ಸಂಪಾದಕೀಯ; ಭಯ ಬೇಡ, ಮುನ್ನೆಚ್ಚರಿಕೆ ಇರಲಿ

Covid
Published on

ಕೋವಿಡ್-19 ಸಾಂಕ್ರಾಮಿಕ ರೋಗ ಐದು ವರ್ಷಗಳ ಹಿಂದೆ ಇಡೀ ಜಗತ್ತಿನಲ್ಲಿ ಹಾವಳಿ ಎಬ್ಬಿಸಿ ಕೋಟ್ಯಂತರ ಜನರ ಜೀವ-ಜೀವನಕ್ಕೆ ಕಂಟಕವಾಗಿದ್ದನ್ನು ಯಾರೂ ಮರೆತಿಲ್ಲ. ಆರಂಭದಲ್ಲಿ ಚೀನಾದ ವುಹಾನ್​ನಿಂದ ಹರಡಿದ ಈ ವೈರಸ್, ಇಂದಿಗೂ ಹೊಸ ರೂಪಾಂತರಿಗಳ ಮೂಲಕ ಆಗಾಗ ಹೆದರಿಸುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಕರೊನಾ ಮತ್ತೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದು ಆತಂಕ ಉಂಟು ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸಕ್ತ ತಿಂಗಳಲ್ಲಿ ಕೋವಿಡ್-19ರ ಎಲ್​ಎಫ್​-7 ಮತ್ತು ಎನ್​ಬಿ-1.8.1 ರೂಪಾಂತರಿಗಳು ಸಕ್ರಿಯವಾಗಿವೆ.

ಇವುಗಳನ್ನು ವೇರಿಯಂಟ್ಸ್ ಅಂಡರ್ ಮಾನಿಟರಿಂಗ್ (ವಿಯುಎಂ) ಎಂದು ವರ್ಗೀಕರಿಸಲಾಗಿದೆ. ವೇರಿಯಂಟ್ಸ್ ಆಫ್ ಕನ್ಸರ್ನ್ (ವಿಯುಸಿ) ಆಗಿ ಇನ್ನೂ ಗುರುತಿಸಲಾಗಿಲ್ಲ. ಆದರೆ ಚೀನಾ, ಸಿಂಗಾಪುರ್ ಮತ್ತು ಹಾಂಗ್​ಕಾಂಗ್​ನಂತಹ ಏಷ್ಯಾದ ಕೆಲವು ಭಾಗಗಳಲ್ಲಿ ಈ ರೂಪಾಂತರಿಗಳಿಂದಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಚೀನಾದಲ್ಲಿ ಉಸಿರಾಟದ ಸಮಸ್ಯೆಗೆ ಕಾರಣವಾಗುವ ಹ್ಯೂಮನ್ ಮೆಟಾನ್ಯೂಮೊ ವೈರಸ್ (ಎಚ್​ಎಂಪಿವಿ) ಜತೆಗೆ ಕೋವಿಡ್​ನ ರೂಪಾಂತರಿಗಳು ಅಲ್ಲಿನ ಆಡಳಿತಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮತ್ತು ಕ್ವಾರಂಟೈನ್ ಕ್ರಮಗಳನ್ನು ಹೆಚ್ಚಿಸಲಾಗಿದೆ. ಆದರೆ, ಈ ರೂಪಾಂತರಿಗಳಿಂದ ಉಂಟಾಗುವ ರೋಗದ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಕಡಿಮೆ ಇವೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಈಗ 250ಕ್ಕೂ ಹೆಚ್ಚಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಜ್ವರದಂತಹ ಕಾಯಿಲೆಗಳಿಂದ ದಾಖಲಾಗುವವರ ಮೇಲೆ ನಿಗಾ ಇಡುವಂತೆ ಆಸ್ಪತ್ರೆಗಳಿಗೆ ಸೂಚಿಸಿದೆ. ಎಲ್​ಎಫ್​-7 ಮತ್ತು ಎನ್​ಬಿ-1.8.1 ರೂಪಾಂತರಿಗಳು ನಮ್ಮ ದೇಶದಲ್ಲಿಯೂ ಕಂಡುಬಂದಿವೆ. ಆದರೆ ಇವು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಿಲ್ಲ. ಕರ್ನಾಟಕದಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗಿವೆ.

ಈ ತಿಂಗಳ 21ರ ವೇಳೆಗೆ ರಾಜ್ಯದಲ್ಲಿ 16 ಸಕ್ರಿಯ ಪ್ರಕರಣಗಳಿದ್ದವು. ಈಗ 47 ಪ್ರಕರಣಗಳಿವೆ. ಇವುಗಳಲ್ಲಿ ಅತ್ಯಧಿಕ ಪ್ರಕರಣಗಳು ಬೆಂಗಳೂರಿನಲ್ಲೇ ಇವೆ. 9 ತಿಂಗಳ ಮಗುವಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಇತರ ಕಾಯಿಲೆಗಳನ್ನು ಹೊಂದಿದ್ದ, ಕೋವಿಡ್ ಸೋಂಕುಳ್ಳ 84 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದು 2025ರಲ್ಲಿ ರಾಜ್ಯದ ಮೊದಲ ಕೋವಿಡ್ ಸಂಬಂಧಿತ ಸಾವು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನರು ಭಯ ಪಡಬೇಕಿಲ್ಲ. ಆದರೆ ಜಾಗರೂಕತೆಯಿಂದ ಇರುವುದು ಅಗತ್ಯ. ಗರ್ಭಿಣಿಯರು, ಮಕ್ಕಳು, ಇತರ ಕಾಯಿಲೆ ಇರುವವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಜನದಟ್ಟಣೆಯ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಮುನ್ನೆಚ್ಚರಿಕೆಯಿಂದ ಮಾತ್ರ ಈ ರೋಗದ ವಿರುದ್ಧ ಗೆಲುವು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net