ಸಂಪಾದಕೀಯ: ಉತ್ತಮ ಸಂದೇಶ

Untitled design (4)
Published on

ಸಂಪಾದಕೀಯ: ಹಬ್ಬಗಳ ಮೂಲ ಆಶಯವೇ ಸಕಾರಾತ್ಮಕ ಭಾವವನ್ನು ಜಾಗೃತಗೊಳಿಸುವುದು, ಭರವಸೆ ಮೂಡಿಸಿ, ಭವಿಷ್ಯದ ಬಗ್ಗೆ ಆಶಾವಾದವನ್ನು ಬಿತ್ತುವುದು. ಸಾಗಿ ಬಂದ ಹಾದಿಯನ್ನು ಅವಲೋಕಿಸುತ್ತ, ಸಾಧನೆಯನ್ನು ಮೆಲುಕು ಹಾಕುತ್ತ, ದೇಶದ ಸಾಂಸ್ಕೃತಿಕ ಶಕ್ತಿಯನ್ನು, ಆಧ್ಯಾತ್ಮಿಕ ಮಹತ್ವವನ್ನು ಮತ್ತು ಶ್ರಮ ಸಂಸ್ಕೃತಿಯ ಕೊಡುಗೆಯನ್ನು ಶ್ಲಾಘಿಸುವುದು. ದೀಪಾವಳಿಯಂತೂ ಅಂಧಕಾರವನ್ನು ಸೋಲಿಸಿ, ಬೆಳಕು ಹರಡುವ ಹಬ್ಬ. ದೇಶಾದ್ಯಂತ ದೀಪಾವಳಿ ಪರ್ವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜನರು ಸಡಗರ, ಸಂಭ್ರಮದ ವಾತಾವರಣದಲ್ಲಿ ಇರಬೇಕಾದರೆ, ನಮ್ಮ ಸೈನಿಕರು ಗಡಿಯನ್ನು ಕಾಯುತ್ತ ಅವರ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಹಾಗಾಗಿಯೇ, ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದಾಗಿನಿಂದ ಪ್ರತಿ ದೀಪಾವಳಿಯನ್ನು ಯೋಧರ ಜತೆ ಆಚರಿಸುತ್ತಿದ್ದು, ಈ ಬಾರಿಯೂ ವಿಶಿಷ್ಟವಾಗಿ ಆಚರಿಸುವ ಮೂಲಕ, ಉತ್ತಮ ಸಂದೇಶವನ್ನು ರವಾನಿಸಿದ್ದಾರೆ.

ಹಿಮಾಚ್ಛಾದಿತ ಕಾರ್ಗಿಲ್​ನಿಂದ ಹಿಡಿದು ಜೈಸಲ್ಮೇರ್​ನ ಮರುಭೂಮಿಯಲ್ಲೂ ಮೋದಿ ಯೋಧರ ಜತೆ ಈ ಹಿಂದೆ ದೀಪಾವಳಿ ಆಚರಿಸಿದ್ದಾರೆ. ದೇಶದ ಗಡಿಯನ್ನು ಕಾಯುವ ಯೋಧರು ಹಬ್ಬ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಇಂಥ ಹೊತ್ತಲ್ಲಿ ದೇಶದ ಚುಕ್ಕಾಣಿ ಹಿಡಿದವರೇ ಸೈನಿಕರ ಬಳಿ ಬಂದು, ಅವರ ಶ್ರಮ ಮತ್ತು ಕೊಡುಗೆಯನ್ನು ಶ್ಲಾಘಿಸುವುದು ಖಂಡಿತವಾಗಿಯೂ ಆತ್ನಸ್ಥೈರ್ಯ ಹೆಚ್ಚಿಸುವಂಥ ಕ್ರಮ. ಅಷ್ಟೇ ಅಲ್ಲ, ಇಡೀ ದೇಶದ ರಕ್ಷಣಾ ವ್ಯವಸ್ಥೆಯ ಕುರಿತಂತೆ ದೇಶಕ್ಕೆ ಸಕಾರಾತ್ಮಕ ಸಂದೇಶ ರವಾನಿಸಿದಂತಾಗುತ್ತದೆ. ಗೋವಾ-ಕಾರವಾರ ಕರಾವಳಿಯಲ್ಲಿ ಐಎನ್​ಎಸ್ ವಿಕ್ರಾಂತ್ ನೌಕಾಪಡೆಯ ಹಡಗಿನಲ್ಲಿ ಸಿಬ್ಬಂದಿ ಮತ್ತು ಯೋಧರೊಂದಿಗೆ ಸೋಮವಾರ ಹಬ್ಬ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ಐಎನ್​ಎಸ್ ವಿಕ್ರಾಂತ್​ನಲ್ಲಿ ಕಳೆದ ದಿನ ಅದ್ಭುತವಾಗಿತ್ತು.

ಒಂದು ಕಡೆಯಲ್ಲಿ ಸಮುದ್ರವಿದ್ದರೆ, ಇನ್ನೊಂದು ಕಡೆಯಲ್ಲಿ ಭಾರತ ಮಾತೆಯ ಧೀರಯೋಧರ ಶಕ್ತಿ ಇದೆ’ ಎಂದು ಬಣ್ಣಿಸಿದರು. ಅಲ್ಲದೆ, ನೌಕಾಪಡೆಯನ್ನು ಉದ್ದೇಶಿಸಿ ಮಾತನಾಡಿ, ‘ಭಾರತವು ನಕ್ಸಲ್​ವಾದ- ಮಾವೋವಾದವನ್ನು ನಿಮೂಲನೆಗೊಳಿಸುವ ಅಂಚಿನಲ್ಲಿದ್ದು, ಈಗಾಗಲೇ ನೂರಕ್ಕೂ ಅಧಿಕ ಜಿಲ್ಲೆಗಳನ್ನು ನಕ್ಸಲ್​ಮುಕ್ತಗೊಳಿಸಲಾಗಿದೆ. ಹತ್ತು ವರ್ಷಗಳ ಹಿಂದೆ 125 ಜಿಲ್ಲೆಗಳಲ್ಲಿದ್ದ ನಕ್ಸಲ್- ಮಾವೋವಾದದ ಪ್ರಭಾವ ಈಗ 11 ಜಿಲ್ಲೆಗಳಿಗೆ ಸೀಮಿತವಾಗಿದೆ’ ಎಂದರು. ಸೇನೆಯ ಪರಾಕ್ರಮವನ್ನು ಶ್ಲಾಘಿಸಿದ ಪ್ರಧಾನಿ, ‘ವಾಯುಪಡೆಯ ಅದ್ಭುತ ಕೌಶಲ, ಸೇನಾಪಡೆಯ ಶೌರ್ಯ, ನೌಕಾಪಡೆಯ ಬಲ... ಹೀಗೆ ಮೂರೂ ಪಡೆಗಳ ಅಸಾಧಾರಣ ಸಮನ್ವಯದಿಂದ ನಡೆದ ಆಪರೇಷನ್ ಸಿಂಧೂರ ಪಾಕಿಸ್ತಾನವನ್ನು ಕೆಲವೇ ಸಮಯದಲ್ಲಿ ಮಂಡಿಯೂರುವಂತೆ ಮಾಡಿತು’ ಎಂಬ ಮಾತುಗಳನ್ನು ಹೇಳಿದ್ದು ಭಾರತೀಯ ಸೇನಾಪಡೆಯ ಶಕ್ತಿಯನ್ನು ಸಾರುವಂತಿತ್ತು. ಸಾಧನೆ ಮಾಡಿದಾಗ ನಾಯಕತ್ವದಿಂದ ಸಿಗುವ ಪ್ರೋತ್ಸಾಹದ ಮಾತುಗಳು ತಂಡದ ಬಲವನ್ನು ಹೆಚ್ಚಿಸುತ್ತವೆ.

ಸೇನೆಯೂ ಇದಕ್ಕೆ ಹೊರತಲ್ಲ. ಹಾಗಾಗಿ, ಇಡೀ ದೇಶ ಹಬ್ಬದ ಸಡಗರದಲ್ಲಿದ್ದರೆ, ಖುದ್ದು ಪ್ರಧಾನಿಯೇ ಯೋಧರ ಬಳಿ ಹೋಗಿ ಅವರ ಜತೆ ಹಬ್ಬ ಆಚರಿಸುವುದು, ಊಟ ಮಾಡುವುದು ಇವೆಲ್ಲ ಸ್ಪೂರ್ತಿಯ ಮಿಂಚುಗಳೇ ಹೌದು. ಸರಕು ಮತ್ತು ಸೇವಾ ತೆರಿಗೆ ಪರಿಷ್ಕರಣೆಯ ಮೂಲಕ ಜನಸಾಮಾನ್ಯರಿಗೂ ಈ ಬಾರಿಯ ದೀಪಾವಳಿ ಯಾವುದೇ ಬೆಲೆ ಏರಿಕೆಯ ತಲೆನೋವಿಲ್ಲದೆ ಸಂತಸ ಹೆಚ್ಚಿಸಿದೆ. ಖರೀದಿ ಭರಾಟೆ ಹೆಚ್ಚಿದ್ದು, ವಾಹನೋದ್ಯಮಕ್ಕಂತೂ ಶುಕ್ರದೆಸೆ. ದೀಪಾವಳಿಯ ಮೊದಲ ದಿನವೇ ದೇಶದಲ್ಲಿ ಒಂದು ಲಕ್ಷ ಕಾರುಗಳು ಮಾರಾಟವಾಗಿರುವುದು ದಾಖಲೆಯೇ ಸರಿ. ಮಂಗಳವಾರದ ಹೊತ್ತಿಗೆ ಒಟ್ಟಾರೆ ವಹಿವಾಟು 6 ಲಕ್ಷ ಕೋಟಿ ರೂ. ಮೀರಿದ್ದು, ಆರ್ಥಿಕ ಚಟುವಟಿಕೆಗಳಿಗೆ ಬಲ ತುಂಬಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net