

ಅಮೆರಿಕದ ಅಧ್ಯಕ್ಷರಾಗಿ ಇತ್ತೀಚಿನ ಚುನಾವಣೆಯಲ್ಲಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಾವು ಅನುಷ್ಠಾನಕ್ಕೆ ತರಬೇಕೆಂದಿರುವ ಯೋಜನೆಗಳ ಕುರಿತು ಅವರು ಚುನಾವಣೆ ಪ್ರಚಾರದಲ್ಲಿ ಮತ್ತು ಗೆದ್ದ ನಂತರ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ‘ಕೆನಡಾ, ಮೆಕ್ಸಿಕೋ, ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ. 25ರವರೆಗೆ ತೆರಿಗೆ ಹೇರುತ್ತೇನೆ. ಈ ಕುರಿತ ಆದೇಶವನ್ನು ನಾನು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೊರಡಿಸುತ್ತೇನೆ’ ಎಂದು ಘೊಷಿಸುವ ಮೂಲಕ ಟ್ರಂಪ್ ಆ ರಾಷ್ಟ್ರಗಳಲ್ಲಿ ಸಂಚಲನ ಸೃಷ್ಟಿಸಿದರು. ಬೇರೆ ದೇಶಗಳ ಮೇಲೆ ಪರಿಣಾಮ ಬೀರುವ ಇಂತಹ ಹಲವು ಘೊಷಣೆಗಳನ್ನು ಟ್ರಂಪ್ ಮಾಡಿದ್ದಾರೆ.
ಅದರಲ್ಲಿ, ಅಕ್ರಮ ವಲಸಿಗರ ಗಡಿಪಾರಿನ ನಿರ್ಧಾರವೂ ಒಂದು. ಅಮೆರಿಕಕ್ಕೆ ಸುತ್ತಮುತ್ತಲಿನ ರಾಷ್ಟ್ರಗಳಿಂದ ಅಕ್ರಮವಾಗಿ ಪ್ರತಿದಿನವೂ ಸಾವಿರಾರು ಜನ ವಲಸೆ ಬರುತ್ತಾರೆ. ಅನಧಿಕೃತವಾಗಿ ಒಳಗೆ ನುಸುಳುತ್ತಾರೆ. ತಮ್ಮೊಂದಿಗೆ ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ತರುತ್ತಾರೆ. ಮಾನವ ಕಳ್ಳಸಾಗಾಣಿಕೆಯನ್ನೂ ಮಾಡುತ್ತಾರೆ. ಕಳಪೆ ವಸ್ತು-ಪದಾರ್ಥಗಳ ಸ್ಮಗ್ಲಿಂಗ್ ನಡೆಯುತ್ತಿದೆ. ಇದು ಕಳೆದ ಕೆಲವು ವರ್ಷಗಳಿಂದ ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲಿನ ಮಾದಕ ವ್ಯಸನಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿದೆ. ಅಪರಾಧ ಪ್ರಮಾಣ ಹೆಚ್ಚಿದೆ. ಅಧ್ಯಕ್ಷ ಜೋ ಬೈಡೆನ್ 2023ರಲ್ಲಿ ‘ಕಸ್ಟಮ್್ಸ ಆಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಪಡೆ’ಯನ್ನು ರೂಪಿಸಿ, ನಿರ್ದಿಷ್ಟ ನಿಯಮಗಳನ್ನು ಜಾರಿಗೊಳಿಸಿದರೂ ಅಕ್ರಮ ವಲಸೆಯನ್ನು ಪೂರ್ಣಪ್ರಮಾಣದಲ್ಲಿ ತಡೆಯಲಾಗಲಿಲ್ಲ. ಇದೀಗ ಟ್ರಂಪ್ ಆ ಸಿಬಿಪಿಯನ್ನೂ ರದ್ದುಪಡಿಸಿ, ಅಕ್ರಮ ವಲಸಿಗರನ್ನೆಲ್ಲ ದೇಶದಿಂದಲೇ ಹೊರಹಾಕುವುದಾಗಿ ಗರ್ಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ವಿಶ್ವವಿದ್ಯಾಲಯಗಳು ಭಾರತೀಯ ಮತ್ತು ಇತರ ದೇಶಗಳ ವಿದ್ಯಾರ್ಥಿಗಳಿಗೆ ವಿಚಿತ್ರ ಮತ್ತು ಆತಂಕಕಾರಿಯಾದ ಸಲಹೆಯೊಂದನ್ನು ನೀಡಿವೆ.
‘ವಿದ್ಯಾರ್ಥಿಗಳ ಬಳಿ ಅಧಿಕೃತ ವೀಸಾ ಇರುವುದೇನೋ ನಿಜ. ಅಕ್ರಮ ವಲಸೆಗಾರರನ್ನು ಹೊರಹಾಕುವ ಟ್ರಂಪ್ ಹೇಳಿಕೆಯು ವಿದ್ಯಾರ್ಥಿಗಳಿಗೆ ನೇರವಾಗಿ ಸಂಬಂಧಿಸಿದ್ದಲ್ಲವಾದರೂ ಮುಂದೆ ಯಾವ ರೀತಿಯ ಸಮಸ್ಯೆ ಉದ್ಭವಿಸಬಹುದೆಂಬುದನ್ನು ಊಹಿಸಲಾಗದು. ಹಾಗಾಗಿ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲೇ, ಅಂದರೆ ಜನವರಿಯೊಳಗೇ ನೀವು ನಿಮ್ಮ ದೇಶಕ್ಕೆ ಮರಳಿ ಹೋಗಿ’ ಎಂದು ವಿಶ್ವವಿದ್ಯಾಲಯಗಳು ಲಿಖಿತ ಸಲಹೆ ನೀಡಿವೆ. ಇದು ಎಲ್ಲ ರಾಷ್ಟ್ರಗಳ ವಿದ್ಯಾರ್ಥಿಗಳಂತೆ, ಭಾರತೀಯ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪಾಲಕರಲ್ಲಿಯೂ ಸಾಕಷ್ಟು ಆತಂಕ ಮೂಡಿಸಿದೆ. ಅಮೆರಿಕದಲ್ಲಿ ಚೀನಾಕ್ಕಿಂತ ಭಾರತದ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿದೆ.
ಚೀನಾದ ಸುಮಾರು 2.7 ಲಕ್ಷ ವಿದ್ಯಾರ್ಥಿಗಳಿದ್ದರೆ, ಭಾರತದ 3.3 ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದಾರೆ. ವಿಶ್ವವಿದ್ಯಾಲಯಗಳ ಕ್ರಮದಿಂದಾಗಿ ಅವರೆಲ್ಲರ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುತ್ತದೆ. ಜೀವನದ ಪ್ರಮುಖ ಕಾಲಘಟ್ಟದ ಕೆಲವಾರು ವರ್ಷಗಳು ಹಾಳಾಗುವ ಸಂಭವವೂ ಇರುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕ ಸರ್ಕಾರದೊಂದಿಗೆ ರ್ಚಚಿಸಿ, ಈ ವಿಷಯದಲ್ಲಿ ಸ್ಪಷ್ಟತೆ ತರಬೇಕು. ತಲೆ ಮೇಲಿನ ತೂಗುಗತ್ತಿಯಿಂದ ವಿದ್ಯಾರ್ಥಿಗಳನ್ನು ಪಾರು ಮಾಡಬೇಕು.