

ರಾಜ್ಯದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ ಬೀದರ್ ಒಂದನ್ನು ಹೊರತುಪಡಿಸಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟದ ಉಪ ಸಮಿತಿ ಒಪ್ಪಿಗೆ ನೀಡಿರುವುದು ರಾಜ್ಯದ ಶೈಕ್ಷಣಿಕ ವಲಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.
ರಾಜ್ಯದಲ್ಲಿರುವ 32 ಸರ್ಕಾರಿ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಪರಾಮಶಿಸಿ ಸೂಕ್ತ ಶಿಫಾರಸುಗಳನ್ನು ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಚಿವ ಸಂಪುಟದ ಉಪ ಸಮಿತಿಯು ಈ ವರದಿ ನೀಡಿದ ಬೆನ್ನಲ್ಲೇ ಶಿಕ್ಷಣ ತಜ್ಞರು ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯ ಹೇಗೆ ಎಂದು ಆತಂಕಿತರಾಗಿದ್ದಾರೆ, ವಿದ್ಯಾರ್ಥಿಗಳ ಪಾಲಕರಲ್ಲೂ ಚಿಂತೆ ಮಡುಗಟ್ಟಿದೆ.
ಮುಖ್ಯವಾಗಿ, ಈ ವಿಶ್ವವಿದ್ಯಾಲಯಗಳು ರಾಜ್ಯದ ಹಿಂದುಳಿದ ಹಾಗೂ ಶೈಕ್ಷಣಿಕ ಸುಧಾರಣೆಗೆ ಕಾದಿರುವ ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲಿವೆ ಎಂಬುದು ಗಮನಾರ್ಹ. ಒಂದು ವೇಳೆ, ಈ ವಿವಿಗಳನ್ನು ಮುಚ್ಚಲು ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಲ್ಲಿ ಬಡ, ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಸರ್ಕಾರವೇ ಕಸಿದುಕೊಂಡಂತಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಎಲ್ಲಿ ತೆರಳಬೇಕು? ಅವರದ್ದಲ್ಲದ ತಪ್ಪಿಗೆ ಯಾಕೆ ಶಿಕ್ಷೆ ಅನುಭವಿಸಬೇಕು?
ಅಷ್ಟಕ್ಕೂ ಈ ಪ್ರಕರಣದಲ್ಲಿ ಹಲವು ಒಳಸುಳಿಗಳು ಇವೆ. 10 ಹೊಸ ವಿವಿಗಳ ಪೈಕಿ ಬಹುತೇಕ ಬಿಜೆಪಿ ಆಡಳಿತಾವಧಿಯಲ್ಲಿ ಆರಂಭ ಗೊಂಡಿವೆ. ಆಗಿನ ಸರ್ಕಾರ ಕೂಡ ತರಾತುರಿಯಲ್ಲಿ ವಿವಿ ಆರಂಭಿಸಿ, ಅದಕ್ಕೆ ಅತ್ಯಲ್ಪ ಅನುದಾನ ಒದಗಿಸಿತ್ತು. ಈಗಿನ ಸರ್ಕಾರವಂತೂ ಕಳೆದ ಎರಡು ವರ್ಷಗಳಿಂದ 9 ವಿವಿಗಳಿಗೆ ಸಂಬಳ, ಭತ್ಯೆ ಹೊರತುಪಡಿಸಿದರೆ ಯಾವುದೇ ಅನುದಾನ ನೀಡಿಲ್ಲ ಎಂಬುದು ಆಘಾತಕಾರಿ ಸಂಗತಿ. ‘ಈ ವಿವಿಗಳನ್ನು ನಡೆಸುವುದು ಕಾರ್ಯಸಾಧ್ಯ ಅಲ್ಲ’ ಎಂದು ಸಚಿವ ಸಂಪುಟದ ಉಪಸಮಿತಿ ಹೇಳಿದೆ. ಆದರೆ, ‘ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ವಿವಿಗಳನ್ನು ಮುಚ್ಚಲು ಅದೇನು ಅಂಗಡಿಯೇ, ಕಂಪನಿಯೇ?’ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಎಲ್ಲವನ್ನೂ ಆದಾಯದ ದೃಷ್ಟಿಯಿಂದ ನೋಡುವುದು ಸರಿಯಲ್ಲ.
ಶಿಕ್ಷಣ ಕ್ಷೇತ್ರದ ವಿಷಯದಲ್ಲೂ ರಾಜಕೀಯ ಮತ್ತು ಅದಕ್ಕೆ ಸಂಬಂಧಿಸಿದ ಹಿತಾಸಕ್ತಿ ನುಸುಳಿರುವುದು ಅಕ್ಷಮ್ಯ. 9 ವಿವಿಗಳಿಗೆ ಬೀಗ ಹಾಕಲು ಸರ್ಕಾರ ಚಿಂತನೆ ನಡೆಸಿರುವುದು, ಈ ಬಗ್ಗೆ ಸಚಿವರ, ಅಧಿಕಾರಿಗಳ ಗೊಂದಲದ ಹೇಳಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದೆ. ವಿವಿಗಳ ಆಡಳಿತ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆಯಲ್ಲಿ ಲೋಪಗಳು ಇದ್ದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಂಡು ಶೈಕ್ಷಣಿಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಿ.
ಅದನ್ನು ಬಿಟ್ಟು ವಿಶ್ವವಿದ್ಯಾಲಯಗಳನ್ನೇ ಮುಚ್ಚುತ್ತೇವೆ ಎಂದು ಹೊರಡುವುದು ಶೈಕ್ಷಣಿಕ ಸುಧಾರಣೆಗಳ ವಿಷಯದಲ್ಲಿ ಹಿಂದಡಿ ಇಟ್ಟಂತೆಯೇ ಸರಿ. ಆದ್ದರಿಂದ, ಸರ್ಕಾರ ಆದಷ್ಟು ಬೇಗ ಈ ಪ್ರಹಸನಕ್ಕೆ ಅಂತಿಮ ತೆರೆ ಎಳೆಯಲಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸೂಕ್ತವಾದ ನಿರ್ಣಯವನ್ನು ಕೈಗೊಳ್ಳಲಿ.