ಹರಡುತ್ತಿರುವ ಕರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ...

Coronavirus Feb 20-10
Published on

ಕರೊನಾ ಸೋಂಕು ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಲೇ ಇದೆ. ದೇಶದ ಲೆಕ್ಕಾಚಾರ ತೆಗೆದುಕೊಂಡರೆ ಮೂರ್ನಾಲ್ಕು ದಿನಗಳಿಂದ ಒಟ್ಟಾರೆ ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಮುಖವಾಗಿದ್ದರೂ, ರಾಜ್ಯದಲ್ಲಿ ಮಾತ್ರ ಸೋಂಕಿನ ಪ್ರಸರಣ ತಗ್ಗದಿರುವುದು ಕಳವಳಕ್ಕೆ ಕಾರಣವಾಗಿದೆ. ಈ ನಡುವೆ, ರಾಜ್ಯ ಸರ್ಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ವಿಧಿಸಲಾಗುವ ದಂಡದ ಮೊತ್ತದಲ್ಲಿ ಇಳಿಕೆ ಮಾಡಿದೆ. ಈ ಮೊದಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 1 ಸಾವಿರ ರೂ. ಮತ್ತು 500 ರೂ. ದಂಡ ವಿಧಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ ದಂಡದ ಮೊತ್ತ ಹೆಚ್ಚಾಯಿತು ಎಂದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ದಂಡದ ಪ್ರಮಾಣವನ್ನು ನಗರ ಪ್ರದೇಶಗಳಲ್ಲಿ 250 ರೂ.ಗೆ ಮತ್ತು ಗ್ರಾಮೀಣದಲ್ಲಿ 100 ರೂ.ಗೆ ಇಳಿಸಲಾಗಿದೆ. ಹಾಗಂತ ಇದು ನಿಯಮ ಉಲ್ಲಂಘನೆಗೆ ಅವಕಾಶ ಎಂದು ಯಾರೂ ಭಾವಿಸಬಾರದು; ದಂಡ ಕಟ್ಟಿ ಪಾರಾಗಬಹುದು ಎಂದು ಆಲೋಚಿಸಬಾರದು. ಏಕೆಂದರೆ, ಕರೊನಾ ನಮ್ಮೆದುರು ತಂದಿಟ್ಟಿರುವ ಸಮಸ್ಯೆಯ ಗಾತ್ರವೇ ಹಾಗಿದೆ. ಈಗಾಗಲೇ, ಸಾಮಾಜಿಕವಾಗಿ, ಕೌಟುಂಬಿಕವಾಗಿ, ಔದ್ಯಮಿಕವಾಗಿ ಒಟ್ಟಾರೆ ಹೇಳುವುದಾದಲ್ಲಿ ಜನಜೀವನದ ಎಲ್ಲ ವಲಯಗಳ ಮೇಲೆ ಕರೊನಾ ಕರಿನೆರಳು ದಟ್ಟವಾಗಿಯೇ ಚಾಚಿದೆ. ಈ ಬೃಹತ್ ತೊಂದರೆಯಿಂದ ಪಾರಾಗುವ ಬಗೆ ಹೇಗೆ ಎಂದು ವಿಶ್ವಾದ್ಯಂತದ ಎಲ್ಲ ಸರ್ಕಾರಗಳೂ ತಲೆಬಿಸಿ ಮಾಡಿಕೊಂಡಿವೆ. ಆದ್ದರಿಂದ ಕರೊನಾ ಇನ್ನೂ ವಿಪರೀತ ಪ್ರಮಾಣದಲ್ಲಿ ಪಸರಿಸದಂತೆ ನೋಡಿಕೊಳ್ಳುವಲ್ಲಿ ಜನರು ಮತ್ತು ಸರ್ಕಾರಗಳ ಹೊಣೆ ಸಮಾನವಾಗಿಯೇ ಇದೆ. ಈಗಂತೂ, ಕೆಲವೇ ನಿರ್ಬಂಧ ಹೊರತುಪಡಿಸಿ ಬಹುತೇಕ ಎಲ್ಲ ಕ್ಷೇತ್ರಗಳು ಅನ್​ಲಾಕ್ ಆಗಿವೆ, ಜನಜೀವನ ಎಂದಿನ ಸ್ಥಿತಿಗೆ ಮರಳುತ್ತಿದೆ. ಕರೊನಾ ಸಮುದಾಯಕ್ಕೆ ಹರಡಿರುವ ಈ ಹಂತದಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ. ಆದರೆ ಜನರು ಮತ್ತು ಜನಪ್ರತಿನಿಧಿಗಳ ವಲಯದಲ್ಲಿ ಕೆಲವು ಕಡೆಗಳಲ್ಲಿ ಈ ವಿಷಯವಾಗಿ ನಿರ್ಲಕ್ಷ್ಯವಹಿಸಿರುವುದು ಢಾಳಾಗಿ ಗೋಚರಿಸುತ್ತಿದೆ. ಜನಪ್ರತಿಧಿಗಳು, ರಾಜಕೀಯ ನಾಯಕರು ಮತ್ತು ಸಚಿವರು ಭಾಗವಹಿಸುವ ಅನೇಕ ಸಭೆ, ಕಾರ್ಯಕ್ರಮಗಳಲ್ಲಿ ವ್ಯಕ್ತಿಗತ ಅಂತರ, ಮಾಸ್ಕ್ ಧರಿಸುವಿಕೆಯಂತಹ ನಿಯಮ ಪಾಲನೆ ಆಗುತ್ತಿಲ್ಲ. ಇಂಥಲ್ಲಿ ಜನರು ಮೊದಲಿನ ಹಾಗೆ ಸಂದಣಿಯಾಗಿ ಸೇರುವುದು ಕಂಡುಬಂದಿದೆ. ಇನ್ನು ಜನರು ಸಹ ಅಷ್ಟೇ. ಸಾರ್ವಜನಿಕ ಪ್ರದೇಶ, ಮಾರುಕಟ್ಟೆ, ಬ್ಯಾಂಕ್ ಮುಂತಾದ ಕಡೆಗಳಲ್ಲಿ ವ್ಯಕ್ತಿಗತ ಅಂತರವನ್ನು ಸರಿಯಾಗಿ ಪಾಲಿಸುತ್ತಿಲ್ಲ ಮತ್ತು ಮಾಸ್ಕ್ ಅನ್ನೂ ಧರಿಸುತ್ತಿಲ್ಲ. ಈ ರೀತಿ ಮಾಡುತ್ತ ಹೋದರೆ ಕರೊನಾ ಇನ್ನಷ್ಟು ಹೆಚ್ಚುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದನ್ನು ಯಾರೂ ಮರೆಯಬಾರದು. ಜನಪ್ರತಿನಿಧಿಗಳು ಈ ವಿಷಯದಲ್ಲಿ ಜನರಿಗೆ ಮಾದರಿಯಾಗಬೇಕೆ ವಿನಾ ತಾವೇ ನಿಯಮ ಉಲ್ಲಂಘಿಸಿ ಟೀಕೆಗೆ ಗುರಿಯಾಗಬಾರದು. ಕರೊನಾಕ್ಕೆ ಔಷಧ ಇನ್ನೂ ದೂರದ ಸಾಧ್ಯತೆಯಾಗಿರುವಾಗ ಮುನ್ನೆಚ್ಚರಿಕೆಯೇ ಸದ್ಯಕ್ಕೆ ನಮ್ಮನ್ನು ಕಾಪಾಡಿಕೊಳ್ಳುವ ಉಪಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net