ಸಂಪಾದಕೀಯ: ಗೊಂದಲ ನಿವಾರಿಸಿ

edp
Published on

ವೈದ್ಯಕೀಯ, ದಂತವೈದ್ಯಕೀಯ ಮತ್ತು ಇತರ ಕೆಲವು ಕೋರ್ಸ್​ಗಳ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಣಯಿಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿ) ಅಥವಾ ನೀಟ್ ಪರೀಕ್ಷೆ ಈ ಬಾರಿ ಗೊಂದಲದ ಗೂಡಾಗಿದ್ದು, ಹಲವು ತಪು್ಪಗಳು ನಡೆದಿವೆ. ಆದರೆ, ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವುದು ಇಡಿಯಾಗಿ ಪರೀಕ್ಷಾ ವ್ಯವಸ್ಥೆಯ ವೈಫಲ್ಯವಲ್ಲ ಎಂದು ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ತಂಡ ಅಭಿಪ್ರಾಯ ಪಟ್ಟಿದೆ. ‘ಇದೊಂದು ಸಂಘಟಿತ ಗ್ಯಾಂಗ್ ನಡೆಸಿದ ಕೃತ್ಯ ಕೂಡ ಅಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಸೀಮಿತವಾಗಿದೆ ಹಾಗೂ ಹಗರಣದಲ್ಲಿ ವೈಯಕ್ತಿಕ ಪ್ರಕರಣಗಳಷ್ಟೇ ಒಳಗೊಂಡಿವೆ’ ಎಂದು ಸಿಬಿಐ ಮೂಲಗಳು ಹೇಳಿವೆ. ಈ ಕುರಿತ ವಿಸõತ ವರದಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಸಿಬಿಐ, ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಪಿತೂರಿಯೊಂದರ ಭಾಗವಾಗಿದೆ ಎಂದೂ ಹೇಳಿದೆ. ಸಿಬಿಐ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದೆ.

ಇದೆಲ್ಲವೂ ತನಿಖೆಯ ಭಾಗವೇನೋ ಸರಿ. ಆದರೆ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್​ಟಿಎ) ಮಾಡಿದ ಎಡವಟ್ಟುಗಳಿಗೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಪರೀಕ್ಷೆ ನಡೆಸುವಲ್ಲಿ ‘ಶೇಕಡ 0.001’ರಷ್ಟು ನಿರ್ಲಕ್ಷ್ಯ ತೋರಿದ್ದರೂ ಅದನ್ನು ಕಠಿಣವಾಗಿ ನಿರ್ವಹಿಸಬೇಕೆಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳಷ್ಟೇ ಎನ್​ಟಿಎಗೆ ಚಾಟಿ ಬೀಸಿತ್ತು. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನ ಮುಂದಿನ ಹಂತಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಭವಿಷ್ಯದ ಕನಸುಗಳನ್ನು ಇರಿಸಿಕೊಂಡು, ಸಾಕಷ್ಟು ಶ್ರಮ ಹಾಕಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮುಂದಿನ ದಾರಿ ಏನು ಎಂದು ತಿಳಿಯದೆ ಚಿಂತಾಕ್ರಾಂತರಾಗಿದ್ದಾರೆ. ನೀಟ್ ಪರೀಕ್ಷೆಯನ್ನು 24 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಒಂದು ವೇಳೆ ಪರೀಕ್ಷೆಯೇ ರದ್ದಾದರೆ ಹೇಗೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಪರೀಕ್ಷೆ ಮುಗಿದು ಸಾಕಷ್ಟು ಅವಧಿ ಕಳೆದಿರುವುದರಿಂದ ಪ್ರವೇಶ ಪ್ರಕ್ರಿಯೆ ಆರಂಭದ ನಿರೀಕ್ಷೆಯಲ್ಲಿದ್ದಾರೆ. ಸಿಬಿಐ ತನ್ನ ವರದಿಯೇನೋ ಸಲ್ಲಿಸಿದೆ. ಆದರೆ, ಸುಪ್ರೀಂ ಕೋರ್ಟ್ ಆ ವರದಿಯನ್ನು ಪರಾಮಶಿಸಬೇಕು, ಅನುಮಾನಗಳಿದ್ದಲ್ಲಿ ಹೆಚ್ಚಿನ ವಿಚಾರಣೆ ನಡೆಸಬೇಕು. ಇದೆಲ್ಲ ಪ್ರಕ್ರಿಯೆ ಮುಗಿದು ಅಂತಿಮ ತೀರ್ಪು ಬರಲು ತುಂಬ ಸಮಯ ಬೇಕಾಗಬಹುದು, ಇದರಿಂದ ತಮ್ಮ ಮುಂದಿನ ಶೈಕ್ಷಣಿಕ ಬದುಕಿಗೆ ತೊಡಕಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳಿಗೆ ಕಾಡುತ್ತಿದೆ. ಇದು ಸಹಜ ಕೂಡ ಹೌದು. ಏಕೆಂದರೆ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಸಿದ್ಧರಾಗಲು ಸಾಕಷ್ಟು ಸಮಯ, ಶ್ರಮ, ಹಣವನ್ನು ವಿನಿಯೋಗಿಸಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಯಾವುದೇ ಕೋಚಿಂಗ್ ಪಡೆಯದೆ ತಿಂಗಳುಗಳ ಕಾಲ ತಾವಾಗಿಯೇ ಅಧ್ಯಯನ ನಡೆಸಿರುತ್ತಾರೆ. ಅವರು ಎರಡನೆಯ ಬಾರಿ ಪರೀಕ್ಷೆ ಬರೆಯುವಂಥ ಸ್ಥಿತಿ ಸೃಷ್ಟಿಯಾದರೆ, ಅವರ ಮಾನಸಿಕ ತೊಳಲಾಟಕ್ಕೆ ಯಾರು ಹೊಣೆ? ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಏಕೆ ಶಿಕ್ಷೆ ಅನುಭವಿಸಬೇಕು? ನೀಟ್ ಪರೀಕ್ಷೆಯನ್ನು ರದ್ದುಪಡಿಸುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಈ ರಾಜಕೀಯ ಬೆಳವಣಿಗೆಗಳು ಏನೇ ಇದ್ದರೂ, ಲಕ್ಷಾಂತರ ವಿದ್ಯಾರ್ಥಿಗಳ ಹಿತವನ್ನು ಕಾಪಾಡುವುದು, ಅವರ ಭವಿಷ್ಯವನ್ನು ಗಮನದಲ್ಲಿ ಇರಿಸಿಕೊಂಡು ಈ ವಿವಾದವನ್ನು ತುರ್ತಾಗಿ ಬಗೆಹರಿಸುವುದು ಈಗಿನ ಆದ್ಯತೆಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net