ಸಂಪಾದಕೀಯ| ಕಠಿಣ ಕ್ರಮ ಅಗತ್ಯ

Film
Published on

ತಮ್ಮ ಲೈಂಗಿಕ ತೃಷೆಯನ್ನು ತೀರಿಸಿದರೆ ಮಾತ್ರ ನಟಿಯರಿಗೆ ಚಲನಚಿತ್ರಗಳಲ್ಲಿ ಅವಕಾಶ ಕಲ್ಪಿಸುವ ಕೆಟ್ಟ ಸಂಪ್ರದಾಯ ಮಲಯಾಳಿ ಚಿತ್ರರಂಗದಲ್ಲಿ ಬೇರೂರಿರುವುದನ್ನು ಕೇರಳ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಕೆ. ಹೇಮಾ ನೇತೃತ್ವದ ವಿಚಾರಣಾ ಆಯೋಗ ಖಚಿತಪಡಿಸಿದೆ. ಆಯೋಗದ ವರದಿ ತಡವಾಗಿ ಸಾರ್ವಜನಿಕಗೊಂಡಿದ್ದು, ತಲ್ಲಣ ಮೂಡಿಸಿದೆ. ಅನೇಕ ಆಘಾತಕಾರಿ ವಿವರಗಳನ್ನು ಇದು ಒಳಗೊಂಡಿದ್ದು, ಮಲಯಾಳಿ ಬೆಳ್ಳಿಪರದೆಯ ಹಿಂದಿರುವ ಕರಾಳ ವಾಸ್ತವಗಳನ್ನು ಅನಾವರಣಗೊಳಿಸಿದೆ. ತೀರಾ ಅಪಮಾನಿಕಾರಿಯಾದ, ಮಹಿಳಾ ದ್ವೇಷದ ಮತ್ತು ಕ್ರಿಮಿನಲ್ ವರ್ತನೆಗಳು ಅಲ್ಲಿ ಸಹಜ ಎಂದು ವರದಿ ಬೊಟ್ಟು ಮಾಡಿದೆ. ಸಮಿತಿಯ ವರದಿಯು ನಟಿಯರು ಹಾಗೂ ಇತರರು ನೀಡಿದ ಹೇಳಿಕೆ ಹಾಗೂ ಅನುಭವಗಳನ್ನು ಒಳಗೊಂಡಿದೆ. 2017ರ ಫೆಬ್ರವರಿ ತಿಂಗಳಿನಲ್ಲಿ ಕೊಚ್ಚಿಯಲ್ಲಿ ನಟಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ನಂತರ ಈ ಸಮಿತಿಯನ್ನು ರಚಿಸಲಾಗಿತ್ತು. ಈ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರದಲ್ಲಿ ಮಲಯಾಳಿ ಸಿನಿಮಾ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ ಎಂಬ ಸಂಘಟನೆ ಜನ್ಮತಳೆದಿದೆ. ನ್ಯಾಯಮೂರ್ತಿ ಕೆ.ಹೇಮಾ ನೇತೃತ್ವದ ಸಮಿತಿಯ ವರದಿ ಬಂದ ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದ್ದ ಕೇರಳ ಸರ್ಕಾರ ಈ ವಿಷಯದಲ್ಲಿ ಎಡವಿರುವುದು ಸ್ಪಷ್ಟ. 2019ರಲ್ಲಿಯೇ ಕೇರಳ ಸರ್ಕಾರಕ್ಕೆ ಈ ವರದಿ ಸಲ್ಲಿಕೆಯಾಗಿದ್ದರೂ, ಅದು ಬಹಿರಂಗಗೊಂಡಿರುವುದು 2024ರ ಆಗಸ್ಟ್ 19ರಂದು ಎಂಬುದು ಇನ್ನೂ ಆಘಾತಕಾರಿ ವಿಚಾರ. ಸರ್ಕಾರ ಯಾರನ್ನು ರಕ್ಷಿಸಲು ಹೊರಟಿದೆ, ಮಹಿಳೆಯರ ಸುರಕ್ಷೆಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯವೇಕೆ ಎಂಬ ಅನೇಕ ಪ್ರಶ್ನೆಗಳನ್ನು ಇದು ಹುಟ್ಟುಹಾಕಿದ್ದು, ಸರ್ಕಾರ ಸಮರ್ಪಕವಾಗಿ ಉತ್ತರಿಸಿ ಜನರ ಸಂದೇಹಗಳನ್ನು ಬಗೆಹರಿಸಬೇಕಿದೆ.

ಲೈಂಗಿಕ ಕಿರುಕುಳವೇ ನಟಿಯರು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ. ಮಹಿಳೆಯರು ಇತರೆಡೆಗಳಲ್ಲಿ ಎದುರಿಸುವ ಸಮಸ್ಯೆಗಳಿಗಿಂತ ಸಿನಿಮಾ ಕ್ಷೇತ್ರದಲ್ಲಿ ಎದುರಿಸುವ ಸಮಸ್ಯೆ ಬಹಳ ಭಿನ್ನವಾಗಿರುತ್ತವೆ ಎಂದೂ ವರದಿ ಹೇಳಿದ್ದು, ಸಿನಿಮಾ ಜಗತ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು, ದೂರು ನಿರ್ವಹಣಾ ವ್ಯವಸ್ಥೆ ಅವಶ್ಯ ಎಂದು ಶಿಫಾರಸು ಮಾಡಿದೆ. ಆದರೆ, ಈಗಲೂ ಕೇರಳ ಸೇರಿದಂತೆ ಹಲವಾರು ಚಿತ್ರರಂಗಗಳಲ್ಲಿ ಮತ್ತು ಕಿರುತೆರೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಗುಟ್ಟೇನಲ್ಲ. ಮಹಿಳಾ ಕಲಾವಿದೆಯರಿಗೆ ಗೌರವಪೂರ್ಣ ಅವಕಾಶಗಳು ಸಿಗುವಂತಾಗಬೇಕೆಂದರೆ ಚಿತ್ರೀಕರಣದ ಎಲ್ಲ ಸೆಟ್​ಗಳಲ್ಲಿಯೂ ಮಹಿಳಾ ಕುಂದುಕೊರತೆ ವಿಚಾರಣಾ ಸಮಿತಿಗಳು ರಚನೆಯಾಗಬೇಕು. ಅವುಗಳಿಗೆ ಬರುವ ದೂರುಗಳ ಪಾರದರ್ಶಕ ಮತ್ತು ನ್ಯಾಯಯುತ ತನಿಖೆಗೆ ಸ್ವತಂತ್ರ ವ್ಯವಸ್ಥೆ ಆಗಬೇಕು. ಮಹಿಳೆಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಯಬೇಕು. ಈ ವರದಿಯಲ್ಲಿನ ಅಂಶಗಳಿಂದ ಬೇರೆ ಭಾಷೆಗಳ ಸಿನಿಮಾ ಉದ್ಯಮಗಳು ಎಚ್ಚೆತ್ತುಕೊಂಡು, ಮಹಿಳೆಯರ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು. ಅಲ್ಲದೆ, ಕೇರಳ ಸರ್ಕಾರ ಇನ್ನಾದರೂ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net