ತೈಲದ ಬಿಸಿ; ಇಂಧನ ಜಿಎಸ್​ಟಿ ವ್ಯಾಪ್ತಿಗೆ ಇಲ್ಲ

Editorial
Published on

ಪೆಟ್ರೋಲ್ ಮತ್ತು ಡೀಸೆಲ್ ದರ ಒಂದೇಸಮನೆ ಏರುತ್ತಿರುವುದರಿಂದಾಗಿ (ಕೆಲ ದಿನಗಳಿಂದ ಸ್ಥಿರವಾಗಿದೆ ಎಂಬುದು ಬೇರೆ ಮಾತು) ಜನಸಾಮಾನ್ಯರು ಮತ್ತು ನಾನಾ ವಲಯಗಳು ಬಿಸಿ ಎದುರಿಸುತ್ತಿರುವುದು ಗೊತ್ತೇ ಇದೆ. ಇಂಧನ ದರಕ್ಕೂ ಮತ್ತು ಬೇರೆ ಬೇರೆ ಅಗತ್ಯ ವಸ್ತುಗಳ ಬೆಲೆಗೂ ಸಂಬಂಧ ಇರುವುದರಿಂದಾಗಿ ಇದರ ಪರಿಣಾಮಗಳು ಸರಣಿಯಾಗಿ ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ, ಇಂಧನ ದರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತರಬೇಕೆಂಬ ಆಗ್ರಹ ಇದೆ. ಆದರೆ ಇಂಧನ ಮತ್ತು ಅಡುಗೆ ಅನಿಲವನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಸಾಧ್ಯತೆ ಇಲ್ಲವೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಜಿಎಸ್​ಟಿ ಕೌನ್ಸಿಲ್​ನ ಸದಸ್ಯರಾಗಿರುವ ರಾಜ್ಯ ಸರ್ಕಾರದ ಪ್ರತಿನಿಧಿಗಳಿಂದ ಈ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸಹ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್​ಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಆದಾಯ ಮೂಲಗಳಲ್ಲಿ ಸೇರಿವೆ. ಈ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ವಿಧಿಸುತ್ತವೆ. ಹೀಗಾಗಿ ಇಂಧನ ಉತ್ಪನ್ನಗಳ ಮೂಲ ಬೆಲೆಗಿಂತ ತೆರಿಗೆಗಳ ಪಾಲೇ ಹೆಚ್ಚಾಗುತ್ತದೆ. ಒಂದೊಮ್ಮೆ ಜಿಎಸ್​ಟಿ ವ್ಯಾಪ್ತಿಗೆ ತಂದರೆ ಇಂಧನ ಬೆಲೆ ನಿರ್ಧಾರ ಅಧಿಕಾರ ಜಿಎಸ್​ಟಿ ಮಂಡಳಿಗೆ ಹೋಗುತ್ತದೆ. ಆಗ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನಿರ್ಣಯ ಮಾಡಲು ಬರುವುದಿಲ್ಲ. ಹೀಗಾಗಿಯೇ ಕೆಲ ರಾಜ್ಯ ಸರ್ಕಾರಗಳು ಇಂಧನವನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ವಿರೋಧ ಮಾಡುತ್ತಿವೆ. ಸರ್ಕಾರಗಳ ಆದಾಯ ದೃಷ್ಟಿಯಿಂದ ಇದು ಅನಿವಾರ್ಯ ಎನಿಸಿದರೂ, ಜನರ ಪರಿಸ್ಥಿತಿಯನ್ನು ಸಹ ಗಮನಿಸಬೇಕಾಗುತ್ತದೆ.

ಇಂಧನ ದರ ಏರಿದರೆ ಅದರ ಪರಿಣಾಮವಾಗಿ ಸರಕು ಸಾಗಣೆ ವೆಚ್ಚವೂ ಏರಿ, ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಈಗಾಗಲೇ ಅನೇಕ ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದು, ಜನರು ಹೈರಾಣಾಗುವಂತಾಗಿದೆ. ಕರೊನಾ ಕಾರಣದಿಂದಾಗಿ ಜನರ ಆದಾಯದ ಮೇಲೆ ಕೂಡ ಪರಿಣಾಮ ಆಗಿದ್ದು, ಉದ್ಯೋಗ ನಷ್ಟ ಸಹ ಆಗಿದೆ. ಕೆಲ ವಲಯಗಳು ಈಗಷ್ಟೆ ಚೇತರಿಕೆ ಕಾಣುತ್ತಿದ್ದು, ಕರೊನಾಪೂರ್ವದ ಸ್ಥಿತಿ ಬರಲು ಇನ್ನೂ ಸಾಕಷ್ಟು ಕಾಲ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರೊನಾ ಸಂಕಷ್ಟ ಕಾಲದಲ್ಲಿ ಜನರ ನೆರವಿಗಾಗಿ ಅನೇಕ ಯೋಜನೆಗಳನ್ನು ಘೋಷಿಸಿವೆ ಎಂಬುದು ನಿಜ. ಆದರೆ, ಇಂಧನ ದರ ಏರಿಕೆಯ ಕಾರಣದಿಂದಾಗಿ ಒಟ್ಟಾರೆ ಜೀವನವೆಚ್ಚವೂ ಹೆಚ್ಚುವಂತಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಪ್ರಮಾಣದಲ್ಲಿ ಸುಂಕ ಕಡಿಮೆ ಮಾಡುವ ಮೂಲಕ ಹೊರೆ ಇಳಿಸಬೇಕೆಂಬ ಸಾರ್ವಜನಿಕ ಆಗ್ರಹವೂ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ನಿರ್ಣಯಕ್ಕೆ ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net