ಸಂಪಾದಕೀಯ: ಕರೊನಾ ವೈರಸ್​ ಬಗ್ಗೆ ನಿರ್ಲಕ್ಷ್ಯ ಸಲ್ಲದು

Corona
Published on

ದೇಶದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ನಿರೀಕ್ಷಿತ ಕೂಡ. ಒಟ್ಟಾರೆ ಪ್ರಕರಣಗಳ ಸಂಖ್ಯೆ 33 ಲಕ್ಷದ ಸನಿಹಕ್ಕೆ ಬಂದಿದೆ. ಅದೇ ಸಂದರ್ಭದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಕೂಡ ಹೆಚ್ಚಳವಾಗುತ್ತಿರುವುದು ಆತಂಕದ ನಡುವೆಯೂ ಸ್ವಲ್ಪ ಸಮಾಧಾನದ ಸಂಗತಿ. ಒಟ್ಟು ಸೋಂಕಿತರಲ್ಲಿ ಸುಮಾರು 25 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಆ ಲೆಕ್ಕದಲ್ಲಿ ಚೇತರಿಕೆ ಪ್ರಮಾಣ ಶೇ.75ಕ್ಕಿಂತ ಹೆಚ್ಚಿಗೆಯಿದೆ. ದೆಹಲಿ ಈ ನಿಟ್ಟಿನಲ್ಲಿ ಅತ್ಯಧಿಕ ಅಂದರೆ. ಶೇ.90ಕ್ಕಿಂತ ಅಧಿಕ ಗುಣಮುಖ ಪ್ರಮಾಣ ಹೊಂದಿದೆ. ಕೆಲ ದಿನಗಳ ಹಿಂದಿನವರೆಗೂ ಆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಚೇತರಿಕೆ ವಿಚಾರ ಗಮನಾರ್ಹವಾದುದು. ಹಾಗೇ, ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.1.70ಕ್ಕಿಂತ ಕಡಿಮೆ ಇದ್ದು, ಇದು ವಿಶ್ವದಲ್ಲೇ ಅತ್ಯಂತ ಕನಿಷ್ಠ ಮರಣಪ್ರಮಾಣವಾಗಿದೆ. ಕರೊನಾ ಪ್ರಕರಣಗಳ ಸಂಖ್ಯೆ ಕೆಲ ತಿಂಗಳ ಕಾಲ ಹೆಚ್ಚುತ್ತಲೇ ಇರುತ್ತದೆ ಎಂದು ತಜ್ಞರು ಈ ಮೊದಲೇ ಎಚ್ಚರಿಸಿದ್ದರು. ಕೆಲ ದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೂಡ, ‘ಇನ್ನೂ ಅನೇಕ ಕಾಲ ನಾವು ಕರೊನಾ ಜತೆಗೆ ಸಹಜೀವನ ನಡೆಸಬೇಕಾಗುತ್ತದೆ’ಎಂಬ ಮಾತು ಹೇಳಿದ್ದರು. ಹೀಗಾಗಿ ಜನರು ಈ ಹಂತದಲ್ಲಿ ಗಾಬರಿಬೀಳುವುದಕ್ಕಿಂತ ಇನ್ನಷ್ಟು ಎಚ್ಚರದಿಂದ ಜೀವನ ಸಾಗಿಸಬೇಕಾದ ಅಗತ್ಯವಿದೆ. ಕರೊನಾ ನಿಯಂತ್ರಣಕ್ಕಾಗಿ ವಿಧಿಸಲಾದ ಲಾಕ್​ಡೌನ್ ಕೂಡ ಹಂತಹಂತವಾಗಿ ಸಡಿಲವಾಗುತ್ತಿದ್ದು, ಮೆಟ್ರೋ ರೈಲು, ಸಿನಿಮಾ ಮಂದಿರಗಳು, ಶಾಲಾಕಾಲೇಜು ಮುಂತಾದವನ್ನು ಹೊರತುಪಡಿಸಿ ಉಳಿದ ಬಹುತೇಕ ರಂಗಗಳು ನಿರ್ಬಂಧಮುಕ್ತವಾಗಿವೆ. ಹೀಗಾಗಿ ಜನಜೀವನ ಎಂದಿನ ಸ್ಥಿತಿಗೆ ಮರಳುತ್ತಿದ್ದು, ಸಾರ್ವಜನಿಕ ಚಟುವಟಿಕೆಗಳೂ ಸಹ ವೇಗ ಪಡೆದುಕೊಂಡಿವೆ. ಜನರ ಓಡಾಟ ಸಹ ಜಾಸ್ತಿಯಾಗಿದೆ. ಕರೊನಾದಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳು ತೊಂದರೆ ಅನುಭವಿಸಿದ್ದು, ಈಗ ಮರುಚೇತರಿಕೆಯತ್ತ ಗಮನಹರಿಸಬೇಕಾಗಿದೆ. ಇದನ್ನೂ ಓದಿ:  ‘ಒಂದಲ್ಲ…8 ಹಾರ್ಡ್​ ಡ್ರೈವ್​ಗಳು…!’; ಇನ್ನೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಸ್ನೇಹಿತ

ಕೇಂದ್ರ ಸರ್ಕಾರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೆ ಅಪಾರ ಆರ್ಥಿಕ ನಷ್ಟವಾಗಿದ್ದು, ಅದನ್ನು ತುಂಬಿಕೊಳ್ಳುವತ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದೇ ಸಂದರ್ಭದಲ್ಲಿ, ಕೋಟ್ಯಂತರ ಉದ್ಯೋಗಹಾನಿಯೂ ಆಗಿದೆ. ಆದ್ದರಿಂದ, ಕರೊನಾ ಇರುವಂತೆಯೇ ಮತ್ತೆ ಪ್ರಗತಿಯ ಹಳಿಗೆ ಏರುವುದರ ಬಗ್ಗೆ ಈಗ ಸರ್ಕಾರಗಳು ಮತ್ತು ಜನರ ಚಿತ್ತ ಹರಿಯಬೇಕಾಗಿದೆ. ವಿಶೇಷವಾಗಿ ಸರ್ಕಾರಗಳು ಅಗತ್ಯ ನೀತಿನಿರೂಪಣೆ ವಿಷಯದಲ್ಲಿ ವಿಳಂಬಿಸದೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಧಿಕಾರಶಾಹಿಯ ವಿಳಂಬನೀತಿಯಿಂದಾಗಿ ಆಗುವ ಪರಿಣಾಮಗಳೇನು ಎಂಬುದು ನಮಗೆ ಗೊತ್ತಿಲ್ಲದ ವಿಷಯವೇನಲ್ಲ. ಅದೇ ಸಂದರ್ಭದಲ್ಲಿ, ಕರೊನಾ ಲಸಿಕೆ ಅನ್ವೇಷಣೆಯ ಪ್ರಯತ್ನಗಳು ಸಾಗಿದ್ದು, ಭಾರತದಲ್ಲಿಯೂ ಇದು ಯಶಸ್ವಿಯಾಗುವ ಸಂಕೇತಗಳು ದೊರಕುತ್ತಿವೆ. ಹಾಗಂತ, ಇದೆಲ್ಲ ಮಾಮೂಲು ಎಂದು ಕರೊನಾ ಕುರಿತು ನಿರ್ಲಕ್ಷ್ಯ ಸಲ್ಲದು. ಆರೋಗ್ಯಕರ ಆಹಾರ-ವಿಹಾರ ಪದ್ಧತಿ, ವ್ಯಕ್ತಿಗತ ಅಂತರ, ಮಾಸ್ಕ್ ಧರಿಸುವುದು ಮುಂತಾದ ಕ್ರಮಗಳು ನಮ್ಮ ಜೀವನಶೈಲಿಯ ಭಾಗವಾಗಬೇಕಿದೆ. ಕರೊನಾ ವಿರುದ್ಧದ ಹೋರಾಟವೆಂಬುದು ಒಂದು ಸಾಮೂಹಿಕ ಪ್ರಯತ್ನ ಎಂಬುದನ್ನು ನಾವು ಮರೆಯ ಬಾರದು. ಇಲ್ಲಿ ಸರ್ಕಾರ ಮತ್ತು ಸಮಾಜ ಎರಡರ ಪಾತ್ರವೂ ಮುಖ್ಯವಾದುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net