದ್ದಾರೆ.
ಸ್ಥಳೀಯ ವಿಳಾಸದಲ್ಲೇ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ಗಳನ್ನೂ ಮಾಡಿಸಿಕೊಂಡಿದ್ದಾರೆ. ಇವರ ಮನೆ ಗೋಡೆ ಮೇಲೆ ಮೆಹದಿ ಫೌಂಡೇಷನ್ ಇಂಟರ್ನ್ಯಾಷನಲ್ (ಎಂಎಫ್ಐ) ಎಂಬ ಬರಹ ಇದ್ದುದು, ಮನೆಯ ಒಳಗೆ ಮುಸ್ಲಿಂ ಧರ್ಮಗುರುಗಳ ಫೋಟೋಗಳು ಇದ್ದುದು ನೆರೆಹೊರೆಯವರ ಶಂಕೆಗೆ ಕಾರಣವಾಗಿ, ನಂತರ ಇವರೆಲ್ಲರ ಮೂಲ ಬಹಿರಂಗಗೊಂಡಿದೆ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಇವರೆಲ್ಲರೂ ತಾವು ಪಾಕಿಸ್ತಾನ ಮೂಲದವರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಿಬ್ಬಂದಿ ಜಿಗಣಿ ಕೈಗಾರಿಕಾ ಪ್ರದೇಶದ ಸಮೀಪವೇ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ (ಉಲ್ಪಾ) ಉಗ್ರ ಸಂಘಟನೆಯ ಸದಸ್ಯನೊಬ್ಬನನ್ನು ಬಂಧಿಸಿತ್ತು. ಇದೀಗ ಪಾಕಿಸ್ತಾನದ ಕುಟುಂಬ ಬಂಧನಕ್ಕೆ ಒಳಗಾಗಿರುವುದು ಬೆಂಗಳೂರಿನ ಸುರಕ್ಷತೆಯ ಬಗ್ಗೆಯೇ ಪ್ರಶ್ನೆ ಮೂಡಿಸಿದೆ. ಕರ್ನಾಟಕದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಅಕ್ರಮವಾಗಿ ವಲಸೆ ಬಂದು ನೆಲೆಸಿದವರು ಪತ್ತೆ ಆಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೆಯೂ ಹಲವು ಬಾರಿ ರಾಜ್ಯದಲ್ಲಿ ಹೊರದೇಶದ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ.
ಇವರ ಸಂಖ್ಯೆ ಕಡಿಮೇನಿಲ್ಲ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ, ರಾಜ್ಯದಲ್ಲಿ 754 ವಿದೇಶೀಯರು ಅಕ್ರಮವಾಗಿ ನೆಲೆಸಿದ್ದು, ಈ ಪೈಕಿ ಬೆಂಗಳೂರೊಂದರಲ್ಲೇ 718 ಮಂದಿ ಇದ್ದಾರೆ. ಇದಲ್ಲದೆ, 4890 ವಿದೇಶೀಯರು ವಿದ್ಯಾರ್ಥಿ ವೀಸಾದಲ್ಲಿ ಬಂದು ಮರಳಿ ಹೋಗದೇ ಇಲ್ಲಿಯೇ ನೆಲೆಸಿದ್ದಾರೆ. ವಿದೇಶೀಯರ ನೋಂದಣಿ ಕಚೇರಿಯಿಂದ ರಾಜ್ಯ ಸರ್ಕಾರ ಪಡೆದ ಅಧಿಕೃತ ಮಾಹಿತಿ ಇದಾದರೆ, ಅನಧಿಕೃತ ಮೂಲಗಳ ಪ್ರಕಾರ, ಈ ರೀತಿಯ ವಿದೇಶಿಯರು ಹಲವು ಸಾವಿರ ಸಂಖ್ಯೆಯಲ್ಲಿದ್ದಾರೆ. ಇಂತಹವರನ್ನು ಪತ್ತೆ ಮಾಡಲು ಪೊಲೀಸ್ ಠಾಣೆಗಳಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರೇ ಹೇಳಿದ್ದರು. ಆ ತಂಡಗಳು ಸಮರ್ಪಕವಾಗಿ ಶೋಧ ಕಾರ್ಯ ನಡೆಸಿದರೆ ಇಂತಹ ಅಕ್ರಮ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡುವುದು ಕಷ್ಟದ ಕೆಲಸವೇನಲ್ಲ. ಈ ವಿದೇಶಿ ಪ್ರಜೆಗಳು ಸಾಮಾನ್ಯವಾಗಿ ಮಾದಕ ವಸ್ತುಗಳ ಸಾಗಣೆ, ಧರ್ಮ ಪ್ರಚಾರ- ಪ್ರಚೋದನೆ, ಮತಾಂತರ, ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ಮಾಡುವುದು... ಮುಂತಾದ ಅಪರಾಧ ಪ್ರಕರಣಗಳಲ್ಲಿ ವ್ಯಸ್ತರಾಗಿರುತ್ತಾರೆ. ಇವರಿಂದ ಸಮಾಜದ ಶಾಂತಿ ಸುವ್ಯವಸ್ಥೆಗೆ ಸಮಸ್ಯೆಯಾಗುವುದು ನಿಶ್ಚಿತವೇ. ಹಾಗಾಗಿ ರಾಜ್ಯ ಸರ್ಕಾರ ಈ ವಿದೇಶಿ ಪ್ರಜೆಗಳ ಅಕ್ರಮ ವಾಸದ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅವರನ್ನೆಲ್ಲ ಶೀಘ್ರ ಪತ್ತೆ ಹಚ್ಚಿ ಗಡೀಪಾರಿಗೆ ಕ್ರಮ ಕೈಗೊಳ್ಳಬೇಕು.