ಸಂಪಾದಕೀಯ; ಡಿಜಿಟಲ್​ ದೌರ್ಜನ್ಯಕ್ಕೆ ಕಡಿವಾಣ

 Editorial |ಸಂಪಾದಕೀಯ; ಡಿಜಿಟಲ್​ ದೌರ್ಜನ್ಯಕ್ಕೆ ಕಡಿವಾಣ
Editorial |ಸಂಪಾದಕೀಯ; ಡಿಜಿಟಲ್​ ದೌರ್ಜನ್ಯಕ್ಕೆ ಕಡಿವಾಣ
Published on
ಇಂದಿನ ಡಿಜಿಟಲ್​ ಯುಗದಲ್ಲಿ ತಂತ್ರಜ್ಞಾನವು ನಮ್ಮ ಬದುಕನ್ನು ಸುಲಭಗೊಳಿಸಿರುವುದು ಎಷ್ಟು ಸತ್ಯವೋ, ಅದು ಅಪರಾಧ ಎಸಗುವ ಸಾಧನವಾಗಿ ಬಳಕೆ ಆಗುತ್ತಿರುವುದೂ ಅಷ್ಟೇ ಸತ್ಯ. ಅದರಲ್ಲೂ ಜನರ, ಅದರಲ್ಲೂ ಪ್ರಸಿದ್ಧ ವ್ಯಕ್ತಿಗಳ ಅನುಮತಿಯಿಲ್ಲದೆ ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಇತ್ತೀಚೆಗೆ ಹೆಚ್ಚಾಗಿದೆ. ಎಷ್ಟೋ ಸಲ ಅವು ಮಾನಹಾನಿಕರ ಆಗಿರುತ್ತವೆ. ಇಂತಹ ಡಿಜಿಟಲ್​ ದೌರ್ಜನ್ಯಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹೊರಡಿಸಿರುವ ಸುತ್ತೋಲೆ ಸ್ವಾಗತಾರ್ಹ ಹಾಗೂ ಸಮಯೋಚಿತ. ಈ ಆದೇಶದ ಪ್ರಕಾರ, ಸಂಬಂಧಿಸಿದವರ ಸಮ್ಮತಿಯಿಲ್ಲದೆ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರೆಡೆ ಯಾರಾದರೂ ಹಂಚಿಕೊಂಡರೆ, ಪೊಲೀಸರು ತಕ್ಷಣವೇ ಪ್ರಥಮ ಮಾಹಿತಿ ವರದಿ (ಎಫ್​ಐಆರ್​) ದಾಖಲಿಸುವುದು ಕಡ್ಡಾಯ. ಇದು ಸಂತ್ರಸ್ತರಿಗೆ ಕಾನೂನಿನ ರಕ್ಷಣೆ ನೀಡುವಲ್ಲಿ ದೀರ್ಘಕಾಲದಿಂದ ಇದ್ದ ಒಂದು ದೊಡ್ಡ ನ್ಯೂನತೆಯನ್ನು ನಿವಾರಿಸಿದೆ.
ಪೊಲೀಸ್​ ಠಾಣೆಗಳಲ್ಲಿ ಈ ರೀತಿಯ ದೂರುಗಳು ಬಂದಾಗ, ಚಿತ್ರೀಕರಣದ ಸಮಯದಲ್ಲಿ ಸಂತ್ರಸ್ತರ ಒಪ್ಪಿಗೆ ಇತ್ತು ಎಂಬ ನೆಪವೊಡ್ಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪ್ರವೃತ್ತಿ ಇತ್ತು. ಆದರೆ, ಕಾನೂನಿನ ಮೂಲಭೂತ ತತ್ವವನ್ನು ಈ ಹೊಸ ಆದೇಶ ಸ್ಪಷ್ಟಪಡಿಸಿದೆ: ಚಿತ್ರೀಕರಣಕ್ಕೆ ನೀಡುವ ಒಪ್ಪಿಗೆಯು ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅಥವಾ ಹಂಚಿಕೊಳ್ಳಲು ನೀಡಿದ ಒಪ್ಪಿಗೆ ಅಲ್ಲ. ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಇಂತಹ ಅಪರಾಧಗಳು ಗಂಭೀರ ಸ್ವರೂಪದ್ದಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ. ದೂರುದಾರರನ್ನು ಠಾಣೆಯಿಂದ ಠಾಣೆಗೆ ಅಲೆದಾಡಿಸುವುದು ಕಿರುಕುಳವಷ್ಟೇ ಅಲ್ಲ, ಕರ್ತವ್ಯಲೋಪವೂ ಹೌದು.
ಡಿಜಿಟಲ್​ ದೌರ್ಜನ್ಯದ ಪ್ರಕರಣಗಳು ಸಂತ್ರಸ್ತರ, ವಿಶೇಷವಾಗಿ ಮಹಿಳೆಯರ ಮೇಲೆ ಬೀರುವ ಪರಿಣಾಮ ಭೀಕರವಾಗಿರುತ್ತದೆ. ಒಂದೇ ಒಂದು ಫೋಟೋ ಅಥವಾ ವಿಡಿಯೋ ಅವರ ಗೌರವ, ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧಗಳನ್ನು ಕ್ಷಣಮಾತ್ರದಲ್ಲಿ ಧೂಳೀಪಟ ಮಾಡಬಲ್ಲದು. ತೀವ್ರ ಮಾನಸಿಕ ಆಘಾತ, ಸೈಬರ್​ ಬ್ಲ್ಯಾಕ್‌ಮೇಲಿಂಗ್​ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಅವರು ಒಳಗಾಗುತ್ತಾರೆ.
ಕೇವಲ ಎಫ್​ಐಆರ್​ ದಾಖಲಿಸುವುದರಿಂದಲೇ ಈ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುವುದಿಲ್ಲ. ಸಾಮಾಜಿಕ ಜಾಲತಾಣದ ಕಂಪನಿಗಳು ತಮ್ಮ ವೇದಿಕೆಯಲ್ಲಿ ಮೂರನೇ ವ್ಯಕ್ತಿಗಳು ಪೋಸ್ಟ್​ ಮಾಡುವ ವಿಷಯಗಳಿಗೂ ತಮಗೂ ಸಂಬಂಧವಿಲ್ಲ ಎಂದು ನುಣುಚಿಕೊಳ್ಳುತ್ತವೆ. ಆದರೆ, ಇಂತಹ ದೌರ್ಜನ್ಯದ ವಿಷಯಗಳಿಂದ ಬರುವ 'ಎಂಗೇಜ್​ಮೆಂಟ್​' ಮೂಲಕ ಈ ಕಂಪನಿಗಳು ಲಾಭ ಗಳಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಸಂತ್ರಸ್ತರು ಇಂತಹ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲು ಮನವಿ ಮಾಡಿದಾಗ ಕಂಪನಿಗಳು ಸ್ಪಂದಿಸುವುದಿಲ್ಲ ಅಥವಾ ವಿಳಂಬನೀತಿ ಅನುಸರಿಸುತ್ತವೆ. ಆದ್ದರಿಂದ, ಪೊಲೀಸರು ದೂರು ಬಂದ ತಕ್ಷಣವೇ ಸಂಬಂಧಪಟ್ಟ ಜಾಲತಾಣಗಳಿಗೆ ನೋಟಿಸ್​ ನೀಡಿ, ಆ ಕಂಟೆಂಟನ್ನು ಕೂಡಲೇ ಡಿಲೀಟ್​ ಮಾಡಿಸುವ ತುರ್ತು ಕ್ರಮ ಕೈಗೊಳ್ಳಬೇಕು. ಪ್ರತಿ ನಿಮಿಷದ ವಿಳಂಬವೂ ಸಂತ್ರಸ್ತರಿಗೆ ಆಗುವ ಅನ್ಯಾಯವನ್ನು ಹೆಚ್ಚಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net