ಸಂಪಾದಕೀಯ: ಕಠಿಣ ಕ್ರಮ ಅಗತ್ಯ

army
Published on

ಶಾಂತಿಸ್ಥಾಪನೆಯ ಉದ್ದೇಶವನ್ನು ಹಾಳುಗೆಡವಲು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ದೋಡಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಓರ್ವ ಕ್ಯಾಪ್ಟನ್ ಸಹಿತ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಇದರೊಂದಿಗೆ ಕಳೆದ 3 ತಿಂಗಳ ಅವಧಿಯಲ್ಲಿ ನಡೆದ ಪ್ರತ್ಯೇಕ ಉಗ್ರ ದಾಳಿಯಲ್ಲಿ 11 ಸೈನಿಕರು, 10 ನಾಗರಿಕರು ಮೃತಪಟ್ಟಿದ್ದಾರೆ. ಕೆಲ ದಿನದ ಹಿಂದಷ್ಟೇ ಕಥುವಾದಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಿಂದಾಗಿ ಐವರು ಯೋಧರು ಹುತಾತ್ಮರಾದರು. ‘ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಭಯೋತ್ಪಾದನೆಯ ಹಾವಳಿಯನ್ನು ಕೊನೆಗಾಣಿಸಲು ಭದ್ರತಾ ಪಡೆಗಳು ಬದ್ಧವಾಗಿವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದು, ಸೇನಾ ಮುಖ್ಯಸ್ಥರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಉಗ್ರಗಾಮಿಗಳ ಹಾವಳಿ ಕಡಿಮೆಯಾಗಿತ್ತಾದರೂ, ಮೂರು ತಿಂಗಳಿಂದ ಮತ್ತೆ ಭಯೋತ್ಪಾದಕರ ದಾಳಿ ಪ್ರಕರಣಗಳು ಹೆಚ್ಚಿರುವುದು ಗಂಭೀರ ವಿಷಯ. ಜಮ್ಮು-ಕಾಶ್ಮೀರಕ್ಕೆ ವಿಧಿ 370ರ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ಹಿಂಪಡೆದ ಐತಿಹಾಸಿಕ ನಿರ್ಣಯದ ಬಳಿಕ, ಭಯೋತ್ಪಾದನೆ ವಿರುದ್ಧದ ನೀತಿಯು ಇನ್ನಷ್ಟು ಬಿಗಿಗೊಂಡಿತು. ಪರಿಣಾಮ, ಗಡಿಯಾಚೆಯಿಂದ ನುಸುಳುವ ಉಗ್ರರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಉಗ್ರರಿಂದ ಅನಿರೀಕ್ಷಿತ ದಾಳಿ, ಯೋಧರ ಹತ್ಯೆ ಆಗಾಗ ನಡೆಯುತ್ತಲೇ ಇವೆ. ಉಗ್ರರು ಆಗಾಗ ಇನ್ನೂ ತಮ್ಮ ಇರುವನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಯುವ ಉಗ್ರರ ನೇಮಕ, ತರಬೇತಿ, ದಾಳಿಯ ಯೋಜನೆ ಮುಂತಾದ ಕೃತ್ಯಗಳಿಗೆ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆಪ್​ಗಳು ವರದಾನವಾಗಿ ಪರಿಣಮಿಸಿವೆ. ಕೊನೇ ಪಕ್ಷ ಉಗ್ರಗಾಮಿಗಳು ಸಕ್ರಿಯವಾಗಿರುವ ಪ್ರದೇಶಗಳಲ್ಲಾದರೂ ಇಂಥ ಆಪ್​ಗಳನ್ನು ನಿಯಂತ್ರಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ.

ಭಯೋತ್ಪಾದಕರಿಗೆ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಸಹಕರಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಕಾನೂನನ್ನು ಬಲ ಪಡಿಸಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆಯಾದರೂ, ಅದನ್ನು ಅನುಷ್ಠಾನಕ್ಕೆ ತರಬೇಕಿದೆ. ಉಗ್ರ ಸಂಘಟನೆಗಳು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಇಂಥ ದಾಳಿ ನಡೆಸುತ್ತಿವೆ ಎಂಬುದನ್ನು ಗುಪ್ತಚರ ಮೂಲಗಳು ಹಲವು ಸಂದರ್ಭದಲ್ಲಿ ಸ್ಪಷ್ಟ ಪುರಾವೆಗಳೊಂದಿಗೆ ಹೇಳಿವೆ.

ಇನ್ನು, ರಾಜಕೀಯ ಅಸ್ಥಿರತೆ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪಾಕಿಸ್ತಾನ ಭಯೋತ್ಪಾದನೆಯ ಪ್ರಾಯೋಜಕತ್ವವನ್ನು ಇನ್ನೂ ತ್ಯಜಿಸಿಲ್ಲ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತಿದೆ. ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟ ಜಾಗತಿಕ ಮಟ್ಟದಲ್ಲಿ ನಡೆಸುವ ಅಗತ್ಯವಿದೆ ಮತ್ತು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ರಷ್ಯಾ ಭೇಟಿ ಸಂದರ್ಭದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಜತೆಗಿನ ಮಾತುಕತೆಯ ವೇಳೆ ಪ್ರಸ್ತಾಪಿಸಿದ್ದಾರೆ. ಕಾಶ್ಮೀರವನ್ನು ಮತ್ತೆ ಅಶಾಂತಿಯ ಕೂಪಕ್ಕೆ ತಳ್ಳುವ ಉಗ್ರರ ಷಡ್ಯಂತ್ರ ಯಾವುದೇ ಕಾರಣಕ್ಕೂ ಯಶಸ್ವಿಯಾಗಬಾರದು. ಇನ್ನಷ್ಟು ಕಠಿಣ ಕ್ರಮಗಳ ಮೂಲಕ ಉಗ್ರವಾದವನ್ನು ಬೇರುಸಮೇತ ಕಿತ್ತೊಗೆಯಲು ಸರ್ಕಾರ ಸಂಕಲ್ಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net