ಸಂಪಾದಕೀಯ| ಸಮಸ್ಯೆ ನಿವಾರಿಸಿ

farmers
Published on

ಜಮೀನುಗಳ ಪೋಡಿ ದುರಸ್ತಿಗಾಗಿ ರೈತರು ದಶಕಗಳಿಂದ ಅಲೆಯುತ್ತಿದ್ದರೂ ಆ ಸಮಸ್ಯೆ ಬಗೆಹರಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನತಾದರ್ಶನ ಕಾರ್ಯಕ್ರಮದಲ್ಲೂ ರೈತರ ಪೋಡಿ ಸಮಸ್ಯೆಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬಂದಿದ್ದವು. 2015ರಲ್ಲಿ ‘ಪೋಡಿ ಮುಕ್ತ ಗ್ರಾಮ’ ಯೋಜನೆ ಆರಂಭವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಪೋಡಿ ದುರಸ್ತಿ ಅಭಿಯಾನಗಳನ್ನು ನಡೆಸಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಈಗ ಮತ್ತೊಮ್ಮೆ ಸೆಪ್ಟೆಂಬರ್ 2ರಿಂದ ರಾಜ್ಯದಾದ್ಯಂತ ಪೋಡಿ ರಿಪೇರಿ ಅಭಿಯಾನ ಆರಂಭವಾಗುತ್ತಿದೆ.

2015ರಲ್ಲಿ 1791 ಹಳ್ಳಿ, 2017ರಲ್ಲಿ 1634, 2018ರಲ್ಲಿ 4337, 2019ರಲ್ಲಿ 4647, 2020ರಲ್ಲಿ 2977, 2021ರಲ್ಲಿ 1016 ಹಾಗೂ 2022ರಲ್ಲಿ 228 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗಿದೆ. ಆದರೂ, ಈ ಸಮಸ್ಯೆಯಿಂದ ಇನ್ನೂ ಸಾವಿರಾರು ಹಳ್ಳಿಗಳು ಮುಕ್ತಗೊಳ್ಳಬೇಕಿದೆ. ಕೆಲವೊಂದು ಕಡೆ, ಭೂಮಿಯ ವಿಸ್ತೀರ್ಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಹಣಿಗಳಿರುವುದು ಸಮಸ್ಯೆ ಸೃಷ್ಟಿಸಿದೆ. ಇನ್ನು ಕೆಲವೆಡೆ ರೈತರು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ್ದರೂ. ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೆ ಪಕ್ಕಾ ಪೋಡಿ ಮಾಡಿಕೊಡಲು ಸ್ಥಳೀಯ ಮಟ್ಟದಲ್ಲಿ ಲಂಚಕ್ಕಾಗಿ ಬೇಡಿಕೆ ಇಡುತ್ತಾರೆ ಎಂಬ ಗಂಭೀರ ಆರೋಪವನ್ನು ರೈತರು ಹಲವು ವೇಳೆ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 5 ಲಕ್ಷಕ್ಕೂ ಅಧಿಕ ಪೋಡಿ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಕೆಲ ಅರ್ಜಿಗಳಂತೂ ಹಲವು ವರ್ಷಗಳಿಂದ ಬಾಕಿ ಉಳಿದಿವೆ. ತಮ್ಮ ಅರ್ಜಿಯ ವಿಲೇವಾರಿಗಾಗಿ ಲಕ್ಷಾಂತರ ರೈತರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಜೂರಾದ ಜಮೀನಿಗೆ ಪೋಡಿಯಾಗದ ಕಾರಣ ಆರ್​ಟಿಸಿಯೂ ಇಲ್ಲ. ಇಂತಹ ರೈತರ ಸ್ಥಿತಿ ತ್ರಿಶಂಕುವಿನಂತಾಗಿದೆ. ತಾಲೂಕು, ಭೂಮಾಪನ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಹೀಗಾಗಿ, ಈಗಲಾದರೂ ಸಮಸ್ಯೆಯನ್ನು ಶಾಶ್ವತವಾಗಿ ಮೂಲೋತ್ಪಾಟನೆ ಮಾಡಲು ಅಧಿಕಾರಿಗಳು ಮನಸ್ಸು ಮಾಡಬೇಕಾಗಿದೆ.

‘10 ಲಕ್ಷ ರೈತರಿಗೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದೆ. ದಶಕಗಳಿಂದ ಪೋಡಿ ದುರಸ್ತಿ ಬಾಕಿಯಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲವರಿಗೆ ಮಾತ್ರ ಪೋಡಿ ದುರಸ್ತಿಯಾಗಿದೆ. ಇದರಿಂದಾಗಿ ಹಲವು ರೈತರು ತೊಂದರೆಗೆ ಸಿಲುಕಿದ್ದಾರೆ. ಸೆಪ್ಟೆಂಬರ್ 2ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಮುಂದಾಗಬೇಕು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ‘ಮುಖ್ಯಮಂತ್ರಿಗಳ ಸೂಚನೆಯಂತೆ ಪೋಡಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ. ಆದರೆ, ಪ್ರತಿ ಬಾರಿ ಇಂಥ ಅಭಿಯಾನ ನಡೆದಾಗಲೂ ರೈತರು ತಮ್ಮ ಸಮಸ್ಯೆ ಬಗೆಹರಿಯಬಹುದು ಎಂಬ ನಿರೀಕ್ಷೆ ತಳೆಯುತ್ತಾರೆ. ಆದರೆ, ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಪೋಡಿ ದುರಸ್ತಿಗೆ ಡಿಜಿಟಲ್ ಕಡತಗಳನ್ನು ತಯಾರಿಸುವ ಪ್ರಕ್ರಿಯೆ ಒಳ್ಳೆಯದೇ. ಆದರೆ, ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ರೈತರಲ್ಲಿ ಗೊಂದಲ ಅಥವಾ ಹೊಸ ಸಮಸ್ಯೆಯನ್ನು ಸೃಷ್ಟಿಸುವಂತಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net