ಸಂಪಾದಕೀಯ: ನದಿಗಳಿಗೆ ವಿಷ ಹಾಕಬೇಡಿ

untitled-design-69024e67a1a6e
Published on

ನಾಡಿನ ಜೀವನಾಡಿ ಎಂದೇ ಕರೆಯಲ್ಪಡುವ ನದಿಗಳು ಇಂದು ಒಳಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಕಲುಷಿತಗೊಂಡಿವೆ. ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಹನ್ನೆರಡು ನದಿಗಳ ನೀರು ತೀವ್ರ ಮಾಲಿನ್ಯಕ್ಕೆ ಒಳಗಾಗಿದೆ ಎಂಬುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್​ಪಿಸಿಬಿ) ಇತ್ತೀಚಿನ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ನದಿಗಳ ನೀರನ್ನು ಬಹುತೇಕ ಜಿಲ್ಲೆಗಳ ಜನರು ವ್ಯವಸಾಯಕ್ಕೆ, ಕುಡಿಯುವುದಕ್ಕೆ ಮತ್ತು ಇತರ ದೈನಂದಿನ ಅವಶ್ಯಕತೆಗಳಿಗೆ ಬಳಸುತ್ತಾರೆ. ಆದರೆ, ಈ ಮಾಲಿನ್ಯವು ಜನರ ಆರೋಗ್ಯಕ್ಕೆ, ಕೃಷಿ ಉತ್ಪಾದನೆಗೆ ಮತ್ತು ಜೀವವೈವಿಧ್ಯಕ್ಕೆ ಗಂಭೀರ ಬೆದರಿಕೆಯಾಗಿದೆ.

ಕೆಎಸ್​ಪಿಸಿಬಿ ವರದಿ ಪ್ರಕಾರ, ಕಾವೇರಿ ನದಿಯ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಮಟ್ಟ 6 ಮಿ.ಗ್ರಾ./ಲೀ., ಕೃಷ್ಣಾ ನದಿಯದು 4.7 ಮಿ.ಗ್ರಾ./ಲೀ., ತುಂಗಭದ್ರಾ ನದಿಯದು 6.2 ಮಿ.ಗ್ರಾ./ಲೀ. ಇದೆ. ಕುಡಿಯಲು ಯೋಗ್ಯವಾಗಿರಬೇಕೆಂದರೆ ನೀರಿನ ಬಿಒಡಿ ಮಟ್ಟ 3 ಮಿ.ಗ್ರಾ./ಲೀ.ಗಿಂತ ಹೆಚ್ಚಿರಬಾರದು. ಹಾಗಾಗಿ ಈ ನದಿಗಳು ಮೀನುಗಾರಿಕೆ ಮತ್ತು ಕೃಷಿಗೆ ಮಾತ್ರ ಯೋಗ್ಯವೆನಿಸುವ ಮಟ್ಟಕ್ಕೆ ಇಳಿದಿವೆ. ನೇತ್ರಾವತಿ ಹೊರತುಪಡಿಸಿ, ಉಳಿದೆಲ್ಲವೂ ಕುಡಿಯುವುದಕ್ಕೆ ಅಸುರಕ್ಷಿತ. ಫೆಕಲ್ ಕೊಲಿಫಾಮ್ರ್ ಮಟ್ಟವು ಕೆಲವು ಸ್ಥಳಗಳಲ್ಲಿ 2500 ಎಂಪಿಎನ್/100 ಎಂ.ಎಲ್.ಗಿಂತ ಹೆಚ್ಚು ಕಂಡುಬಂದಿದೆ. ಇದು ಕಾಯಿಲೆಗಳಿಗೆ ಕಾರಣವಾಗಬಲ್ಲದು. ರಾಜ್ಯದ 17 ನದಿ ತಟಗಳು ಮಾಲಿನ್ಯಕ್ಕೆ ಒಳಗಾಗಿದ್ದು, ಆ ಪೈಕಿ 3 ಭಾಗಗಳು ಅತ್ಯಂತ ಕಲುಷಿತವಾಗಿವೆ.

ಕಾವೇರಿ, ಕೃಷ್ಣಾ, ತುಂಗಭದ್ರಾ, ಭದ್ರಾ, ಶಿಂಷಾ, ಕಬಿನಿ, ಅರ್ಕಾವತಿ, ಭೀಮಾ, ಲಕ್ಷ್ಮಣತೀರ್ಥ, ನೇತ್ರಾವತಿ, ಕಾಗಿಣಾ ಮತ್ತು ತುಂಗಾ ನದಿಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ಇದೆ. ರಾಜ್ಯದ ಉತ್ತರದಿಂದ ದಕ್ಷಿಣದವರೆಗೆ ಹರಿಯುತ್ತಾ, ಸಾವಿರಾರು ಜನವಸತಿ ಪ್ರದೇಶಗಳಿಗೆ ಮತ್ತು ಬೆಂಗಳೂರು, ಮೈಸೂರಿನಂತಹ ಬೃಹತ್ ನಗರಗಳಿಗೆ ಇವು ನೀರು ಪೂರೈಸುತ್ತವೆ. ಕಾವೇರಿಯ ನೀರು ತೀವ್ರ ಕಲುಷಿತಗೊಂಡಿದೆ. ಕೃಷ್ಣಾ ನದಿಯು ಉತ್ತರ ಕರ್ನಾಟಕದ ಕೃಷಿಗೆ ಮತ್ತು ನಗರಗಳಿಗೆ ಆಧಾರವಾಗಿದೆ. ಇದರ ಮಾಲಿನ್ಯದಿಂದ ಬಾಗಲಕೋಟೆ, ವಿಜಯಪುರ ಮುಂತಾದೆಡೆಯ ಶೇ. 40ಕ್ಕೂ ಹೆಚ್ಚು ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಹರಿಹರ, ದಾವಣಗೆರೆ ಮುಂತಾದ ಪ್ರದೇಶಗಳ ಕೈಗಾರಿಕಾ ತ್ಯಾಜ್ಯದಿಂದ ತುಂಗಭದ್ರೆ ಕಲುಷಿತವಾಗಿದೆ.

ಬೆಂಗಳೂರಿನ ತೀವ್ರತರ ಬೆಳವಣಿಗೆಯಿಂದಾಗಿ ಅರ್ಕಾವತಿಯ ಬಿಒಡಿ 39 ಮಿ.ಗ್ರಾ./ಲೀ.ಗೆ ತಲುಪಿದೆ. ಲಕ್ಷ್ಮಣತೀರ್ಥ 6.6 ಮಿ.ಗ್ರಾ./ಲೀ., ಶಿಂಷಾ 9.5 ಮಿ.ಗ್ರಾ./ಲೀ. ಇದೆ. ನೇತ್ರಾವತಿ ‘ಬಿ’ ವರ್ಗದಲ್ಲಿದ್ದರೂ, ಇತರ ನದಿಗಳಷ್ಟು ತೊಂದರೆಯಲ್ಲಿಲ್ಲ. ರಾಜ್ಯದಲ್ಲಿ ಪ್ರತಿದಿನ 1,746 ದಶಲಕ್ಷ ಲೀ. ಒಳಚರಂಡಿ ನೀರು ನದಿಗಳಿಗೆ ಹರಿದುಹೋಗುತ್ತಿದೆ. ಒಳಚರಂಡಿ ನೀರಿನ ಶುದ್ಧೀಕರಣ ಸಾಮರ್ಥ್ಯ ಕೇವಲ ಶೇ. 60ರಷ್ಟಿದೆ.

ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ರಾಸಾಯನಿಕಗಳೇ ನದಿಗಳ ಮಾಲಿನ್ಯಕ್ಕೆ ಮೂಲ ಕಾರಣಗಳಾಗಿವೆ. ಬೆಂಗಳೂರು, ಮೈಸೂರಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳ (ಎಸ್​ಟಿಪಿ) ಸಂಖ್ಯೆ ಅಗತ್ಯವಿರುವಷ್ಟಿಲ್ಲ. ಉದ್ಯಮಗಳು ರಾಜಾರೋಷವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸರ್ಕಾರ ಈಗಾಗಲೇ 24 ಎಸ್​ಟಿಪಿಗಳನ್ನು ನಿರ್ವಿುಸಿರುವುದು ಶ್ಲಾಘನೀಯವಾದರೂ ಅವುಗಳ ಕಾರ್ಯನಿರ್ವಹಣೆ, ಬಳಕೆ ತೃಪ್ತಿಕರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ನದಿಗಳ ಮಾಲಿನ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net