

ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದೆ. ನಿವೇಶನ, ಮನೆ ಮಾರಾಟಕ್ಕೆ ಸಂಬಂಧಿಸಿದ ಅಕ್ರಮಗಳನ್ನು ಮತ್ತು ಜನ ವಂಚನೆ, ಮೋಸಕ್ಕೆ ಒಳಗಾಗುವುದನ್ನು ತಡೆಯಲು ಇದು ಉತ್ತಮ ಹೆಜ್ಜೆಯೇ. ಆದರೆ, ಸೂಕ್ತ ತಯಾರಿ ಮಾಡಿಕೊಳ್ಳದೆ ಇ-ಖಾತಾ, ಇ-ಸ್ವತ್ತು ಜಾರಿಗೆ ತಂದಿರುವುದು ಸರಿಯಲ್ಲ. ಜನರಿಗೆ ಸರಿಯಾದ ಮಾಹಿತಿ ನೀಡದೆ, ಹೊಸ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸದೆ ಇರುವುದರಿಂದ ಜನಸಾಮಾನ್ಯರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನೋಂದಣಿ ಪ್ರಕ್ರಿಯೆಗೆ ತೊಡಕುಂಟಾಗಿದ್ದು, ಜನರು ಸ್ಥಳೀಯ ಸಂಸ್ಥೆ ಮತ್ತು ನೋಂದಣಿ ಕಚೇರಿಗಳಿಗೆ ಅಲೆಯುವಂತಾಗಿದೆ.
ನಗರ, ಪಟ್ಟಣ, ಗ್ರಾಮಾಂತರ ಭಾಗದಲ್ಲಿ ಇ-ಆಸ್ತಿ, ಇ-ವಿನ್ಯಾಸ, ಇ-ಸ್ವತ್ತು ಮತ್ತು ಇ-ಖಾತಾ ವಿತರಣೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ಜಂಟಿ ಕಾರ್ಯಪಡೆ ರಚಿಸಲಾಗಿದ್ದರೂ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಂತೂ ಜನರಿಗೆ ಸರಿಯಾದ ಮಾಹಿತಿ ನೀಡುವವರೇ ಇಲ್ಲದಂತಾಗಿದೆ. ಅಲ್ಲದೆ, ಗ್ರಾಮೀಣ ಭಾಗದ ಶೇಕಡ 90ರಷ್ಟು ಆಸ್ತಿಗಳಿಗೆ ಇ-ಸ್ವತ್ತು ಇಲ್ಲ. ಇತ್ತೀಚೆಗೆ ನಗರ ಪ್ರದೇಶಗಳಿಗೆ ಸೇರಿದ ಹಳ್ಳಿಗಳ ಸಮಸ್ಯೆಯೂ ಇದೇ ಆಗಿದೆ. ಹಳ್ಳಿಗರು ಇ-ಸ್ವತ್ತು ಮಾಡಿಸಲು ಪರದಾಡುತ್ತಿದ್ದಾರೆ. ಇದರಿಂದಾಗಿ ಆಸ್ತಿಗಳ ಖರೀದಿ, ನೋಂದಣಿ, ಮಾರಾಟ ಸಾಧ್ಯವಾಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಹೊರತಾದ ಜಮೀನಿಗೆ ಇ-ಸ್ವತ್ತು ನೀಡಲಾಗುತ್ತಿದೆ. ಅದಕ್ಕಾಗಿ ಭೂಪರಿವರ್ತನೆಯಾಗಬೇಕು. ಆದರೆ, ಇದಕ್ಕಾಗಿ ಅಧಿಕಾರಿಗಳು ಹತ್ತಾರು ದಾಖಲೆಗಳನ್ನು ಕೇಳುತ್ತಾರೆ. ಹಳೆಯ ದಾಖಲೆಗಳನ್ನು ಹೊಂದಿಸಲಾಗದೆ ಜನರು ಪರದಾಡುತ್ತಿದ್ದಾರೆ. ಇ-ಸ್ವತ್ತು, ಇ-ಖಾತಾ ಮಾಡಿಕೊಡಲು ಮಧ್ಯವರ್ತಿಗಳೂ ಹುಟ್ಟಿಕೊಂಡಿದ್ದು, ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಭೂಮಾಲೀಕತ್ವ ಸಂಬಂಧ ದಾಖಲೆಗಳನ್ನು ಸರಿಪಡಿಸುವ ಉದ್ದೇಶವೇನೋ ಸೂಕ್ತವಿದೆ. ಆದರೆ, ಅದು ಹತ್ತಾರು ಅಪಸವ್ಯಗಳನ್ನು ಸೃಷ್ಟಿಸಿರುವುದು ವಿಪರ್ಯಾಸ. ಇಂಟರ್ನೆಟ್ ಸೇವೆ ಸರಿಯಾಗಿ ಇಲ್ಲದಿರುವುದು, ಸರ್ವರ್ ಸಮಸ್ಯೆ, ತಂತ್ರಾಶದಲ್ಲಿನ ತೊಡಕುಗಳಂಥ ತಾಂತ್ರಿಕ ಕಾರಣಗಳಿಂದ ಕೂಡ ಇ-ಖಾತಾ, ಇ-ಸ್ವತ್ತು ಪಡೆಯುವುದು ಮತ್ತು ಆ ಮೂಲಕ ನೋಂದಣಿ ಮಾಡಿಸುವುದು ಕಠಿಣವಾಗಿದೆ. ಮಲೆನಾಡಿನ ಭಾಗದ ಪ್ರದೇಶಗಳಲ್ಲೂ ಇ-ಸ್ವತ್ತು ಮರೀಚಿಕೆಯಾಗಿದೆ. ಮಲೆನಾಡಿನ ಅರಣ್ಯ-ಕಂದಾಯ ಭೂಮಿ ನಡುವಿನ ಗೊಂದಲಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. 94-ಸಿ ಮೂಲಕ ಗ್ರಾಮೀಣ ಭಾಗದ ಜನರಿಗೆ ಹಕ್ಕುಪತ್ರವನ್ನು ಕಾಲಮಿತಿಯೊಳಗೆ ವಿತರಿಸಲು ಸರ್ಕಾರ ಈ ಹಿಂದೆಯೇ ಆದೇಶ ಮಾಡಿತ್ತು. ಆದರೆ ಮಲೆನಾಡಿನ ಬಹುತೇಕ ಕಡೆ ಇದು ಕಾರ್ಯರೂಪಕ್ಕೆ ಬಂದಿಲ್ಲ. ಇದು ಸಂಪೂರ್ಣ ಅನುಷ್ಠಾನವಾಗದ ಹೊರತು ಗ್ರಾಮೀಣ ಭಾಗದ ನಿವಾಸಿಗಳಿಗೆ ಇ-ಸ್ವತ್ತು ಮರೀಚಿಕೆಯೇ ಸರಿ. ಇ-ಖಾತಾ ಹಾಗೂ ಇ-ಸ್ವತ್ತು ಮಾಡಿಸಲು ಜನರ ತೊಡಕುಗಳನ್ನು ನಿವಾರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ.